ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಿಂತ ದೊಡ್ಡವರಾಗಿದ್ದಾರೆ: ಸಂಸದ ಜಾಧವ ವ್ಯಂಗ್ಯ

0
14

ಕಲಬುರಗಿ: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗಿಂತಲೂ ದೊಡ್ಡವರಾಗಿದ್ದಾರೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ವ್ಯಂಗ್ಯವಾಡಿದ್ದಾರೆ.

ಕಲಬುರಗಿಗೆ ಶುಕ್ರವಾರ ಬಂದ ಪ್ರಧಾನ‌ ಮಂತ್ರಿ ನರೇಂದ್ರ ಮೋದಿ ಅವರನ್ನು ಶಿಷ್ಟಾಚಾರದಂತೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಅಲ್ಲಿನ ಉಸ್ತುವಾರಿ ಸಚಿವರು ಸ್ವಾಗತಿಸಲು ಬರಬೇಕು ಆದರೆ ಪ್ರಿಯಾಂಕ ಬಾರದಿರುವುದು ಯಾವ ಸಂವಿಧಾನ ಹೇಳುತ್ತದೆ ಎಂದು ಪ್ರಶ್ನಿಸಿದರು.

Contact Your\'s Advertisement; 9902492681

ಮಾತೆತ್ತಿದರೆ ಸಂವಿಧಾನದ ಪಾಠ ಹೇಳುವ ಸಚಿವ ಪ್ರಿಯಾಂಕ್ ಅವರಿಗೆ ಪ್ರಧಾನಮಂತ್ರಿಯ ಹುದ್ದೆಗೆ ಗೌರವ ನೀಡದಿರುವುದು ನೋಡಿದರೆ ಅವರಿಗೆ ಅವರೇ ನಿತ್ಯ ಪಾಠ ಮಾಡುವ ಸಂವಿಧಾನದ ಮೇಲೆ ಎಷ್ಟು ಗೌರವವಿದೆ ಎಂಬುದು ಅರ್ಥವಾಗುತ್ತದೆ ಎಂದು ಕುಟುಕಿದ್ದಾರೆ.

ಇದೇ‌ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಬಂದಿದ್ದಾರೆ ಉಸ್ತುವಾರಿ ಸಚಿವರು ಬಂದಿಲ್ಲ ಎಂದರೆ ಅನ್ಯಕಾರ್ಯನಿಮಿತ್ತ ಬಂದಿಲ್ಲ ಎನ್ನಬಹುದಿತ್ತು ಆದರೆ 2019ರಲ್ಲಿ ಕಲಬುರಗಿಗೆ ಪ್ರಧಾನ‌ ಮಂತ್ರಿ‌ ನರೇಂದ್ರ‌ ಮೋದಿ ಅವರು ಬಂದಾಗಲೂ ಪ್ರಿಯಾಂಕ್ ಸ್ವಾಗತಕ್ಕೆ ಬಂದಿರಲಿಲ್ಲ. ಇದು ಗಮನಿಸಿದರೆ ನರೇಂದ್ರ ಮೋದಿ‌ಯವರ ಬಗ್ಗೆ ಪ್ರಿಯಾಂಕ್ ಅವರಿಗೆ ವೈಯಕ್ತಿಕ ಭಿನ್ನಾಭಿಪ್ರಾಯ ಇರಬಹುದು ಆದರೆ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾಗ ಅದನ್ನು‌ ಮರೆತು ಶಿಷ್ಟಾಚಾರ ಪಾಲಿಸಬೇಕಿತ್ತು. ಹೀಗೆ ಮಾಡದ ಉಸ್ತುವಾರಿ ಸಚಿವರು ಪ್ರಧಾನಮ‌ಂತ್ರಿ ಸ್ವಾಗತಕ್ಕೆ‌ ಬಾರದಿರುವುದು ಖಂಡಿಸುತ್ತೇನೆ ಎಂದಿದ್ದಾರೆ.

2019ರಲ್ಲಿ ಬೀದರ್ ಉಸ್ತುವಾರಿ ಸಚಿವರಾಗಿದ್ದ ರಾಜಶೇಖರ ಪಾಟೀಲರು ಪ್ರಧಾನಿಯನ್ನು ಬರಮಾಡಿಕೊಂಡರೆ ಈ ಬಾರಿ ರಾಯಚೂರು ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲರು ಬರಮಾಡಿಕೊಂಡಿದ್ದಾರೆ. ಪ್ರಧಾನ‌ ಮಂತ್ರಿ‌ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದರೆ ಶಿಷ್ಟಾಚಾರದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಾಗೂ ಉಪ‌ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಖುದ್ದಾಗಿ ವಿಮಾನ‌ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದಾರೆ. ಇದರಿಂದ ಪಾಠ ಕಲಿಯಬೇಕಾಗಿದ್ದ ಪ್ರಿಯಾಂಕ್ ಖರ್ಗೆ ಅವರು ತಾವು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗಿಂತಲೂ ಮತ್ತು‌ ಪ್ರಧಾನಿಯವರಿಗಿಂತಲೂ ದೊಡ್ಡವರೆಂದು ಭಾವಿಸಿದಂತಿದೆ ಎಂದರು.

ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾಗ ಸ್ವಾಗತಿಸಿದರೆ ಇವರ ಗೌರವ ಹೆಚ್ಚುತ್ತಿತ್ತು ಆದರೆ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿಯನ್ನು ಸ್ವಾಗತಿಸಲು ಬಾರದಿರುವುದು ಉದ್ಧಟತನದ ಪರಮಾವಧಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here