ಕಲಬುರಗಿ : ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಅಲ್ಲಿನ ಯುವಕರ ಪಾತ್ರ ತುಂಬಾ ಪ್ರಮುಖವಾಗಿದೆ. ಇಡೀ ಯುವ ಸಮೂಹದ ಚೇತನಾ ಶಕ್ತಿಯಾದ ವಿವೇಕಾನಂದ ಅವರು ನೀಡಿದ ಸಂದೇಶವನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡರೆ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆ ಎಂದು ನ್ಯಾಯವಾದಿ ಬಿ.ಎಸ್.ಕಂದಗಲ್ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಶುಕ್ರÀವಾರ ಏರ್ಪಡಿಲಾಗಿದ್ದ ‘ಸ್ವಾಮಿ ವಿವೇಕಾನಂದರ 161ನೇ ಜನ್ಮದಿನಾಚರಣೆಯಾದ-ರಾಷ್ಟ್ರೀಯ ಯುವ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಎಂ.ಐ.ಸೂಗೂರ್, ನ್ಯಾಯವಾದಿ ಎಸ್.ಬಿ.ಯಂಕಂಚಿ ಮಾತನಾಡಿ, ಯುವಕರು ಹೇಡಿಗಳಾಗಬಾರದು ಪುರುಷ ಸಿಂಹಗಳಾಗಬೇಕು, ನೀವು ಎಂದೂ ಪರಾವಲಂಬಿಗಳಾಗಬಾರದು, ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಪ್ರತಿಪಾದಿಸುತ್ತಿದ್ದ ಸ್ವಾಮಿ ವಿವೇಕಾನಂದರು, ಯುವ ಜನರಿಗೆ ನೀಡಿರುವ ಒಂದೊಂದು ಸಂದೇಶವೂ ಒಂದೊಂದು ಜೀವನ ಧರ್ಮವಾಗಿದೆ. ಹೀಗಾಗಿಯೇ ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ, ಅಕ್ಷರಶಃ ರೋಮಾಂಚನವಾಗುತ್ತದೆ. ಯುವಕರು ವಿವೇಕವಾಣಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಬಿ.ಎನ್.ಕೊಂಬಿನ್, ವಕೀಲರಾದ ಪರಶುರಾಮ ಬಿ.ಮುದಬಾಳ, ಶಿವಕುಮಾರ ಪಿ.ಕೂಡಚಿ, ಮೊಹ್ಮದ್ ಮನ್ಸೂರ್ ಅಹ್ಮದ್, ರಾಜಶೇಖರ ಸರಕಾರ್, ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕ ಮಲ್ಲಿಕಾರ್ಜುನ ದೊಡ್ಡಮನಿ, ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಹುಣಚಿರಾಯ ನಾಟಿಕಾರ್, ಶ್ರೀಕಾಂತ ವೇದಿಕೆ ಮೇಲಿದ್ದರು.