ಕಲಬುರಗಿ: ಸಂವಿಧಾನದ 75 ನೇ ವರ್ಷಾಚರಣೆ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನವರಿ 26 ರಂದು ಮಧ್ಯಾಹ್ನ 1.30 ಕ್ಕೆ ನಗರದ ಕನ್ನಡ ಭವನದಲ್ಲಿ `ಸಂವಿಧಾನ ಜಾಗೃತಿ ಕವಿಗೋಷ್ಠಿ’ಯೊಂದನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಶೋಷಿತರಿಗೆ, ಅವಕಾಶ ವಂಚಿತರಿಗೆ ಡಾ.ಅಂಬೇಡ್ಕರ್ ಅವರು ಕೊಟ್ಟ ಭಾರತದ ಸಂವಿಧಾನ ಪ್ರೇರಣಾ ಶಕ್ತಿಯಾಗಿದೆ. ವೈಚಾರಿಕ ಆಲೋಚನೆಗಳ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು. ಭಾರತವು ಬಹುತ್ವದ ರಾಷ್ಟ್ರವಾಗಿದ್ದು, ವೈವಿಧ್ಯತೆಯಲ್ಲಿ ಏಕತೆ ಇರುವ ನೆಲವಾಗಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ನಮ್ಮನ್ನು ಅದು ರಕ್ಷಿಸಲಿದೆ. ಆ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಸಮಾಜದಲ್ಲಿ ಸಾಮಾಜಿಕ ಜಾಗೃತಿಗಾಗಿ ಈ ಭಾಗದ ಅನೇಕ ಕವಿಗಳು ತಮ್ಮ ಸ್ವ ರಚಿತ ಕವನಗಳು ವಾಚಿಸಲಿದ್ದಾರೆ.
ಪ್ರಚಲಿತ ವಿದ್ಯಮಾನಗಳಿಗೆ ಶಬ್ದ ಮತ್ತು ಭಾವದ ಅರ್ಥವನ್ನು ಭಾಗವಹಿಸುವ ಕವಿಗಳು ತನ್ಮಯತೆಯಿಂದ ವಿಲೀನಗೊಳಿಸಿ ಕಾವ್ಯದ ರೂಪ ನೀಡಲಿದ್ದಾರೆ. ಆ ಮೂಲಕ ವಿಶ್ವದ ಬಹು ದೊಡ್ಡ ಸಂವಿಧಾನವಾಗಿರುವ ಭಾರತದ ಸಂವಿಧಾನದ ಆಶಯಗಳನ್ನು ಇಂದಿನ ಸಮಾಜಕ್ಕೆ ಮುಟ್ಟಿಸಲಿದ್ದಾರೆ.
ಕವಿಗಳಾದ ನರಸಿಂಗರಾವ ಹೇಮನೂರ, ಭೀಮರಾಯ ಹೇಮನೂರ, ಧರ್ಮಣ್ಣಾ ಹೆಚ್ ಧನ್ನಿ, ಡಾ. ಕೆ.ಗಿರಿಮಲ್ಲ, ಸುರೇಖಾ ಜೇವರ್ಗಿ, ಉಷಾ ಗೊಬ್ಬೂರ, ವೆಂಕುಬಾಯಿ ರಜಪೂತ, ವೃಷಭೇಂದ್ರ ಹಿರೇಮಠ, ಗಂಗಮ್ಮಾ ನಾಲವಾರ, ಸ್ವಾತಿ ಬಿ ಕೋಬಾಳ, ಹಣಮಂತರಾವ ಘಂಟೇಕರ್, ರವಿ ಎಲ್ ಹೂಗಾರ, ಸಂತೋಷ ಕುಂಬಾರ, ರವೀಂದ್ರ ಬಿ.ಕೆ., ರಾಜೇಂದ್ರ ಝಳಕಿ, ಕವಿತಾ ಕಾವಳೆ ಸೇರಿದಂತೆ ಅನೇಕ ಕವಿಗಳು ಭಾಗವಹಿಸಲಿದ್ದಾರೆ.
ಹಿರಿಯ ಸಾಹಿತಿ ಎಸ್.ಪಿ. ಸುಳ್ಳದ್ ಕವಿಗೋಷ್ಠಿಗೆ ಚಾಲನೆ ನೀಡಲಿದ್ದು, ಹಿರಿಯ ಲೇಖಕ ಅಮೃತ ಡಿ. ದೊಡ್ಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಶಯ ನುಡಿಗಳನ್ನಾಡಲಿದ್ದು, ಪ್ರಮುಖರಾದ ಕನ್ನಡ ಸೈನ್ಯದ ಸಂಸ್ಥಾಪಕ ಸೋಮನಾಥ ಕಟ್ಟಿಮನಿ, ಮಹಿಳಾಪರ ಸಂಘಟಕಿ ಗೌರಿ ಚಿಚಕೋಟಿ, ಉಪನ್ಯಾಸಕ ಪ್ರವೀಣ ರಾಜನ್ ಶಹಾಬಾದ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.