ಮುಂದಿನವಾರ ಗುಲ್ಬರ್ಗಾ ವಿಮಾನ ನಿಲ್ದಾಣದ 676 ಎಕರೆ ಭೂಮಿ ಎಎಐಗೆ ಹಸ್ತಾಂತರ

0
145

ಕಲಬುರಗಿ: ಗುಲ್ಬರ್ಗಾ ವಿಮಾನ ನಿಲ್ದಾಣಕ್ಕಾಗಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು ೭೪೩ ಎಕರೆ ೧೩ ಗುಂಟೆ ಭೂಮಿ ಪೈಕಿ 676 ಎಕರೆ ೧೧ ಗುಂಟೆ ಭೂಮಿಯನ್ನು ಮುಂದಿನವಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಹೆಚ್‌ಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ್ ಯಾದವ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಕಲಬುರಗಿ ವಿಮಾನ ನಿಲ್ದಾಣದ ಭೂ ಸ್ವಾಧೀನ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.  ಧಾರವಾಡದ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ವಶಪಡಿಸಿಕೊಂಡ ೫೬೭.೧೦ ಎಕರೆ, ಕಲಬುರಗಿ ಉಪವಿಭಾಗಾಧಿಕಾರಿ ಭೂಸ್ವಾಧೀನ ಮಾಡಿಕೊಂಡ ೧೨೭.೨೦ ಎಕರೆ ಹಾಗೂ ಜಿಲ್ಲಾಧಿಕಾರಿಗಳು ಖರೀದಿಸಿದ ೪೮.೨೩ ಎಕರೆ ಜಮೀನು ಸೇರಿ ಒಟ್ಟು ೭೪೩.೧೩ ಎಕರೆ ಇದ್ದು, ಈ ಪೈಕಿ ೬೬ ಎಕರೆ ೨ ಗುಂಟೆ ಮಾತ್ರ ಮ್ಯೂಟೇಶನ್ ಬಾಕಿ ಇದೆ. ಇದನ್ನು ನಂತರ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿಗಳಾದ ಬಿ. ಶರತ್ ಅವರು ಪಿಪಿಟಿ ಮೂಲಕ ನಿಲ್ದಾಣಕ್ಕೆ ಭೂಸ್ವಾಧೀನ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ವಿವರಿಸಿದರು.

Contact Your\'s Advertisement; 9902492681

ವಿಮಾನ ನಿಲ್ದಾಣದಲ್ಲಿ ಕೈಗೊಂಡಿರುವ ಮೂರು ರೀತಿಯ ಪ್ಯಾಕೇಜ್‌ಗಳ ವಿವಿಧ ಕಾಮಗಾರಿಗಳು ಬಹುತೇಕ ಮುಗಿಯುತ್ತಾ ಬಂದಿದ್ದು, ಸೆಪ್ಟೆಂಬರ್ ೨೦ರೊಳಗೆ ಮುಗಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಪ್ರಾದೇಶಿಕ ಆಯುಕ್ತರು ಸ್ರಚಿಸಿದರು. ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ರಮೇಶ್ ಎಸ್.ಎನ್. ಅವರು ಮಾತನಾಡಿ, ಸೆಪ್ಟೆಂಬರ್ ೨೦ರೊಳಗೆ ಹಸ್ತಾಂತರದ ಎಲ್ಲಾ ದಾಖಲೆಗಳನ್ನು (ಇನ್‌ವೆಚಿಟ್ರಿ) ಸಲ್ಲಿಸಲಾಗುವುದು ಎಂದು ಹೇಳಿದರು. ಕುಡಿಯುವ ನೀರು, ವಿದ್ಯುತ್ ಮುಂತಾದವುಗಳನ್ನು ಪರಸ್ಪರ ತಿಳುವಳಿಕಾ ಒಪ್ಪಂದದಂತೆ ೧೦ ವರ್ಷಗಳ ಕಾಲ ಉಚಿತವಾಗಿ ಪ್ರಾಧಿಕಾರಕ್ಕೆ ನೀಡಬೇಕಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಸ್ರಚಿಸಿದರು.

