ಪರಿಶಿಷ್ಟ ಜಾತಿ ರೈತನ ಜಮೀನಲ್ಲಿ ಕಬ್ಬು ಕಟಾವಿಗೆ ಪೊಲೀಸ್ ಭದ್ರತೆ ನೀಡಿ
ಸುರಪುರ: ಹುಣಸಗಿ ತಾಲೂಕಿನ ಕೊಡೇಕಲ್ ಹೋಬಳಿಯ ಬೈಲಕುಂಟಿ ಗ್ರಾಮದಲ್ಲಿನ ದಲಿತ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ರೈತ ಪರಶುರಾಮ ದೊಡ್ಮನಿ ಎನ್ನುವವರಿಗೆ ಸೇರಿದ ಸರ್ವೇ ನಂಬರ್ 62/3ರ ಜಮೀನಿನಲ್ಲಿ ಬೆಳೆದಿರುವ ಕಬ್ಬು ಕಟಾವು ಮಾಡಲು ಬಿಡದೆ ಅಡ್ಡಿಪಡಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ರೈತನ ಜಮೀನಲ್ಲಿ ಕಬ್ಬು ಕಟಾವಿಗೆ ಪೊಲೀಸ್ ಭದ್ರತೆ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ:ಬಿ.ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಆಗ್ರಹಿಸಿದರು.
ನಗರದ ಪೊಲೀಸ್ ಠಾಣೆಯ ಡಿವೈಎಸ್ಪಿ ಕಚೇರಿ ಮುಂದೆ ಸಂಘಟನೆಯಿಂದ ಧರಣಿ ನಡೆಸಿ ಮಾತನಾಡಿ,ಬೈಲಕುಂಟಿ ಗ್ರಾಮದಲ್ಲಿ ರೈತ ಪರಶುರಾಮನಿಗೆ ವಿನಾಕಾರಣ ತೊಂದರೆ ಮಾಡಲಾಗುತ್ತಿದೆ,ನಾವು ಈಗಾಗಲೇ ಎರಡು ಬಾರಿ ಧರಣಿ ನಡೆಸಿ ಪೊಲೀಸ್ ಭದ್ರತೆ ನೀಡುವಂತೆ ಆಗ್ರಹಿಸಿದ್ದೇವೆ,ಆದರೆ ಪೊಲೀಸ್ ಇಲಾಖೆ ಬಡ ರೈತನ ನೆರವಿಗೆ ಬರುತ್ತಿಲ್ಲ ಎಂದರು.
ಅಲ್ಲದೆ ಪರಶುರಾಮ ಜಮೀನು ಖರಿದಿ ಮಾಡಿದ್ದಾರೆ,ಈಗ ಆತನಿಗೆ ಜಮೀನು ಕೊಟ್ಟವರೆ ಹೊಲದಲ್ಲಿ ಬೆಳೆದಿರುವ ಕಬ್ಬು ಕಟಾವಿಗೆ ಬಿಡದೆ ಕಿರಕುಳ ನೀಡುತ್ತಿದ್ದಾರೆ,ರೈತನಿಗೆ ಭದ್ರತೆ ನೀಡುವಂತೆ ಮನವಿ ಮಾಡಿದರೆ ನಾಲ್ಕು ದಿನಗಳ ಸಮಯ ಕೇಳಿದ್ದ ಡಿವೈಎಸ್ಪಿಯವರು ಈಗ ಸ್ಪಂಧಿಸುತ್ತಿಲ್ಲ,ಆದ್ದರಿಂದ ನಮ್ಮ ಬೇಡಿಕೆ ಈಡೇರಿಸಿ ಪೊಲೀಸ್ ಇಲಾಖೆಯೆ ಕಬ್ಬು ಕಟಾವಿಗೆ ನೆರವಾಗುವ ವರೆಗೆ ಧರಣಿ ನಿಲ್ಲಿಸುವುದಿಲ್ಲ,ಇನ್ನು ನಾಲ್ಕು ದಿನವಾದರೆ ಬೆಳೆದ ಎಲ್ಲಾ ಕಬ್ಬು ಹಾಳಾಗುತ್ತದೆ ಅದಕ್ಕೆ ಪೊಲೀಸ್ ಇಲಾಖೆ ಹೊಣೆಯಾಗಲಿದೆ,ಆದ್ದರಿಂದ ಕೂಡಲೇ ಕಬ್ಬು ಕಟಾವಿಗೆ ಅಡ್ಡಿ ಪಡಿಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕಬ್ಬು ಕಟಾವಿಗೆ ಮುಂದಾಗಬೇಕು ಎಂದು ಪೊಲಿಸರಿಗೆ ಒತ್ತಾಯಿಸಿದರು.ಮತ್ತು ಕೊಡೇಕಲ್ ಠಾಣೆ ಪಿ.ಎಸ್.ಐ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು,
ಸಂಜೆಯವರೆಗೂ ನಡೆದ ಧರಣಿಯಲ್ಲಿ ಮುಖಂಡ ಭೀಮಾಶಂಕರ ಬಿಲ್ಲವ್, ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ ಓಕಳಿ,ತಾಲೂಕು ಸಂಚಾಲಕ ರಮೇಶ ಪೂಜಾರಿ,ಸದಾಶಿವ ಬೊಮ್ಮನಹಳಿ,ಶರಣಪ್ಪ ಗುಳಬಾಳ,ಪವಡಪ್ಪ ಕಕ್ಕೇರಾ,ಧರ್ಮಣ್ಣ ಚಿಂಚೋಳಿ,ಮಾನಪ್ಪ ಶೆಳ್ಳಗಿ,ನಾಗು ಗೋಗಿಕೇರ,ಸಾಯಬಣ್ಣ ಕೆಂಭಾವಿ,ಭೀಮಣ್ಣ ಅಡ್ಡೊಡಗಿ,ಚಂದ್ರಕಾಂತ ದಿವಳಗುಡ್ಡ,ಚಂದಪ್ಪ ಪತ್ತೆಪುರ,ಅನಿಲ್ ಯಾಳಗಿ ಸೇರಿದಂತೆ ಪರಶುರಾಮ ದೊಡ್ಮನಿ ಕುಟುಂಬಸ್ಥರು ಧರಣಿಯಲ್ಲಿ ಭಾಗವಹಿಸಿದ್ದಾರೆ.