ಕಲಬುರಗಿ: 12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯದ ತಿರುಳನ್ನು ಯುವ ಸಮುದಾಯಕ್ಕೆ ತಲುಪಿಸಿ ಸಮಾಜಮುಖಿ ಚಿಂತನೆಯತ್ತ ಕರೆದೊಯ್ಯುವ ಪ್ರಯತ್ನದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ವಚನ ಸಾಹಿತ್ಯ ಸಮ್ಮೇಳನವನ್ನು ನಗರದ ಕನ್ನಡ ಭವನದಲ್ಲಿ ಜನವರಿ 19 ರಂದು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ರವಿವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ತೇಗಲತಿಪ್ಪಿ ಅವರು, ಇಂದಿನ ವೈಜ್ಞಾನಿಕ ಯುಗದಲ್ಲಿ ಮಾನವ ಅನ್ಯಗ್ರಹದ ಮೇಲೆ ಕಾಲಿಟ್ಟರೂ ಮನದ ಗ್ರಹಗತಿ ಮಾಯವಾಗಿಲ್ಲ. ಮೂಢನಂಬಿಕೆ, ಕಂದಾಚಾರಗಳು ಕಂಡು ಬರುತ್ತಲೇ ಇವೆ. ಹಾಗಾಗಿ, ವೈಚಾರಿಕ, ವೈಜ್ಞಾನಿಕ ಚಿಮತನೆಯನ್ನು ಜನಮನದಲ್ಲಿ ಮೂಡಿಸಲು ಪರಿಷತ್ತು ಈ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಏರ್ಪಡಿಸಲು ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳಲು ಚರ್ಚಿಸಲಾಗಿದೆ ಎಂದ ಅವರು, ಇಂದು ಬರಡಾಗುತ್ತಿರುವ ನಮ್ಮ ಹೃದಯ ಎಂಬ ತೋಟದಲ್ಲಿ ಪ್ರೀತಿ-ವಿಶ್ವಾಸವೆಂಬ ಸಸಿ ನೆಟ್ಟು ನೆಮ್ಮದಿಯ ತಂಗಾಳಿ ಸೂಸುವತ್ತಾ ಹೆಜ್ಜೆ ಹಾಕುತ್ತಲಿರುವ ಪರಿಷತ್ತು ಈ ರೀತಿಯಾದ ಹೊಸ ಆಲೋಚನೆಗಳಿಂದ ಕೂಡಿರುವ ಕಾರ್ಯಕ್ರಮಗಳು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ವಚನ ಸಾಹಿತ್ಯ ಸಮ್ಮೇಳನದಂಗವಾಗಿ ಮಕ್ಕಳು ಮತ್ತು ಯುವಕರಿಗಾಗಿ ವಚನಾಧರಿತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲೂ ಕೂಡ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ಸ್ವಾಗತ ಸಮಿತಿಯೊಂದನ್ನು ರಚಿಸಲು ಮತ್ತು ಸಮ್ಮೇಳನಾಧ್ಯಕ್ಷರ ಆಯ್ಕೆಯೂ ಸಹ ಇನ್ನೆರಡು ದಿನದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಆಯೋಜಿಸಲು ಉದ್ದೇಶಿಸಲಾಗಿರುವ ವಚನ ಸಾಹಿತ್ಯ ಸಮ್ಮೇಳನವನ್ನು ಸಾಮಾಜಿಕ ಜಾತ್ರೆಯನ್ನಾಗಿಸದೇ, ಅನುಭವ ಮಂಟಪದ ರೀತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಪ್ರಮುಖರಾದ ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಲಿಂಗ ಜಿ ಬಾಳಿ, ಧರ್ಮಣ್ಣಾ ಹೆಚ್ ಧನ್ನಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ನಾಗನ್ನಾಥ ಯಳಸಂಗಿ, ಶಕುಂತಲಾ ಪಾಟೀಲ ಜಾವಳಿ, ಕಲ್ಯಾಣಕುಮಾರ ಶೀಲವಂತ, ವಿನೋದಕುಮಾರ ಜೇನವೇರಿ, ಜ್ಯೋತಿ ಕೋಟನೂರ, ಶ್ರೀಕಾಂತ ಪಾಟೀಲ ತಿಳಗೂಳ, ಬಿ ಎಂ ಪಾಟೀಲ ಕಲ್ಲೂರ, ರಾಜಶೇಖರ ಚೌಧರಿ, ಗಣೇಶ ಚಿನ್ನಾಕಾರ, ಹೆಚ್.ಎಸ್. ಬರಗಾಲಿ, ಬಾಬುರಾವ ಪಾಟೀಲ, ಡಾ. ರೆಹಮಾನ್ ಪಟೇಲ್, ಶಿವಾನಂದ ಪೂಜಾರಿ, ಸೋಮಶೇಖರಯ್ಯಾ ಹೊಸಮಠ, ಸೋಮಶೇಕರ ನಂದಿಧ್ವಜ, ಶಿವಶರಣಪ್ಪ ಹಡಪದ ಸೇರಿದಂತೆ ಅನೇಕರು ಭಾಗವಹಿಸಿ ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.