ಕ್ಷೇತ್ರ ಕಾರ್ಯದಿಂದ ವಿಶೇಷ ಸಾಮರ್ಥ್ಯ ಬೆಳೆಯುತ್ತದೆ: ಪ್ರೊ. ದಯಾನಂದ ಅಗಸರ

0
20

ಕಲಬುರಗಿ : ಸಮಾಜದ ಏಳಿಗೆಗೆ ಶ್ರಮಿಸುವ ಸಮಾಜ ಕಾರ್ಯದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಮತ್ತು ಕ್ಷೇತ್ರ ಕಾರ್ಯದಿಂದ ವಿಶೇಷ ಚಿಂತನಾ ಸಾಮರ್ಥ್ಯ ಬೆಳೆಯುತ್ತದೆ. ಪ್ರಾಯೋಗಿಕ ಜ್ಞಾನದಿಂದ ವೃತ್ತಿ ಮತ್ತು ಪ್ರವೃತ್ತಿಗೆ ಪೂರಕ ಅನುಭವ ಸಿಗಲಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಂಲಗ್ನತೆ ಹೊಂದಿದ ಸಮಾಜಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಬಸವೇಶ್ವರ ಸಭಾಂಗಣದಲ್ಲಿ ಆಯೋಜಿಸಿದ ‘ ಜ್ಞಾನ ಸಂಗಮ: ಸಮಾಜ ಕಾರ್ಯ ಪ್ರಾಯೋಗಿಕತೆಯ ವಿಭಿನ್ನ ಕ್ಷೇತ್ರಗಳು’ ಒಂದು ದಿನದ ವಿಚಾರ ಸಂಕಿರಣವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಮಹಾರಾಷ್ಟ್ರದ ಪುಣೆಯ ಡೀಮ್ಡ್ ವಿಶ್ವವಿದ್ಯಾಲಯ ಭಾರತೀಯ ವಿದ್ಯಾಪೀಠದ ಸಮಾಜಕಾರ್ಯ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಡೀನ್ ಪ್ರೊ. ಬಿ.ಟಿ. ಲಾವಣೆ ಮುಖ್ಯ ಅತಿಥಿಯಾಗಿ ಮಾತನಾಡಿ ಭಾರತದ ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿ ವೃತ್ತಿ ಜ್ಞಾನ ಮತ್ತು ನೈಪುಣ್ಯತೆ ಪಡೆದರೆ ವಿದೇಶದ ಸರ್ಕಾರಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ ಸಿಗಲಿವೆ. ಅದಕ್ಕಾಗಿ ವೃತ್ತಿಪರ ಶಿಕ್ಷಣದಿಂದ ಅತ್ಯುತ್ತಮ ಜ್ಞಾನಗಳಿಸಿ ಎಂದ ಅವರು ಕೇವಲ ಪದವಿಯಿಂದ ಸಾಧನೆ ಸಾಧ್ಯವಿಲ್ಲ. ಅದರ ಜೊತೆಗೆ ವಿಭಿನ್ನ ಕ್ಷೇತ್ರಗಳ ವೈಜ್ಞಾನಿಕ ಜ್ಞಾನ ಮತ್ತು ವಿವಿಧ ಕ್ಷೇತ್ರಗಳ ಶೈಕ್ಷಣಿಕ ಜ್ಞಾನ ಅತಿ ಅವಶ್ಯಕ ಎಂದರು.

ಕುಲಸಚಿವ ಡಾ. ಬಿ. ಶರಣಪ್ಪ ಮಾತನಾಡಿ ಸಮಾಜ ಮತ್ತು ವಿಜ್ಞಾನ ಕಲಿಕೆ ಪರಿಣಾಮಕಾರಿಯಾಗಲು ವಿದ್ಯಾರ್ಥಿಗಳು ಪ್ರಾಯೋಗಿಕತೆಗೆ ಒತ್ತು ನೀಡಬೇಕು. ಜನರ ಬದುಕಿನ ನೋವು ನಲಿವುಗಳನ್ನು ಆಲಿಸಿ ಪರಿಹರಿಸುವ ಆಲೋಚನೆ ಸಮಾಜ ವಿಜ್ಞಾನ ವಿದ್ಯಾರ್ಥಿಗಳಿಗೆ ಅತಿ ಮುಖ್ಯ. ನೊಂದ ಜನರನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಜೊತೆಗೆ ಅವರ ಸೇವೆಗೆ ಸದಾ ಮಿಡಿಯಬೇಕು. ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಮತ್ತು ಸಮಕಾಲೀನ ಸಮಾಜವೇ ಪ್ರಯೋಗಶಾಲೆಯಾಗಿದೆ. ಜನರ ಸಮಸ್ಯೆಗಳ ಕಡೆ ಗಮನಹರಿಸಿ ಅವುಗಳನ್ನು ಪರಿಹರಿಸುವುದು ಉತ್ತಮ ಹಾಗೂ ಸಾರ್ಥಕ ಸೇವೆ ಎಂದರು.

ಸಮಾಜಕಾರ್ಯ ಅಧ್ಯಯನ ವಿಭಾಗದ ಸಂಯೋಜಕ ಪ್ರೊ. ಚಂದ್ರಕಾಂತ ಎಂ. ಯಾತನೂರ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕತೆ ಬೆಳೆಸಿಕೊಂಡರೆ ಮಾತ್ರ ಯಶಸ್ಸು ಸಾಧಿಸಬಹುದು. ಬೇರೆ ಬೇರೆ ವೃತ್ತಿ ಕ್ಷೇತ್ರಗಳ ಪರಿಜ್ಞಾನ ಹಾಗೂ ಪರೀಕ್ಷೆ ಎದುರಿಸುವ ಸಾಮರ್ಥ್ಯ ನಿಮಗೆ ಗುರಿ ತಲುಪಲು ಸಹಕಾರಿ ಎಂದರು.

ಸಮಾಜಕಾರ್ಯ ವಿಭಾಗದ ಅತಿಥಿ ಉಪನ್ಯಾಸಕ ಡಾ. ಯಲ್ಲಾಲಿಂಗ ಕಾಳನೂರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜ ಕಾರ್ಯ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪ್ರಾಯೋಗಿಕ ಕಾರ್ಯ ಮತ್ತು ಕ್ಷೇತ್ರ ಕಾರ್ಯದ ಅನುಭವ ಮುಖ್ಯವಾಗಿದೆ. ಸಮಾಜದ ಜನರ ಸಮಸ್ಯೆ ಪರಿಹರಿಸುವ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.

ಸಮಾಜಕಾರ್ಯ ವಿಭಾಗದವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ,ಹಾಗೂ ಸಂಲಗ್ನತೆ ಹೊಂದಿರುವ ಸಮಾಜ ಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು. ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಶ್ರೀ ರಾಮುಲು, ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ದಶರಥ ನಾಯಕ್ ಉಪಸ್ಥಿತರಿದ್ದರು. ಅತಿಥಿ ಉಪನ್ಯಾಸಕ ಅರುಣ್ ಬೇಂದ್ರೆ ವಂದಿಸಿದರು.

ವಿದ್ಯಾರ್ಥಿನಿ ಆಲಮ್ಮ ಪ್ರಾರ್ಥಿಸಿದರು. ಅತಿಥಿ ಉಪನ್ಯಾಸಕಿ ಡಾ. ಮೀನಾಕ್ಷಿ ಲಕ್ಷ್ಮಣರಾವ್ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here