ಕಲಬುರಗಿ: ಕಾರ್ಮಿಕರು ಸಂಘಟಿತ ಹೋರಾಟದ ಮೂಲಕ ಹಕ್ಕುಗಳನ್ನು ಪಡೆಬಯೇಕು ಎಂದು ಹಿರಿಯ ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಅವರು ಇಲ್ಲಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಸಿಐಟಿಯು ತಾಲ್ಲೂಕು ಎರಡನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ವಿರೋಧಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೀತಿಗಳಿಂದಾಗಿ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲರಿಗೂ ಅಚ್ಛೇ ದಿನ್ ಕೊಡುವ ಬದಲು ಬೀದಿಗೆ ತಳ್ಳುತ್ತಿದ್ದಾರೆ. ನಾವೆಲ್ಲ ಕಾರ್ಮಿಕರು ಒಟ್ಟಾಗಿ ಇಂತಹ ನೀತಿಗೆ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ಎಂದು ಮಾನಪಡೆ ಅವರು ಹೇಳಿದರು.
ಇದೇ ಸೆಪ್ಟೆಂಬರ್ ೫ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಎಲ್ಲ ಸಂಘಟನೆಗಳ ಕಾರ್ಮಿಕರನ್ನು ಒಗ್ಗೂಡಿಸಿ ಹೋರಾಟ ರೂಪಿಸಲು ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು. ಇದೇ ಸಂದರ್ಭದಲ್ಲಿ ತಾಲ್ಲೂಕು ಪದಾಧಿಗಳನ್ನು ಆಯ್ಕೆ ಮಾಡಲಾಯಿತು.
ತಾಲ್ಲೂಕು ಅಧ್ಯಕ್ಷರಾಗಿ ಗೌರಮ್ಮ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಪಂಪಣ್ಣಾ ಸಜ್ಜನ್, ಖಜಾಂಚಿಗಳಾಗಿ ಆನಂದ್ ರಾಜ್, ಉಪಾಧ್ಯಕ್ಷರಾಗಿ ನಾಗಯ್ಯಸ್ವಾಮಿ, ವಿಜಯಕುಮಾರ್ ಕೆಂಗಲ, ನಾಗರಾಜ್, ಕಮಲಾಬಾಯಿ, ಸಹ ಕಾರ್ಯದರ್ಶಿಗಳಾಗಿ ಶಿವಾನಂದ್ ಕವಲಗಾ, ಕವಿತಾ, ಶರಣಮ್ಮ, ರಾಮು ಕುಲಸಂಬಿ ಅವರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ಅಷ್ಪಾಕ್ ಅವರು ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು.