ಜಗತ್ತಿಗೆ ಸಾಧನೆ ಮಾಡಿ ತೋರಿಸಿ, ಈ ಜಗತ್ತು ನಿಮ್ಮನ್ನು ಗೌರವಿಸುತ್ತದೆ: ಡಾ.ವಿ ಟಿ ಕಾಂಬಳೆ

0
90

ಕಲಬುರಗಿ: ಹೈದರಾಬಾದ್ ಕರ್ನಾಟಕ ಹಿಂದುಳಿದಿದೆ ಎಂಬ ಹಣೆಪಟ್ಟಿ ಅಳಿಸಲು ಇಂದಿನ ಯುವ ಜನಾಂಗಕ್ಕೆ ಮಾತ್ರ ಸಾಧ್ಯ. ಕಾನೂನು ಪದವಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ನೀವೆಲ್ಲ ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ ವಿಟಿ ಕಾಂಬಳೆ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಮಹಾವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ಜರುಗಿದ “ಡಿಜಿಟಲ್ ಯುಗದಲ್ಲಿ ಕಾನೂನು ಗ್ರಂಥಾಲಯಗಳ ಪಾತ್ರ”ವಿಷಯದ ಮೇಲೆ ಒಂದು ದಿನದ ಸೆಮಿನಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ ವಿ ಟಿ ಕಾಂಬಳೆ ಅವರು, ವಿದ್ಯಾರ್ಥಿಗಳು ಕಾನೂನು ಪದವಿ ವ್ಯಾಸಂಗ ಮುಗಿಸಿ ವಕೀಲರಾದಾಗ ಬಡವರಿಗೆ ಅನ್ಯಾಯವಾದರೆ ಸ್ವಯಂ ಪ್ರೇರಣೆಯಿಂದ ನ್ಯಾಯ ಒದಗಿಸಬೇಕು. ಡಾ. ಬಿ ಆರ್ ಅಂಬೇಡ್ಕರ್ ಅವರು ಮುಂಬೈಯಿಂದ ಬಂದು ಬಿಜಾಪುರ ಕೋರ್ಟಿಗೆ ಒಂದು ಬಡ ಮುಸ್ಲಿಂ ಕುಟುಂಬಕ್ಕೆ ಅನ್ಯಾಯವಾದಾಗ ಅವರ ಪರವಾಗಿ ವಾದ ಮಂಡಿಸಿ ನ್ಯಾಯ ಒದಗಿಸಿದ್ದರು. ಭವಿಷ್ಯದ ಯುವ ವಕೀಲರಾಗುವ ನೀವೆಲ್ಲ ಗ್ರಂಥಾಲಯಗಳ ಸದುಪಯೋಗ ಮಾಡಿಕೊಳ್ಳಬೇಕು.ಗ್ರಂಥಾಲಯ ಮತ್ತು ಪುಸ್ತಕಗಳಿಗೆ ಯಾವ ಜಾತಿ ಭೇದವು ಇರುವುದಿಲ್ಲ. ಅವು ಉತ್ತಮ ಮತ್ತು ನಿಜವಾದ ಸ್ನೇಹಿತರಾಗಿವೆ ಎಂದರು.

Contact Your\'s Advertisement; 9902492681

ಅಂಬೇಡ್ಕರರು ಗ್ರಂಥಾಲಯಗಳ ಪೂರ್ಣ ಲಾಭ ಪಡೆದು ಜ್ಞಾನದ ಕಣಜವಾಗಿದ್ದರು. ತಾವೇ ಒಂದು ವಿಶ್ವವಿದ್ಯಾಲಯದ ರೀತಿ ಅಮೋಘವಾದ ಜ್ಞಾನ ಪಡೆದರು. ಅವರ ಜೀವನ ಸಾಧನೆಗೆ ವ್ಯಕ್ತಿತ್ವ ನಿರ್ಮಾಣಕ್ಕೆ ಗ್ರಂಥಾಲಯಗಳ ಪಾತ್ರ ಗಣನೀಯವಾಗಿದೆ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಗ್ರಂಥಾಲಯ ಮತ್ತು ಅಲ್ಲಿರುವ ಪುಸ್ತಕಗಳು ಉತ್ತರವಾಗಿ ನಿಲ್ಲುತ್ತವೆ. ಸೋತಾಗ ಪ್ರೋತ್ಸಾಹ ನೀಡಿ ಪ್ರೇರಣೆ ನೀಡಲು ಗ್ರಂಥಾಲಯ ಬಳಕೆಯನ್ನು ಮಾಡದೆ ಮರೆಯಬಾರದು. ಶಿಕ್ಷಣ ಮಾನವ ಜೀವನದ ಅಡಿಪಾಯ.ನೀವು ಕೇವಲ ವಕೀಲರಾಗದೆ ನಿಷ್ಠಾವಂತ, ನಿರ್ಭೀತ ಭವಿಷ್ಯದ ಭರವಸೆಯ ವಕೀಲರಾಗಿ ನಿರ್ಗತಿಕರಿಗೆ,ದೀನ ಮಹಿಳೆಯರಿಗೆ ಆಸರೆಯಾಗಬೇಕು. ಅವರಿಗೆ ಅನ್ಯಾಯವಾದಾಗ ಯುವ ವಕೀಲರು ನಿಂತು ನ್ಯಾಯ ಕೊಡಿಸಲು ವಾದ ಮಾಡಬೇಕು. ಮಹಿಳೆಯರಿಗೆ ತಾರತಮ್ಯ ಮಾಡಕೂಡದು ಎಂದು ತಿಳಿಸಿದರು.

