ಶಹಾಬಾದ: ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆ ಹಿನ್ನಡೆಯಾಗಿದೆ. ಅದನ್ನು ಸರಿದೂಗಿಸಿ, ಕಲಿಕೆ ಪರಿಣಾಮಕಾರಿಯಾಗಿಸಲು, ವಿದ್ಯಾರ್ಥಿಗಳು ಫಲಗಳಾಧಾರಿತ, ಚಟುವಟಿಕೆಯುಕ್ತ, ಸ್ವ-ಪ್ರಯತ್ನ ಮತ್ತು ಅನುಭವದಿಂದ ಕಲಿಕೆಯನ್ನು ಸಾಧಿಸಬೇಕು ಎಂಬ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ ‘ಕಲಿಕಾ ಬಲವರ್ಧನೆ’ ಎಂಬ ಯೋಜನೆ ಜಾರಿಗೆ ತರಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಉಪನ್ಯಾಸಕ ಎಚ್.ಬಿ.ಪಾಟೀಳ ಹೇಳಿದರು.
ಅವರು ಸಮೀಪದ ಝಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿದ ‘ಕಲಿಕಾ ಬಲವರ್ಧನೆ’ಯ “ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ”ವನ್ನು ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ನೀಡಿರುವ ಚಟುವಟಿಕೆ ಪುಸ್ತಕ ಕಲಿಕೆ ಪರಿಣಾಮಕಾರಿಯಾಗಲು, ವಿದ್ಯಾರ್ಥಿಗಳು ಸರಳವಾಗಿ ಅರ್ಥ ಮಾಡಿಕೊಳ್ಳುವಂತೆ ರಚಿಸಲಾಗಿದೆ. ಶಿಕ್ಷಕರು ತಮ್ಮ ಬೋಧನಾ ಪ್ರಕ್ರಿಯೆಯಲ್ಲಿ ನಾವಿನ್ಯತೆಯನ್ನು ಅಳವಡಿಸಿಕೊಳ್ಳಲು ಅನಕೂಲವಾಗುವಂತೆ, ವರ್ತಮಾನದ ತರಗತಿ ಸನ್ನಿವೇಶಕ್ಕೆ ಅನ್ವಯವಾಗುವ ಹಲವು ಕಲಿಕಾ ವಿಧಾನಗಳನ್ನು ಪರಿಚಯಿಸಲಾಗಿದೆ. ಈ ಯೋಜನೆಯು ನಾಲ್ಕರಿಂದ ಎಂಟನೇ ತರಗತಿಯವ ವಿದ್ಯಾರ್ಥಿಗಳಿಗಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಕಲಿಕಾ-ಬೋಧನೆ, ಭ್ರಾತೃತ್ವದ ಜಾಗೃತಿಯ ಗೀತೆಗಳನ್ನು ಹಾಡಿದರು. ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಗ್ರಾ.ಪಂ.ಸದಸ್ಯ ಪೀರಪ್ಪ ದೊಡ್ಡಮನಿ, ಪ್ರಮುಖರಾದ ನಾಗನಗೌಡ ಪಾಟೀಲ ವೈಜಾಪುರ, ಸುರೇಶ ಮಾಂಗ್, ಶಿಕ್ಷಕರಾದ ಶಾರದಬಾಯಿ, ಶಾಂತಾಬಾಯಿ, ಈರವ್ವ ಹಿರೆಕೆನ್ನೂರ್, ಮಂಜುಳಾ ಮೇಲಿನಮನಿ, ಎಸ್.ಡಿ.ಎಂ.ಸಿ ಸದಸ್ಯೆ ಶಿಲ್ಪಾ, ಗ್ರಾಮಸ್ಥ ಮಹೇಶ ನಾಯ್ಕೊಡಿ, ಶರಣಬಸಪ್ಪ ಪೂಜಾರಿ ಹಾಗೂ ವಿದ್ಯಾರ್ಥಿಗಳು ಇದ್ದರು.