ಕಲಬುರಗಿ: ಜಾತಿ, ಧರ್ಮ, ಮತ, ಸಾಮಾಜಿಕ ಅಂತಸ್ತು ಸೇರಿದಂತೆ ಮುಂತಾದ ಅಂಶಗಳ ಆಧಾರದ ಮೇಲೆ ಮೇಲು-ಕೀಳು ಮಾಡಬಾರದು. ವಿಶ್ವದ ಎಲ್ಲರು ಒಂದೇ ಎಂದು ವಿಶ್ವ ಭ್ರಾತೃತ್ವ, ಮಾನವತೆಯ ಸಂದೇಶ ಜಗತ್ತಿಗೆ ಸಾರಿದ ಮಹಾಕವಿ, ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್.ಹೇಳಿದರು.
ಆಳಂದ ತಾಲೂಕಿನ ಸುಂಟನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನಾಚರಣೆ ಪ್ರಯುಕ್ತ ಗುರುವಾರ ಏರ್ಪಡಿಸಲಾಗಿದ್ದ ‘ಕುವೆಂಪು ಅವರ ವಿಶ್ವಭ್ರಾತೃತ್ವದ ಪ್ರಜ್ಞೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಕನ್ನಡ ನಾಡು-ನುಡಿಗೆ ಅವಿಸ್ಮರಣೀಯವಾದ ಕೊಡುಗೆಯನ್ನು ನೀಡಿದ್ದಾರೆ. ನೈಜ, ಅನುಭವ, ವೈಚಾರಿಕತೆ, ಸತ್ವವುಳ್ಳ ಸಾಹಿತ್ಯವನ್ನು ರಚಿಸಿ ಕನ್ನಡ ಸಾರಸ್ವತ ಲೋಕಕವನ್ನು ಶ್ರೀಮಂತಗೊಳಿಸಿದ್ದಾರೆ. ನಾಡಗೀತೆ, ರೈತಗೀತೆ ರಚಿಸಿದ ಅವರು ನಾಡಿಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟಿದ್ದಾರೆ. ಕುವೆಂಪು ಕನ್ನಡ ಸಾಹಿತ್ಯ ಲೋಕದ ಧೃವತಾರೆಯಾಗಿದ್ದಾರೆ. ಕುವೆಂಪು ಅವರ ಜನ್ಮದಿನವನ್ನು ‘ವಿಶ್ವಮಾನವ ದಿನಾಚರಣೆ’ಯನ್ನಾಗಿ ಆಚರಿಸುತ್ತಿರುವುದು ಅವರು ವಿಶ್ವಭ್ರಾತೃತ್ವ, ಮಾನವೀಯತೆಗೆ ನೀಡಿದ ಕೊಡುಗೆಯ ಸಂಕೇತವಾಗಿ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಶಾಲೆಯ ಶಿಕ್ಷಕರಾದ ಉಮಾದೇವಿ ಬಿರಾದಾರ, ಕಲಾವತಿ ಕಿಟ್ಟಾ, ರಾಜೇಶ್ವರಿ ಕುಲಕರ್ಣಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರಾದ ಶ್ರೇಯಸಿ, ಬಸಮ್ಮ ಪ್ರಾರ್ಥಿಸಿದರು. ಚೈತ್ರಾ ಸ್ವಾಗತಿಸಿದರು. ಶಿಕ್ಷಕ ಸೈಯದ್‍ಸಾಬ್ ಮಾಡ್ಯಾಳ್ ನಿರೂಪಣೆ ಮಾಡಿ, ಕೊನೆಯಲ್ಲಿ ವಂದಿಸಿದರು.