ಮತದಾನದ ಹಕ್ಕು ನೀಡಿದ್ದು ಸಂವಿಧಾನ. ಸಂವಿಧಾನವನ್ನು ನಮ್ಮೆಲ್ಲರಿಗೆ ನೀಡಿದ್ದು ಡಾ. ಬಿಆರ್ ಅಂಬೇಡ್ಕರ್. ಅಂಬೇಡ್ಕರ್ ಅವರನ್ನು ತಯಾರಿಸಿದ್ದು ಈ ಗ್ರಂಥಾಲಯಗಳು. ಹೀಗಾಗಿ ತಾವು ಗ್ರಂಥಾಲಯದ ಮಹತ್ವವನ್ನು ಈ ಒಂದು ಉದಾಹರಣೆಯಿಂದ ಅರ್ಥಮಾಡಿಕೊಳ್ಳಬೇಕು. ಭವಿಷ್ಯದ ವಕೀಲೆಯರಾಗುವ ವಿದ್ಯಾರ್ಥಿನಿಯರು ಕೂಡ ಮುಂದೆ ಬಂದು ಸಾಧನೆ ಮಾಡಲು ಹಿಂಜರಿಯಬಾರದು. ಸ್ವಾಭಿಮಾನದಿಂದ ಮುನ್ನುಗ್ಗಿ ಸಾಧನೆ ಮಾಡಬೇಕು. ಸಮಾಜದಲ್ಲಿ ನಿಜವಾದ ಹೀರೋ ಎಂದರೆ ಲಾಯರ್, ಏಕೆಂದರೆ ಅವರು ನ್ಯಾಯ ಕೊಡಿಸುವ ಸ್ಥಾನದಲ್ಲಿ ನಿಂತು ಅಶಕ್ತರಿಗೆ ಶಕ್ತಿ ತುಂಬುವ ಸಾಮರ್ಥ್ಯ ವಕೀಲರಾಗುವ ನಿಮ್ಮಲ್ಲಿದೆ. ಆ ಶಕ್ತಿ ಸಾಮರ್ಥ್ಯ ವಶ ಮಾಡಿಕೊಳ್ಳಲು ತಾವೆಲ್ಲ ಗ್ರಂಥಾಲಯದ ಉಪಯೋಗ ಪಡೆದು ಈ ಜಗತ್ತಿಗೆ ಸಾಧನೆ ಮಾಡಿ ತೋರಿಸಿ ಆ ಜಗತ್ತು ನಿಮ್ಮನ್ನು ಗುರುತಿಸಿ ಗೌರವಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ನಂತರ ಮಾತಾಡಿದ ಮಾತನಾಡಿದ ಗುಲ್ಬರ್ಗ ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕರಾದ ಡಾ. ಸುರೇಶ ಜಂಗೆ, ತಂತ್ರಜ್ಞಾನದ ಅಭಿವೃದ್ಧಿಯಿಂದ ಇಂದು ಗ್ರಂಥಾಲಯಗಳು ಬೃಹದಾಕಾರವಾಗಿ ಹೆಮ್ಮರದಂತೆ ಬೆಳೆದಿವೆ. ಕೇವಲ ಬೆರಳ ತುದಿಯಲ್ಲಿ ಸಮಗ್ರ ಮಾಹಿತಿ ನೀಡುವ ಶಕ್ತಿ ಇಂದಿನ ಗ್ರಂಥಾಲಯಗಳಲ್ಲಿದೆ. ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಜೋಡಿಸಿ ಇಡುವ ಕಾಲ ಬದಲಾಗಿದೆ. ತಂತ್ರಜ್ಞಾನದ ಸಹಾಯದಿಂದ ಕುಳಿತಲ್ಲಿಯೇ ವಿದೇಶಗಳಲ್ಲಿರುವ ಗ್ರಂಥಾಲಯಗಳಲ್ಲಿ ಲಾಗಿನ್ ಆಗಿ ಯಾವ ಪುಸ್ತಕ ಬೇಕಾದರೂ ಓದಿ ಜ್ಞಾನ ವಿಸ್ತಾರ ಮಾಡಿಕೊಳ್ಳಬಹುದಾದ ಅವಕಾಶವನ್ನು ಇಂದಿನ ತಂತ್ರಜ್ಞಾನದ ಗ್ರಂಥಾಲಯಗಳ ಬಹುದೊಡ್ಡ ಕೊಡುಗೆಯಾಗಿದೆ. ಇದು ಇಂದಿನ ತಂತ್ರಜ್ಞಾನ ಗ್ರಂಥಾಲಯದ ತಾಕತ್ತು. ಕಾನೂನು ವಿದ್ಯಾರ್ಥಿಗಳು ಕೇವಲ ನೋಟ್ಸ್ ಮೇಲೆ ಡಿಪೆಂಡ್ ಆಗದೆ ಗ್ರಂಥಾಲಯಗಳ ಬಳಕೆ ಮಾಡಿಕೊಂಡರೆ ಅಪಾರವಾದ ಜ್ಞಾನ ವೃದ್ಧಿ ಆಗುತ್ತದೆ. ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷಾಜ್ಞಾನವನ್ನು ಬೆಳೆಸಿಕೊಳ್ಳುವಲ್ಲಿ ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು.

