ಶಹಾಬಾದ: ಸಿದ್ಧರಾಮೇಶ್ವರರು ಕಾಯಕ, ದಾಸೋಹ ಪ್ರಜ್ಞೆಯನ್ನು ಬೆಳೆಸಿದ ಶರಣರು ನಾಡಿನ ಎಲ್ಲ ಸಮಾಜಕ್ಕೂ ಆದರ್ಶಪ್ರಾಯರು ಎಂದು ಭೋವಿ ಸಮಾಜದ ಮುಖಂಡ ಹಾಗೂ ಶಿಕ್ಷಕ ಭಗವಾನ ದಂಡಗುಲಕರ್ ಹೇಳಿದರು.
ಅವರು ರವಿವಾರ ನಗರದ ಬಸವೇಶ್ವರ ವೃತ್ತದಲ್ಲಿ ಭೋವಿ ವಡ್ಡರ್ ಸಮಾಜ ಹಾಗೂ ಭೋವಿ ಯುವಕರ ಸಂಘ ವತಿಯಿಂದ ಆಯೋಜಿಸಲಾದ ಸಿದ್ಧರಾಮೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಹನ್ನೇರಡನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಸಿದ್ಧರಾಮೇಶ್ವರರು ಒಬ್ಬರು. ಸಿದ್ಧರಾಮೇಶ್ವರರು ಆ ಕಾಲದಲ್ಲಿಯೇ ಜೀವಿಗಳಿಗೆ ಬದುಕಲು ಕೆರೆಕುಂಟೆಗಳನ್ನು ಕಟ್ಟಿಸಿದ ಮಾನವೀಯತೆಯ ಹರಿಕಾರರು. ಅವರು ತಮ್ಮ ಜೀವನದಲ್ಲಿ ನುಡಿದಂತೆ ನಡೆದವರು.ಅವರ ಬದುಕಿದ ರೀತಿ ಹಾಗೂ ನುಡಿದ ಒಂದೊಂದು ಮಾತುಗಳು ನಮಗೆ ದಾರಿದೀಪವಾಗಲಿವೆ. ಅವರ ಒಂದೊಂದು ವಚನಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿದ್ದೇ ಆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಮುಖಂಡರಾದ ಕನಕಪ್ಪ ದಂಡಗುಲಕರ್ ಮಾತನಾಡಿ, ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕನ್ನು ಬದುಕಬೇಕೆಂಬ ಅಂಶವನ್ನು ಸಿದ್ಧರಾಮೇಶ್ವರರು ತಮ್ಮ ಸರಳ ಸುಲಲಿತ ವಚನಗಳಲ್ಲಿ ತಿಳಿಸಿದ್ದಾರೆ. ಜಾತೀಯತೆಯನ್ನು ಮೀರಿದ ವಸ್ತು ನಿಷ್ಠತೆ, ಸತ್ಯ ನಿಷ್ಠತೆ ಬದುಕು, ನಿಜವಾದ ಬದುಕು ಎಂಬುದಾಗಿ ಪ್ರತಿಪಾದಿಸಿದ ದಿಟ್ಟ ಮಾನವತವಾದಿ ಎಂದು ಹೇಳಿದರು.
ಸಂಸದ ಡಾ.ಉಮೇಶ ಜಾಧವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಗರ ಪೊಲೀಸ್ ಠಾಣೆಯ ಪಿಐ ನಟರಾಜ ಲಾಡೆ, ಗಣ್ಯರಾದ ನರೇಂದ್ರ ವರ್ಮಾ, ಭೋವಿ ಸಮಾಜದÀ ತಾಲೂಕಾ ಅಧ್ಯಕ್ಷ ರಾಜು ಮೇಸ್ತ್ರಿ, ಶಂಕರ ಕುಸಾಳೆ,ಬಾಬು ಪವಾರ, ಯಲ್ಲಾಲಿಂಗ.ಪಿ. ದಂಡಗುಲಕರ್, ಮನೋಜ. ಆರ್. ಮೇಸ್ತ್ರಿ, ಸಂಜಯ ವಿಠಕರ್, ವಿನೋದ ಗೋಟೆಕರ್,ವಿಶ್ವರಾಜ ಕುರುಡೆಕರ್, ಬಾಬು ಮೇಸ್ತ್ರಿ,ಶೀತಲ ಭೋವಿ, ಗಿರಿ ಕೇತ್ರೆ,ಶ್ರೀನಿವಾಸ ನೇದಲಗಿ, ಗಿರಿರಾಜ ಪವಾರ ಸೇರಿದಂತೆ ಭೋವಿ ಸಮಾಜದ ಬಂಧುಗಳು ಇದ್ದರು.