ಬಾವಿ, ಕಲ್ಯಾಣಿಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ

0
53

ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಪುರಾತನ ಕಾಲದ ಬಾವಿ, ಕಲ್ಯಾಣಿ, ಗೋಕಟ್ಟೆ, ಪುಷ್ಕರಣಿಗಳನ್ನು ಸಂರಕ್ಷಿಸುವ ಮತ್ತು ಪ್ರವಾಸೋದ್ಯಮ ದೃಷ್ಠಿಯಿಂದ ಅಭಿವೃದ್ಧಿಪಡಿಸುವ ಕುರಿತು ಸಮಗ್ರ ಕ್ರಿಯಾ ಯೋಜನೆ ರೂಪಿಸುವಂತೆ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಬಾವಿ, ಕಲ್ಯಾಣಿಗಳ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ನಡೆಸಿದ ಸಭೆಯಲ್ಲಿ ಮಾತನಾಡುತ್ತ, ಈ ಕುರಿತಂತೆ ಸೂಕ್ತ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿ ಅಭಿವೃದ್ಧಿಗೆ ಅನುದಾನ ಪಡೆಯುವುದು. ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನವನ್ನು ಐತಿಹಾಸಿಕ ಪರಂಪರೆ ತಾಣಗಳ ಅಭಿವೃದ್ಧಿಗಾಗಿಯೆ ಪ್ರಾಯೋಜನೆ ಮಾಡಿಕೊಂಡಿರುವ ಹೈ.ಕ. ಮಂಡಳಿ ಅನುದಾನದಲ್ಲಿ ಒದಗಿಸಲಾಗುವುದು ಎಂದರು. ಬಾವಿ, ಕಲ್ಯಾಣಿಗಳನ್ನು ನರೇಗಾ ಯೋಜನೆಯಡಿ ಹೂಳೆತ್ತಿಸಿ ಅವುಗಳ ಒಳ ಝರಿಗಳ ಮೂಲಗಳನ್ನು ಬತ್ತದಂತೆ ಸ್ವಚ್ಛಗೊಳಿಸುವುದು. ಇದರಿಂದ ಬೇಸಿಗೆ ಸಂದರ್ಭದಲ್ಲಿ ಈ ಜಲಮೂಲಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದಲ್ಲದೆ ಪುರಾತನ ಕಾಲದ ಐತಿಹಾಸಿಕ ತಾಣಗಳನ್ನು ನಮ್ಮ ಮುಂದಿನ ಪೀಳಿಗಗೆ ಪರಿಯಿಸಿದಂತಾಗುತ್ತದೆ. ಕಲಬುರಗಿ ಕೋಟೆ ಸುತ್ತಮುತ್ತ ಇರುವ ೨.೫ ಕಿ.ಮಿ. ಕೆನೆಲ್ಲನ್ನು ಸ್ವಚ್ಛಗೊಳಿಸಿ ಮಳೆ ನೀರು ಸಂಗ್ರಹಿಸಿಕೊಂಡು ಇಲ್ಲಿಂದಲೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಮತ್ತು ಪ್ರವಾಸೋದ್ಯಮದ ಭಾಗವಾಗಿ ಬೋಟಿಂಗ್ ವ್ಯವಸ್ಥೆ ಮಾಡುವ ಸಂಬಂಧ ಸಹ ಪರಿಶೀಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ ಅವರಿಗೆ ಆರ್.ಸಿ. ಸೂಚಿಸಿದರು.
ಮ್ಯೂಸಿಯಂಗೆ ಹೆಚ್ಚುವರಿ ನಿವೇಶನ ನೀಡಲು ಸೂಚನೆ: ಕಲಬುರಗಿಯ ಬುದ್ಧ ವಿಹಾರ ಬಳಿ ಹೈ.ಕ ಭಾಗದ ಕಲೆ, ಸಾಹಿತ್ಯ, ವಾಸ್ತುಶಿಲ್ಪವನ್ನು ಪರಿಚಯಿಸುವ ಮತ್ತು ಇಲ್ಲಿ ಪತ್ತೆಯಾಗಿರುವ ನೇಕ ಶಿಲಾ ಶಾಸನಗಳನ್ನು ಸಂರಕ್ಷಣೆ ನಿಟ್ಟಿನಲ್ಲಿ ಹೈ.ಕ.ಮಂಡಳಿಯ ೬ ಕೋಟಿ ಮೊತ್ತದ ನೆರವಿನೊಂದಿಗೆ ಒಟ್ಟಾರೆ ೧೮ ಕೋಟಿ ರೂ. ವೆಚ್ಚದಲ್ಲಿ ಹೆರಿಟೇಜ್ ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಈಗಾಗಲೆ ೫ ಎಕರೆ ಪ್ರದೇಶವನ್ನು ಸಹ ಪ್ರವಾಸೋದ್ಯಮ ಇಲಾಖೆಗೆ ಮಂಜೂರು ಮಾಡಿ ಹಸ್ತಾಂತರಿಸಲಾಗಿದೆ. ಇನ್ನು ಇದಕ್ಕೆ ಅಗತ್ಯವಿರುವ ಇನ್ನುಳಿದ ೩೦ ಗುಂಟೆ ಪ್ರದೇಶವನ್ನು ನಗರಾಭಿವೃದ್ಧಿ ಪ್ರಾಧಿಕಾರದದಿಂದ ಸಿ.ಎ.ಸೈಟ್ ಮಂಜೂರು ಮಾಡುವಂತೆ ಕುಡಾ ಆಯುಕ್ತ ರಾಚಪ್ಪ ಅವರಿಗೆ ನಿರ್ದೇಶನ ನೀಡಿದರು.

