ಕನ್ನಡದ ನಿಜ ವಾರಸುದಾರ ಡಾ. ಎಂ.ಎಂ. ಕಲಬುರಗಿ: ಎಸ್. ದಿವಾಕರ ಅಭಿಮತ

0
127

ಕಲಬುರಗಿ: ವಿಚಾರವಾದಿ ಡಾ.ಎಂ.ಎಂ.ಕಲಬುರಗಿ ಅವರು ಸತ್ಯ, ಪ್ರಾಮಾಣಿಕತೆಯ ಪ್ರತೀಕರಾಗಿದ್ದರು. ಸಮಾಜದಲ್ಲಿನ ಗೊಡ್ಡು ಸಂಪ್ರದಾಯಗಳನ್ನು ಹೋಗಲಾಡಿಸಿ ಹೊಸ ಚಿಂತನೆ ಮೂಡಿಸಲಿಕ್ಕೆ ಹೊರಟವರಾಗಿದ್ದರು ಎಂದು ಬೆಳಗಾವಿ ರಾಜ್ಯ ಲೆಕ್ಕಪತ್ರ ಇಲಾಖೆಯ ಅಪರ ನಿರ್ದೇಶಕ ಎಸ್.ದಿವಾಕರ ಅಭಿಪ್ರಾಯಪಟ್ಟರು.

ಡಾ. ಎಂ.ಎಂ.ಕಲಬುರಗಿ ವಿಚಾರ ವೇದಿಕೆ ವತಿಯಿಂದ ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ‘ಡಾ.ಎಂ.ಎಂ.ಕಲಬುರಗಿ ಒಂದು ಸಂಸ್ಮರಣೆ’  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇವನಾರವ ಇವನಾರವ ಇವನಾರವ ಎನ್ನದೇ ಇವನಮ್ಮವ ಇವನಮ್ಮವ ಇವನಮ್ಮವ ಎಂದು ಹೇಳುವ ಮೂಲಕ ಸಮಾಜದ ಸರ್ವರನ್ನು ಅಪ್ಪಿಕೊಂಡವರು 12ನೇ ಶತಮಾನದ ಬಸವಾದಿ ಶರಣರಾಗಿದ್ದಾರೆ. ಅಂಥ ಶರಣತತ್ವವನ್ನು ಕಲಬುರಗಿಯವರು ತಮ್ಮ ಬದುಕಿನಲ್ಲಿ ಚಾಚೂ ತಪ್ಪದೇ ಪಾಲಿಸಿ, ಇಂದಿನ ಸಮಾಜಕ್ಕೆ ಆದರ್ಶ ಪ್ರಾಯವಾದ ವ್ಯಕ್ತಿತ್ವ ರೂಪಿಸಿಕೊಂಡಿದ್ದರು ಎಂದು ತಿಳಿಸಿದರು.

Contact Your\'s Advertisement; 9902492681

ಡಾ. ಕಲಬುರಗಿ ಒಬ್ಬ ವ್ಯಕ್ತಿ ಅಲ್ಲ, ಬದಲಾಗಿ ಶರಣತತ್ವದ ನಿಜವಾದ ವಾರಸುದಾರರಾಗಿದ್ದರು. ಅವರ ಸಾವಿನಿಂದ ಸಾಹಿತ್ಯಕ್ಷೇತ್ರದ ಸತ್ಯ ಮಾಯವಾಗಿದೆ ಎಂದು ವಿವರಿಸಿದರು.

ಅನುಭಾವ ನೀಡಿದ ಸರಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಕಲ್ಯಾಣರಾವ ಜಿ.ಪಾಟೀಲ, ಡಾ. ಕಲಬುರಗಿ ಅವರು ಈ ಶತಮಾನ ಕಂಡ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿದ್ದು, ಸಂಶೋಧನೆ, ಸಂಪಾದನೆ, ಶಾಸನ, ಹಳೆಗನ್ನಡ, ವಚನ ಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಕಲಬುರಗಿ ಅವರು ಲೇಖಕರಾಗಿ, ಪ್ರಾಧ್ಯಾಪಕರಾಗಿ, ಕುಲಪತಿಗಳಾಗಿ ಸೇವೆ ಸಲ್ಲಿಸಿ ಅವಿಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೇಖಕಿ ಡಾ.ವಿಜಯಲಕ್ಷ್ಮೀ ಕೋಸಗಿ, ಶರಣ ಚಿಂತಕಿ ನಳಿನಿ ಮಹಾಗಾಂವಕರ್ ಮಾತನಾಡಿದರು.

ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ನಾನು ಬದುಕಿರುವುದು ‘ಬಸವಣ್ಣ ಮತ್ತು ಕನ್ನಡಕ್ಕಾಗಿ’ ಎಂದು ಹೇಳಿದ್ದ ಕಲಬುರಗಿ ಸಾವನ್ನಪ್ಪಿರಬಹುದು. ಆದರೆ ಅವರು ಬಿತ್ತಿ ಹೋದ ವೈಚಾರಿಕೆತೆಗೆ ಮಾತ್ರ ಸಾವಿಲ್ಲ. ಒಬ್ಬ ಕಲಬುರಗಿ ಸಾವನ್ನಪ್ಪಿರಬಹುದು. ಆದರೆ ಇಂದು ದೇಶಾದ್ತಂತ ಸಾವಿರಾರು ಕಲಬುರಗಿ ಹುಟ್ಟಿದ್ದಾರೆ ಎಂದು ಅವರೊಂದಿಗಿನ ತಮ್ಮ ಹಾಗೂ ಕುಟುಂಬದ ಒಡನಾಟವನ್ನು ಸ್ಮರಿಸಿದರು. ಶರಣ ಚಿಂತಕ ಭೀಮಾಶಂಕರ ಉಪ್ಪಿನ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ವೇದಿಕೆ ಮೇಲಿದ್ದರು.

ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಟಿ.ವ್ಹಿ.ಅಡಿವೇಶ ಅಧ್ಯಕ್ಷತೆ ವಹಿಸಿದ್ದರು.ಪ್ರ ಮುಖರಾದ ರವೀಂದ್ರ ಶಾಬಾದಿ, ಕುಪೇಂದ್ರ ಪಾಟೀಲ, ಬಿ.ಎಂ.ಪಾಟೀಲ ಕಲ್ಲೂರ, ಅಯ್ಯಣ್ಣಗೌಡ ಪಾಟೀಲ, ಶಿವಶರಣ ದೇಗಾಂವ, ಶಶಿಕಾಂತ ಪಸಾರ, ಸಂಗಯ್ಯ ಹಳ್ಳದಮಠ, ವೀರೇಶ ಕಲಕೋರಿ, ಹಣಮಂತರಾವ ಪಾಟೀಲ ಕುಸನೂರ, ಪ್ರಭಾವತಿ ಕಲಬುರಗಿ, ಮಹಾಂತೇಶ ಕಲಬುರಗಿ, ಶಿವಕುಮಾರ ಬಿದರಿ, ಸುನಿಲ ಹುಡಗಿ, ಹೆಚ್.ಬಿ.ತೀರ್ಥೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here