- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: ತಾಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿರುವ ಮೈಲಾರಲಿಂಗೇಶ್ವರ ದೇವರ ಮೂರನೇ ವರ್ಷದ ಜಾತ್ರೆ, ಪಲ್ಲಕ್ಕಿ ಉತ್ಸವ, ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಮಂದಿರದಲ್ಲಿ ಬೆಳಗ್ಗೆ ಮೈಲಾರಲಿಂಗೇಶ್ವರನ ಕುದುರೆಗಳಿಗೆ ರುದ್ರಾಭಿಷೇಕ ಮಾಡಲಾಯಿತು.
ನಂತರ ಕರಿಬಸವೇಶ್ವರ ಮಂದಿರದಿಂದ ಮೈಲಾರಲಿಂಗೇಶ್ವರ ಮಂದಿರವರೆಗೆ ಮಂಗಳವಾದ್ಯ ಮೇಳದೊಂದಿಗೆ ಭಕ್ತರು ತೆರಳಿ, ಅಲ್ಲಿಂದ ದೇವರ ಪಲ್ಲಕ್ಕಿ ಮತ್ತು ಬೆಳ್ಳಿ ಕುದುರೆಗಳನ್ನು ಗಂಗಾಸ್ನಾನಕ್ಕಾಗಿ ಕೆರೆಯವರೆಗೆ ಅದ್ದೂರಿಯಾಗಿ ಕರೆದೊಯ್ದರು.
ಕುದುರೆ ಸ್ನಾನ ಶುರುವಾಗುತ್ತಿದ್ದಂತೆ ಭಕ್ತರು ಕೆರೆಯಲ್ಲಿ ಮಿಂದು ಭಕ್ತಿ ಮೆರೆದರು. ನಂತರ ಪಲ್ಲಕ್ಕಿ ಮತ್ತು ಮೈಲಾರಲಿಂಗೇಶ್ವರ ದೇವರ ಬೆಳ್ಳಿ ಕುದುರೆಗಳ ಮೆರವಣಿಗೆ ನಡೆಯಿತು. ಮಲ್ಲಣ್ಣ ಕೊರಬಾ ಅವರು ದೇವರ ಬೆಳ್ಳಿ ಕುದುರೆ ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಮಲ್ಲಿಕಾರ್ಜುನ ಕುಂಬಾರ ಪಲ್ಲಕ್ಕಿ ಸೇವೆ ಸಲ್ಲಿಸಿದರು. ಶಿಬಾರ ಕಟ್ಟೆ ಹತ್ತಿರ ಕಬ್ಬಿಣದ ಸರಪಳಿ ಹರಿಯುವ ವ್ಯವಸ್ಥೆ ಮಾಡಲಾಗಿತ್ತು. ಪೂಜಾರಿ ಮಲ್ಲಪ್ಪ ಬೋಳಿ ಅವರು ಸಂಪ್ರದಾಯದಂತೆ ಸರಪಳಿ ಹರಿಯುವ ದೃಶ್ಯವನ್ನು ಜನ ಕಣ್ತುಂಬಿಕೊಂಡರು.
ಸರಪಳಿ ಹರಿಯುವುದು ಮುಗಿಯುತ್ತಿದ್ದಂತೆ ಪಲ್ಲಕ್ಕಿ ಮತ್ತು ದೇವರ ಕುದರೆಗಳನ್ನು ಅಲ್ಲಿಂದ ಮೈಲಾರಲಿಂಗೇಶ್ವರ ಮಂದಿರದ ವರೆಗೆ ಮೆರವಣಿಗೆ ಮಾಡಿ ತರಲಾಯಿತು.
ಸಂಕ್ರಾಂತಿ ಹಬ್ಬದ ದಿನ ಪಲ್ಲಕ್ಕಿ ಉತ್ಸವ ಮಾಡುವುದು ವಿಶೇಷ.