ಇದರಿಂದ ರಾಷ್ಟ್ರ ಮಟ್ಟದಲ್ಲಿ ವಕಾಲತ್ತುವಹಿಸಲು ಇಂಗ್ಲೀಷ್ ಭಾಷೆ ನೆರವಾಗುತ್ತದೆ. ಗುಲ್ಬರ್ಗ ವಿಶ್ವವಿದ್ಯಾಲಯ ಲೈಬ್ರರಿಯಲ್ಲಿ ಮೊಬೈಲ್ ಆಪ್ ಮೂಲಕ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಪುಸ್ತಕಗಳನ್ನು ಓದಲು ಅನುವು ಮಾಡಿಕೊಡಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಮೊಬೈಲ್ಗಳಲ್ಲಿಯೇ ವಿದ್ಯಾರ್ಥಿಗಳು ಸಾವಿರಗಟ್ಟಲೆ ಪುಸ್ತಕಗಳನ್ನು ಅಧ್ಯಯನ ಮಾಡಬಹುದು ಮಾಹಿತಿಯನ್ನು ಕಲೆ ಹಾಕ ಬಹುದು. ಹಸಿರು ಗ್ರಂಥಾಲಯದ ಸದ್ಬಳಕೆ ಮಾಡಿ ಅದರ ಮಹತ್ವವನ್ನು ಸಾರಿದ ಹೆಗ್ಗಳಿಕೆ ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಸಲ್ಲುತ್ತದೆ. ಶೈಕ್ಷಣಿಕ ಅವಶ್ಯಕತೆಗಳಿಗಾಗಿ ಮೊಬೈಲ್ ಹಾಗೂ ಜಾಲತಾಣಗಳನ್ನು ಬಳಕೆ ಮಾಡಿ ಕಾಲಹರಣ ಮಾಡಲು ಮೊಬೈಲ್ ಬಳಸಿದರೆ ಮುಂದೆ ನಿಮ್ಮ ಭವಿಷ್ಯದ ಹರಣವಾಗುತ್ತದೆ. ಚೆನ್ನಾಗಿ ಓದಿ ಸಾಧಿಸಿದರೆ ನಿಮ್ಮ ಗುರುಗಳಿಗೆ ಪಾಲಕರಿಗೆ ಕೀರ್ತಿ ಬರುತ್ತದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಹೇಳಿದರು.

ವೇದಿಕೆಯ ಮೇಲೆ ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ. ಸುರೇಶ ಜಂಗೆ, ಮುಖ್ಯ ಅತಿಥಿಗಳಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ. ವಿ ಟಿ ಕಾಂಬಳೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜ್ಞಾನೇಶ್ವರ ಸರ್ಕಾರಿ ಕಾನೂನು ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಿವಾನಂದ ಲೆಂಗಟಿ, ಕಾನೂನು ಕಾಲೇಜಿನ ಗ್ರಂಥ ಪಾಲಕರಾದ ಡಾ. ವೀಣಾ ಅಂಕದ್, ಐ ಕ್ಯೂ ಎ ಸಿ ಸಂಯೋಜಕಿ ರೇಣುಕಾ ಸಾಸನಮರಿ ಸೇರಿದಂತೆ ಉಪನ್ಯಾಸಕ ವೃಂದ ಹಾಗೂ ಕಾನೂನು ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here