ಸುರಪುರ: ತಾಲೂಕಿನ ಬಾಚಿಮಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಗ ಮುರಿದು ಕಿಡಿಗೇಡಿಗಳು ಅಡುಗೆ ಸಾಮಾಗ್ರಿಗಳನ್ನು ಕಳ್ಳತನ ಮಾಡಿರುವ ಘಟನೆ ಕೇಳಿ ಬಂದಿದೆ.ರವಿವಾರ ರಾತ್ರಿ ವೇಳೆ ಶಾಲೆಗೆ ಆಗಮಿಸಿ ಕಿಡಿಗೇಡಿಗಳು ಶಾಲೆಯಲ್ಲಿಯೆ ಕುಳಿತು ಮದ್ಯ ಸೇವನೆ ಮಾಡಿ ನಂತರ ಶಾಲಾ ಕೋಣೆಗಳ ಬೀಗ ಮುರಿದು ಅಡುಗೆ ಕೋಣೆಯಲ್ಲಿದ್ದ ಸುಮಾರು 50 ಕೆ.ಜಿ ಬೇಳೆ,60 ಕೆ.ಜಿ ಹಾಲಿನ ಪೌಡರ್ ಪ್ಯಾಕೆಟ್‍ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಅಲ್ಲದೆ ಶಾಲೆಯಲ್ಲಿಯೆ ಕುಡಿದ ಮದ್ಯಮ ಪ್ಯಾಕೆಟ್‍ಗಳನ್ನು ಎಸೆದು ವಿಕೃತಿ ಮೆರೆದಿದ್ದಾರೆ.ಸೋಮವಾರ ಬೆಳಿಗ್ಗೆ ಶಾಲೆಯ ಕಡೆಗ ಹೋದ ಜನರು ಬೀಗ ಮುರಿದಿದ್ದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ನಂತರ ಸ್ಥಳಕ್ಕೆ ಪಿ.ಎಸ್.ಐ ಸಿದ್ದಣ್ಣ ಯಡ್ರಾಮಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ಇದರ ಕುರಿತು ಅಕ್ಷರ ದಾಸೋಹದ ಪ್ರಭಾರಿ ಸಹಾಯಕ ನಿರ್ದೇಶಕ ಪಂಡಿತ ನಿಂಬೂರವರು ಮಾತನಾಡಿ,ಈ ರೀತಿ ಘಟನೆಗಳು ಪದೆ ಪದೆ ನಡೆಯುತ್ತಿದ್ದು ಹಾಲಿನ ಪೌಡರ್ ಪ್ಯಾಕೆಟ್‍ನ್ನೆ ಕಳ್ಳತನ ಮಾಡುತ್ತಿದ್ದಾರೆ,ಇದರ ಬಗ್ಗೆ ಸರಿಯಾದ ತನಿಖೆ ನಡೆಸಿ ಕಳ್ಳತನ ಮಾಡುವವರನ್ನು ಪೊಲೀಸರು ಪತ್ತೆ ಮಾಡಬೇಕು ಎಂದರು.
ಕಳೆದ ಒಂದು ವಾರದ ಹಿಂದಷ್ಟೆ ನಗರದ ಸ್ವಾಮಿ ವಿವೇಕಾನಂದ ಶಾಲೆ ಸೇರಿ ಐದು ಶಾಲೆಗಳಲ್ಲಿ ಕಳ್ಳತನ ಯತ್ನ ಮಾಡಿ ಎರಡು ಶಾಲೆಗಳಲ್ಲಿ ಹಾಲಿನ ಪೌಡರ್ ಪ್ಯಾಕೆಟ್ ಕಳ್ಳತನ ಮಾಡಿದ ಘಟನೆ ಮಾಸುವ ಮುನ್ನವೇ ಮತ್ತೆ ಈಗ ಬಾಚಿಮಟ್ಟಿ ಶಾಲೆಯಲ್ಲಿ ಹಾಲಿನ ಪೌಡರ್ ಪ್ಯಾಕೆಟ್ ಹಾಗು ಬೇಳೆ ಕಳ್ಳತನ ನಡೆದಿದ್ದು ಇಂತಹ ಘಟನೆಗಳು ಮರುಕಳಸದಂತೆ ಪೊಲೀಸರು ಕಳ್ಳರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕಿದೆ.