ಕಲಬುರಗಿ : ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ) ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಡಿ. 28 ರಂದು ಸಾಯಂಕಾಲ 5 ಗಂಟೆಗೆ ನಗರದ ರೈಲು ನಿಲ್ದಾಣದ ಎದುರುಗಡೆ ರೈಲು ನಿಲ್ದಾಣಗಳಿಗೆ ಮೂಲ ಸೌಕರ್ಯ ಒದಗಿಸಲು ಮತ್ತು ರೈಲ್ವೆ ಖಾಸಗೀಕರಣ ತಡೆಗಟ್ಟಲು ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವದೆಂದು ಎಸ್ ಯು ಸಿ ಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್. ವಿ. ದಿವಾಕರ್ ಅವರು ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಕಲಬುರ್ಗಿಯಿಂದ ಬೆಂಗಳೂರಿಗೆ ಒಂದು ಫಾಸ್ಟ್ ಪ್ಯಾಸೆಂಜರ್ ರೈಲು ಆರಂಭಿಸಬೇಕು ಮತ್ತು ಕಲ್ಬುರ್ಗಿ ವಿಭಾಗೀಯ ಕೇಂದ್ರದ ಕಾರ್ಯಗಳನ್ನು ಕೂಡಲೇ ಕೈಗೊಳ್ಳಬೇಕು’. ‘ಕೊರೋನ ಕ್ಕಿಂತ ಮುಂಚೆ ನಿಲ್ಲಿಸುತ್ತಿದ್ದ ಎಲ್ಲ ರೈಲುಗಳನ್ನು ಶಾಹಬಾದ್ ರೈಲು ನಿಲ್ದಾಣದಲ್ಲಿ ನಿಲ್ಲಿಸಬೇಕು’ ಎಂದರು.
‘ಪ್ಯಾಸೆಂಜರ್ ರೈಲುಗಳಿಗೆ ಎಕ್ಸ್ಪ್ರೆಸ್ ರೈಲುಗಳ ದರ ತೆಗೆದುಕೊಳ್ಳುತ್ತಿರುವುದನ್ನು ತಕ್ಷಣವೇ ತಡೆಗಟ್ಟಬೇಕು’. ‘ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರೈಲು ನಿಲ್ದಾಣಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಉದ್ಯಾನ ಎಕ್ಸ್ಪ್ರೆಸ್ ಸೋಲಾಪುರ್- ಹಾಸನ ಎಕ್ಸ್ಪ್ರೆಸ್ ಹಾಗೂ ಬಾಗಲಕೋಟ ಯಶವಂತಪುರ ಬಸವ ಎಕ್ಸ್ ಪ್ರೆಸ್ ಹಾಗೂ ಇನ್ನಿತರ ಎಕ್ಸ್ಪ್ರೆಸ್ ಗಳಿಗೆ ಸಾಮಾನ್ಯ ಬೋಗಿಗಳನ್ನು ಹೆಚ್ಚಿಸಿಬೇಕು ಮತ್ತು ಈಗಾಗಲೇ ವಾರಕ್ಕೆ ಒಂದು ಓಡಿಸುವ ಬೀದರ ಕಲಬುರ್ಗಿ ಮಾರ್ಗವಾಗಿ ಯಶವಂತಪುರ ಗೆ ಹೊರಡುವ ರೈಲನ್ನು ಪ್ರತಿದಿನ ಓಡಿಸಬೇಕು ಮತ್ತು ರೈಲ್ವೆ ಖಾಸಗೀಕರಣ ತಡೆಗಟ್ಟಬೇಕು’ ಎಂಬ ವಿವಿಧ ಬೇಡಿಕೆಗಳನ್ನು ಪರಿಹರಿಸಲು ಬೃಹತ್ ಪ್ರತಿಭಟನೆ ನಡೆಸಿ, ನಂತರ ನಿಲ್ದಾಣದ ಪ್ರಬಂಧಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಗುವುದು ಎಂದರು.
ಈ ಪ್ರತಿಭಟನೆಯಲ್ಲಿ ನಗರದ ನಾಗರಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ರೈತರು, ಕಾರ್ಮಿಕರು ಹಾಗೂ ವಿಶೇಷವಾಗಿ ರೈಲ್ವೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷವು ಜಿಲ್ಲೆಯ ಎಲ್ಲಾ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ಣ ಎಸ್.ಇಬ್ರಾಹಿಂಪೂರ, ಎಸ್.ಎಂ ಶರ್ಮಾ, ಜಗನ್ನಾಥ ಎಸ್.ಎಚ್. ಹಾಗೂ ವಿಶ್ವನಾಥ ಭೀಮಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.