Contact Your\'s Advertisement; 9902492681

ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ ಮಿತುನ್ ರೆಡ್ಡಿ ಮಾತನಾಡಿ ಚಾಲುಕ್ಯಾ ಮತ್ತು ಬಹಮನಿ ಅವರ ಆಡಳಿತಕ್ಕೊಳಪಟ್ಟ ಕಲಬುರಗಿ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ದೇವಸ್ಥಾನಗಳು, ಕಲ್ಯಾಣಿಗಳು ಸಂರಕ್ಷಣೆ ಮತ್ತು ತಿಳುವಳಿಕೆಯಿಲ್ಲದೆ ಸಾರ್ವಜನಿಕರಿಂದ ಅತಿಕ್ರಮಣಕ್ಕೊಳಗಾಗಿ ಅವನತಿಯ ಅಂಚಿನಲ್ಲಿವೆ. ಕಲಬುರಗಿಯ ಹಂಪಿ ಎಂದು ಕರೆಯಲ್ಪಡುವ ಕಾಳಗಿಯಲ್ಲಿ ೨ ಜೈನ್, ೫ ಹಿಂದೂ ದೇವಸ್ಥಾನಗಳಿದ್ದು ಅವು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ. ಐಹೊಳೆ ಮಾದರಿಯಂತೆ ಚಿತ್ತಾಪುರ ತಾಲೂಕಿನ ದಿಗ್ಗಾವಿಯಲ್ಲಿ ಕಲ್ಯಾಣಿ ಚಾಲುಕ್ಯರು ಸ್ಥಾಪಿಸಿರುವ ೬೦ ಲಿಂಗದ ಗುಡಿಗಳು ಯಾವುದೇ ಗುರುತಿಲ್ಲದೆ ನಶಿಶುವ ಹಂತದಲ್ಲಿವೆ. ಇದರೊಂದಿಗೆ ಯಡ್ರಾಮಿಯ ರಾಮಲಿಂಗೇಶ್ವರ ತೀರ್ಥ, ಚಿಂಚನಸೂರು, ರುಮ್ಮನಗುಡ, ಮೋಘಾದಲ್ಲಿರುವ ದೇವಸ್ಥಾನ ಹಾಗೂ ಕಲ್ಯಾಣಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದಲ್ಲಿ ಇವು ಪ್ರವಾಸಿ ತಾಣಗಳಾಗಿ ರೂಪಗೊಳ್ಳುತ್ತವೆ ಎಂದು ವಿವರಿಸಿದರು.
ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ ಸಂದೀಪ್ ಠಾಕೂರ ಮಾತನಾಡಿ ಕಲಬುರಗಿ ನಗರದ ಹೀರಾಪುರ, ಮಹಾದೇವ ನಗರ ಸೇರಿದಂತೆ ಚಿತ್ತಾಪುರ, ಪೇಠಶಿರೂರ, ಮೋಘಾ, ಕಾಳಗಿ, ನರೋಣಾ, ಹೊಳಕುಂದಾ ಹೀಗೆ ಒಟ್ಟಾರೆ ೧೪ ಕಲ್ಯಾಣಿಗಳಿದ್ದು, ಇವುಗಳ ಜೀರ್ಣೋದ್ಧಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಬಾವಿ, ಕಲ್ಯಾಣಿ, ಪುಷ್ಕರಣಿ, ಗೋಕಟ್ಟೆ ಒಟ್ಟು ೧೩೪ ಗಳಿದ್ದು, ಇವುಗಳ ಜೀರ್ಣೋದ್ಧಾರಕ್ಕಾಗಿ ತಗಲಬಹುದಾದ ವೆಚ್ಚವನ್ನು ಅಂದಾಜಿಸಲಾಗಿದೆ ಎಂದು ಕೆ.ಎಸ್.ಸಿ.ಎಸ್.ಟಿ ಅಧಿಕಾರಿ ಭೀಮಸೇನ್ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ಶರತ್, ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ, ಐ.ಎ.ಎಸ್. ಪ್ರೊಬೇಷನರ್ ಅಧಿಕಾರಿ ಡಾ.ಗೋಪಾಲಕೃಷ್ಣ ರಾಘವೇಂದ್ರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಫೀಕ್ ಲಾಡಜಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here