೬ ಕೋಟಿ ರೂಪಾಯಿ ವೆಚ್ಚದಲ್ಲಿ ೧೦ ಹೆಚ್ಚುವರಿ ಕಾಮಗಾರಿಗಳು ನಡೆದಿದ್ದು, ಈ ಪೈಕಿ ವಿಮಾನ ತಾಂತ್ರಿಕ ದೋಷ ಸಂದರ್ಭದಲ್ಲಿ ವಿಮಾನ ನಿಯಂತ್ರಿಸಲು ರನ್‌ವೇ ಕೊನೆಯಲ್ಲಿ ಮರಳು ಮತ್ತು ಮೆಟಲ್ ಬಳಸಿ ತಡೆ ನಿರ್ಮಾಣ, ಓವರ್ ಹೆಡ್ ಟ್ಯಾಂಕ್ ಸಮೀಪ ಕೂಲಿಂಗ್ ಫಿಟ್, ಕ್ರ್ಯಾಶ್ ಗೇಟ್, ಸಣ್ಣೂರು ಬಳಿಯ ರನ್‌ವೇ ಸಮೀಪವಿರುವ ತಗ್ಗುಗಳನ್ನು ಮುಚ್ಚುವ ಕಾರ್ಯವನ್ನು ತುರ್ತಾಗಿ ಮುಗಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಇಂಜಿನೀಯರುಗಳಿಗೆ ಸ್ರಚಿಸಿದರು. ವಿಮಾನ ನಿಲ್ದಾಣ ಸುತ್ತ ಎತ್ತರದ ಕಂಪೌಚಿಡ್, ಚೈನ್ ಲಿಂಠಿ ಬೇಲಿ, ಅಗ್ನಿ ಅವಘಡಗಳ ಮೇಲೆ ನಿಗಾವಹಿಸುವ ಕಾವಲು ಗೋಪುರ ಮುಂತಾದವುಗಳ ನಿರ್ಮಾಣಕ್ಕೂ ಕ್ರಮಕೈಗೊಳ್ಳಬೇಕು ಎಂದು ಸ್ರಚಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವಿಮಾನ ನಿಲ್ದಾಣದ ನಿರ್ದೇಶಕ ಸುಶೀಲ್ ಕುಮಾರ್ ಅವರು ಮಾತನಾಡಿ, ಲಿಫ್ಟ್ ಸುರಕ್ಷತೆ, ಅಗ್ನಿಶಾಮಕ ಇಲಾಖೆ, ಪರಿಸರ ಇಲಾಖೆ ಮುಂತಾದ ಇಲಾಖೆಗಳಿಂದ ನಿರಾಪೇಕ್ಷಣಾ ಪತ್ರ ( ಎನ್‌ಓಸಿ) ಶೀಘ್ರ ನೀಡಬೇಕಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಈ ಕುರಿತು ಜಿಲ್ಲೆ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಎಸ್.ಕೆ. ಲಕ್ಕಪ್ಪ ಅವರು ಮಾತನಾಡಿ, ಕೇಂದ್ರ ಕಚೇರಿಗೆ ಪತ್ರ ಬರೆದಿದ್ದು, ಪರಿವೀಕ್ಷಣೆ ಮಾಡಿದ ನಂತರ ಪ್ರಾಧಿಕಾರಕ್ಕೆ ನಿರಾಪೇಕ್ಷಣಾ ಪತ್ರ (ಎನ್‌ಓಸಿ) ನೀಡಲಾಗುವುದು ಎಂದು ಅವರು ವಿವರಿಸಿದರು. ಬೆಳಗಾವಿ ವಿಮಾನ ನಿಲಾಣದಂತೆ ಇಲ್ಲಿಯೂ ಕೂಡ ತರಬೇತಿ ಕೊಡಿಸಿ ಕೇಂದ್ರ ಕೈಗಾರಿಕಾ ಭದ್ರತಾ ನಿಯೋಜನೆ ಮಾಡಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಕೇಂದ್ರ ಕೈಗಾರಿಕಾ ಭದ್ರತಾ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಪ್ರಾದೇಶಿಕ ಆಯುಕ್ತರು, ಸದ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯೇ ಸ್ಥಳೀಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ನಿರ್ವಹಿಸಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಕಲಬುರಗಿ ಆಯುಕ್ತಾಲಯದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿ. ಕಿಶೋರಬಾಬು, ಕಲಬುರಗಿ ಉಪವಿಭಾಗಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ.ಗೋಪಾಲಕೃಷ್ಣ, ಗುಲಬರ್ಗಾ ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರರಾವ್ ಮುಂತಾದ ವಿವಿಧ ಇಲಾಖೆಯ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಹಾಜರಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟ್ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here