ಕಲಬುರಗಿ: ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಅವರು ಭಾನುವಾರ ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ
ಗಂಟಲು ಮಾರಿ ಸೊಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ಜಿಮ್ಸ್ ವಸತಿ ನಿಲಯದ ವಿದ್ಯಾರ್ಥಿನಿಯನ್ನು ಭೇಟಿಯಾಗಿ ಅವರ ಆರೋಗ್ಯ ಕ್ಷೇಮ ವಿಚಾರಿಸಿದರು.
ಸುಮಾರು 21 ವಿದ್ಯಾರ್ಥಿಗಳು ಗಂಟಲು ಮಾರಿ ಸೊಂಕಿನಿಂದ ಶುಕ್ರವಾರ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಉಮೇಶ ಜಾಧವ ಅವರು ಗಂಟಲು ಮಾರಿ ಸೊಂಕು ಇನ್ನಿತರರಿಗೆ ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿನಿಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಅವರಿಗೆ ಸೂಚಿಸಿದರು.
ಡಾ.ಶಿವಕುಮಾರ ಮಾತನಾಡಿ ಶುಕ್ರವಾರ ಈ ವಿದ್ಯಾರ್ಥಿಗಳು ಜ್ವರ, ಗಂಟಲು ನೋವಿನಿಂದ ಅಸ್ಪತ್ರೆಗೆ ದಾಖಲಾಗಿದ್ದು, ಪರೀಕ್ಷಿಸಿದ ನಂತರ ಡಿಫ್ತಿರಿಯಾ ಸೊಂಕು ಇರುವುದು ಖಾತ್ರಿಯಾಗಿದೆ. ಐಸೋಲೇಷನ್ಸ್ ವಾರ್ಡನಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲವು ನಮ್ಮ ನಿಯಂತ್ರಣದಲ್ಲಿದೆ ಎಂದ ಅವರು ಆಸ್ಪತ್ರೆಯಲ್ಲಿನೀರಿನ ಸಮಸ್ಯೆ ಇದ್ದು, ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಸಂಸದರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಅಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಸುರಗಾಳಿ, ಆರ್.ಎಂ.ಓ ರಾಜಶೇಖರ ಮಾಲಿ ಸೇರಿದಂತೆ ಆಸ್ಪತ್ರೆ ಅಧಿಕಾರಿಗಳು ಇದ್ದರು.