ಕಲಬುರಗಿ: 12ನೇ ಶತಮಾನದ ವಚನಕಾರರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಒಬ್ಬರು. ಅವರ ವಚನಗಳಲ್ಲಿ ಆಧುನಿಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತನೆಗಳು ಬೆಳೆದಿವೆ. ಸರ್ವರಲ್ಲೂ ಸಮಾನತೆಯ ತತ್ವ ಸಾರಿದ ಬುದ್ಧನ ನಡೆಯಂತೆ ಚೌಡಯ್ಯನವರು ಸತ್ಯ ಸಂದೇಶವನ್ನು ಸಮಾಜದಲ್ಲಿ ಬಿತ್ತಿದರು. ಆದರೆ, ವಾಸ್ತವದಲ್ಲಿ ಜಾತಿ ಮತ್ತು ಧರ್ಮಗಳನ್ನು ಜೀವಂತಗೊಳಿಸಿ ಮಾನವೀಯ ಮೌಲ್ಯಗಳನ್ನು ಮರೆಯುತ್ತಿರುವುದು ವಿಷಾದಕರ ಸಂಗತಿ ಎಂದು ನೂತನ ವಿದ್ಯಾಲಯ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸೂರ್ಯಕಾಂತ ಸುಜ್ಯಾತ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ನಿಜ ಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಜಾತಿ ಭೂತವನ್ನು ಹರಡಲಾಗುತ್ತಿದೆ. ಜಾತಿ ಧರ್ಮ ಮೀರಿ ಬೆಳೆದ ಅಂಬಿಗರ ಚೌಡಯ್ಯ ಅವರು ತಮ್ಮ ವಚನ ಸಾಹಿತ್ಯದಲ್ಲಿ ಸತ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬಿಂಬಿಸಿದ್ದಾರೆ. ಅವರ ಸಾಹಿತ್ಯ ಕಠೋರವಾಗಿದ್ದರು ಸತ್ಯದಿಂದ ಕೂಡಿವೆ ಎಂದ ಅವರು ಅವರ ವಚನಗಳನ್ನು ಹೇಳುವ ಬದಲು ಅದರ ಸಾರವನ್ನು ಅರಿತು ನಡೆದರೆ ಬದುಕು ಸುಂದರವಾಗಲಿದೆ. ಸಮಾಜವೂ ಸುಧಾರಿಸುತ್ತದೆ. ಸಮಾಜದ ಕಂದಾಚಾರಗಳನ್ನು ವಿಡಂಬಿಸಿದ ಅವರ ಆಕರ್ಷಣಿಯ ಭಾಷೆ, ವಿಭಿನ್ನ ಶೈಲಿಯ ವಿಮರ್ಶೆ ಮತ್ತು ವೈಜ್ಞಾನಿಕ ವಿವೇಚನೆಯ ಸಾಹಿತ್ಯಕ್ಕೆ ನಿಜಶರಣ ಅಂಬಿಗರ ಚೌಡಯ್ಯ ಹೆಸರಾಗಿದ್ದಾರೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಶರಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಆಧುನಿಕ ಸಾಹಿತ್ಯ ಕ್ಷೇತ್ರಕ್ಕೆ ಆಧ್ಯಾತ್ಮ ಮತ್ತು ಅನುಭಾವ ಚಿಂತನೆಗಳನ್ನು ನಿಜಶರಣ ಅಂಬಿಗರ ಚೌಡಯ್ಯ ನೀಡಿದ್ದಾರೆ. ವಚನ ಸಾಹಿತ್ಯದ ಸೆಲೆಯಲ್ಲಿ ಸಾಮಾಜಿಕ ಸಮಸ್ಯೆಗಳ ಕುರಿತು ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಜೇಡರ ದಾಸಿಮಯ್ಯ ಶರಣರು ಬಡತನ ಮತ್ತು ಹಸಿವಿನ ತೀವ್ರತೆ ಕುರಿತು ಚಿಂತಿಸಿದ್ದಾರೆ. ಆದ್ಯಾತ್ಮ ಮತ್ತು ಅನುಭಾವಗಳ ಮೂಲಕ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಮೌಲಿಕ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಸಾಹಿತ್ಯದ ತಿರುಳಿನ ವೈಚಾರಿಕ ಆಲೋಚನೆಗಳು ಪ್ರತಿಯೊಬ್ಬರ ಬದುಕನ್ನು ಅಸನುಗೊಳಿಸುತ್ತವೆ. ಅವುಗಳ ಸಾರವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಡಾ. ಎಂ. ಬಿ. ಕಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ….. ಕಾರ್ಯಕ್ರಮದಲ್ಲಿ ವಿದ್ಯಾ ವಿಷೇಯಕ ಪರಿಷತ್ತಿನ ಸದಸ್ಯ ಡಾ. ಎಸ್. ಎಂ. ಹನಗೋಡಿ ಮಠ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ವಿತ್ತಾಧಿಕಾರಿ ಪ್ರೊ. ರಾಜನಳ್ಕರ್ ಲಕ್ಷ್ಮಣ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಬಿ. ವಿಜಯ, ಪತ್ರಿಕೋದ್ಯಮ ವಿಭಾಗದ ಡಾ. ಕೆ. ಎಂ. ಕುಮಾರಸ್ವಾಮಿ, ಸಂಗೀತ ವಿಭಾಗದ ಡಾ. ಲಕ್ಷಿö್ಮಶಂಕರ ಜೋಷಿ, ಪ್ರಕಾಶ ಹದನೂರ್ಕಾರ್, ಎಂಜಿನಿಯರ್ ವಿಭಾಗದ ರಾಜಪ್ಪ, ಅಶೋಕ್ ತೆಗಲಮಡಿ, ಡಾ. ಹನುಮಂತ ಮೇಲಕೇರಿ, ಕೋಲಿ ಸಮಾಜದ ಡಾ.ಟಿ.ಡಿ. ರಾಜಣ್ಣ, ಪಿಡ್ಡಪ್ಪ ಜಾಲಗಾರ ಸುರಪುರ, ನಾಗರಾಜ ಭಾಗವಹಿಸಿದ್ದರು.
ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಸಂತೋಷ ಕಂಬಾರ ಕಾರ್ಯಕ್ರಮ ನಿರೂಪಿಸಿದರು.ಡಾ.ವಸಂತ ನಾಸಿ ವಂದಿಸಿದರು.