ಸೊಲ್ಲಾಪುರ: ಲಿಂಗಾಯತ ಸಮಾಜದ ಆರ್ಥಿಕ ಉನ್ನತಿಗಾಗಿ ರಾಜ್ಯ ಸರ್ಕಾರದ ವತಿಯಿಂದ ಇತ್ತೀಚೆಗೆ ಮಹಾತ್ಮ ಬಸವೇಶ್ವರ ಆರ್ಥಿಕ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಮಂಗಳವಾರ ಸೊಲ್ಲಾಪುರದಲ್ಲಿ ನಿಗಮದ ಕಚೇರಿ ಆರಂಭಗೊಂಡಿದ್ದು, ಲಿಂಗಾಯತ ಸಮಾಜದ ಮುಖಂಡರು ಕಚೇರಿಗೆ ಭೇಟಿ ನೀಡುವ ಮೂಲಕ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಮಹಾತ್ಮ ಬಸವೇಶ್ವರ ಬ್ಲಡ್ ಬ್ಯಾಂಕ್ ಹಾಗೂ ರಾಷ್ಟ್ರೀಯ ಲಿಂಗಾಯತ ಮಹಾಮಂಚ್ ವತಿಯಿಂದ ಲಿಂಗಾಯತ ಧರ್ಮ ರಕ್ಷಕ ವಿಜಯಕುಮಾರ ಹತ್ತೂರೆ ಸೇರಿದಂತೆ ಲಿಂಗಾಯತ ಸಮಾಜದ ಮುಖಂಡರು ಕಚೇರಿಗೆ ಭೇಟಿ ನೀಡಿ ಜಗತ್ ಜ್ಯೋತಿ ಮಹಾತ್ಮ ಬಸವೇಶ್ವರರ ಪ್ರತಿಮೆ ನೀಡಿದರು.
ಮಹಾತ್ಮ ಬಸವೇಶ್ವರ ಆರ್ಥಿಕ ಅಭಿವೃದ್ಧಿ ನಿಗಮ ಸ್ಥಾಪಿಸಿ ಆರಂಭಿಸಿದ ರಾಜ್ಯ ಸರ್ಕಾರಕ್ಕೆ ವಿಜಯಕುಮಾರ ಹತ್ತೂರೆ ಕೃತಜ್ಞತೆ ಸಲ್ಲಿಸಿದರು. ಸದ್ಯ ಈ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಕೂಡಲೇ ಸಿಬ್ಬಂದಿ ನೇಮಕಾತಿ ಮಾಡುವಂತೆ ಆಗ್ರಹಿಸಿದರು. ಅಲ್ಲದೆ ರಾಜ್ಯದ 36 ಜಿಲ್ಲೆಗಳಲ್ಲಿ ಆರಂಭಗೊಂಡ ಕಚೇರಿಗೆ ಆಯಾ ಜಿಲ್ಲೆಯ ಲಿಂಗಾಯತ ಸಮಾಜದ ಮುಖಂಡರು ಭೇಟಿ ನೀಡಿ ಮಹಾತ್ಮ ಬಸವೇಶ್ವರರ ಪ್ರತಿಮೆ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿಗಮದ ಲೆಕ್ಕಾಧಿಕಾರಿ ಶ್ರೀಮತಿ ರಜನಿ ಲಗಶೆಟ್ಟಿ, ಲಿಂಗಾಯತ ಸಮಾಜದ ಮುಖಂಡರಾದ ಸಕಲೇಶ ಬಾಭುಳಗಾಂವಕರ, ನಾಮದೇವ ಫುಲಾರಿ, ಸಚಿನ್ ಶಿವಶಕ್ತಿ, ನಾಗೇಶ ಪಡ್ನೂರೆ, ಸಚಿನ್ ತೂಗಾವೆ, ಸೂರಜ್ ದಾರೇಕರ ಮೊದಲಾದವರು ಉಪಸ್ಥಿತರಿದ್ದರು.