ಕಲಬುರಗಿ: ಕೋಲಿ–ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕು ಎಂದು ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸು ಹಿಂದಕ್ಕೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಕೋಲಿ–ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಎಸ್.ಜಮಾದಾರ ತಿಳಿಸಿದರು.
2014ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಅಂದಿನ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಕೋಲಿ–ಕಬ್ಬಲಿಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಶಿಫಾರಸು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕಡತ ಕಳುಹಿಸಿದ್ದರು. ಈಗಿನ ಕೇಂದ್ರ ಸರ್ಕಾರ ಅದನ್ನು ವಾಪಸ್ ಕಳುಹಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಉಮೇಶ ಜಾಧವ ಅವರು ನಿಯೋಗ ಕರೆದುಕೊಂಡು ಹೋಗಿ ದೆಹಲಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಬೇಕು. ಕೋಲಿ–ಕಬ್ಬಲಿಗ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮನವೊಲಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸಿಲ್ಲ. ಇಷ್ಟು ದಿನ ಕಡತ ಇಟ್ಟುಕೊಂಡು ಈಗ ವಾಪಸ್ ಕಳಿಸಲಾಗಿದೆ. ಇಷ್ಟು ದಿನ ಸಂಸದರು ಏನು ಮಾಡಿದರು ಎಂದು ಪ್ರಶ್ನಿಸಿದರು.
ರೇವಣಸಿದ್ದಪ್ಪ, ರಾಮು ಉಮ್ಮರ್ಗಿ, ಆನಂದ ಪೆಂಚನಕಳ್ಳಿ, ಸತೀಶ ಜಮಾದಾರ, ರಾಮಲಿಂಗ ನಾಟಿಕರ್, ಪಿಂಟು ಜಮಾದಾರ ಉಪಸ್ಥಿತರಿದ್ದರು.