ವಾಸ್ತವದ ಸಾಂಸ್ಕೃತಿಕ ನಾಯಕ ಬಸವಣ್ಣ

0
155

ಕಲಬುರಗಿ: ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳಿಗೆ ಬಲವಾದ ಪೆಟ್ಟು ಕೊಟ್ಟಿದ್ದಾರೆ ಎಂದು ಶಹಾಪುರದ ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಮತ್ತು ಬಸವಪರ ಸಂಘಟನೆಗಳ ಒಕ್ಕೂಟ,
ಇವುಗಳ ಸಹಯೋಗದೊಂದಿಗೆ ಜಾಗತಿಕ ಲಿಂಗಾಯತ ಮಹಾಸಭಾ ಸಂಸ್ಥಾಪನಾ‌ ದಿನಾಚರಣೆ ನಿಮಿತ್ತ ನಗರದ ಬಸವ ಮಂಟಪದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬಸವಣ್ಣ ಸಾಂಸ್ಕೃತಿಕ ನಾಯಕ ಹಾಗೆಂದರೇನು? ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಬಹು ಸಂಸ್ಕೃತಿಯ ನಮ್ಮ ದೇಶದಲ್ಲಿ ಏಕಮುಖಿ ಸಂಸ್ಕೃತಿಯೆಡೆಗೆ ಹೊರಟಿರುವುದು ಆತಂಕದ ವಿಷಯ ಎಂದು ಬಣ್ಣಿಸಿದರು.

Contact Your\'s Advertisement; 9902492681

ಲಿಂಗಾಯತ ಎನ್ನುವುದು ಜಾತಿ ಸೂಚಕ ಪದವಲ್ಲ. ಅದು ಜಾತಿ ಸಂಕರಗೊಂಡ ಕುಲವಾಗಿದೆ. ಮೂಲಭೂತವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಇಂದಿಗೂ ವೈದಿಕ ಆಚರಣೆಗಳಲ್ಲಿ ತೊಡಗಿರುವುದು ದುರಂತದ ಸಂಗತಿ ಎಂದು ಹೇಳಿದರು.

ಉಳ್ಳವರು ಶಿವಾಲಯ ಮಾಡುವರು, ಅರಿವೇ ಗುರು, ಆಚಾರವೇ ಲಿಂಗ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ, ನಡೆ-ನುಡಿ ಒಂದಾಗಿರಬೇಕು ಎಂದು ಹೇಳಿದ ಶರಣರ ವಿಚಾರ, ಸಂಸ್ಕೃತಿ ಮರೆತು ದೇವಾಲಯ ಸಂಸ್ಕೃತಿಯೆಡೆಗೆ ಸಾಗುತ್ತಿರುವುದು ವಿಷಾದದ ಸಂಗತಿ ಎಂದು ಬಣ್ಣಿಸಿದರು.

ವೇದ, ಶಾಸ್ತ್ರ, ಪುರಾಣ ಮೀರಿದ ನೆಲಮೂಲ ಲಿಂಗಾಯತ ಸಂಸ್ಕೃತಿಗೆ ಬಸವಣ್ಣನೇ ನಾಯಕ. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಕನ್ನಡದ ಮೊಟ್ಟ ಮೊದಲ ಸಂಸ್ಕೃತಿ. ಬಸವಣ್ಣನವರು ವಾಸ್ತವ ಸಂಸ್ಕೃತಿಯ ಹರಿಕಾರರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ ಮಹಾಗಾಂವಕರ್ ಮಾತನಾಡಿ, ಲಿಂಗಾಯತ ಮಹಿಳೆಯರು ಮೂಢನಂಬಿಕೆ, ಕಂದಾಚಾರ ತೊರೆದು ಶರಣತತ್ವ ಮೈಗೂಡಿಸಿಕೊಳ್ಳಬೇಕು. ಮಹಿಳೆಯರು ಸಂಘಟನಾತ್ಮಕವಾಗಿ ಬೆಳೆಯಬೇಕು ಎಂದು ಕರೆ ನೀಡಿದರು.

ಶಹಾಪುರದ ಸಾಹಿತಿ ಶಿವಣ್ಣ ಇಜೇರಿ, ವಚನೋತ್ಸವ ಪ್ರತಿಷ್ಠಾನದ ಬಸವರಾಜ ಧೂಳಾಗುಂಡಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಉಪಾಧ್ಯಕ್ಷ ನೀಲಕಂಠರಾಯ ಅವಂಟಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ ವೇದಿಕೆಯಲ್ಲಿದ್ದರು.

ಗುರುಬಸಪ್ಪ ಪಾಟೀಲ ನಿರೂಪಿಸಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.‌ಶಿವರಂಜನ ಸತ್ಯಂಪೇಟೆ ಸ್ವಾಗತಿಸಿದರು. ಕಲ್ಯಾಣಪ್ಪ ಬಿರಾದಾರ ಪ್ರಾರ್ಥನೆಗೀತೆ ಹಾಡಿದರು.

ಹಣಮಂತರಾವ ಪಾಟೀಲ ಕುಸನೂರ, ನಾಗೇಂದ್ರಪ್ಪ ಮಾಡ್ಯಾಳೆ, ಕಮಲಾಬಾಯಿ ಶಾಬಾದಿ, ನಾಗರಾಜ ನಿಂಬರ್ಗಿ, ಸಿದ್ರಾಮಪ್ಪ ಲದ್ದೆ, ರಮೇಶ ಧುತ್ತರಗಿ, ಶಿವಶರಣಪ್ಪ ದೇಗಾಂವ, ಮಹಾಂತೇಶ ಅವಂಟಿ ಇತರರು ಇದ್ದರು.

ನಮ್ಮದು ಕೊಲ್ಲುವ, ಇರಿಯುವ ಸಂಸ್ಕೃತಿ ಅಲ್ಲ. ಪರಸ್ಪರ ಪ್ರೀತಿಸುವ, ಒಪ್ಪಿ, ಅಪ್ಪಿಕೊಳ್ಳುವ ಸಂಸ್ಕೃತಿ. ಧರ್ಮ ಬೆಂಕಿ ಆಗಬಾರದು. ಧರ್ಮ ಬೆಳಕಾಗಬೇಕು. -ವಿಶ್ವಾರಾಧ್ಯ ಸತ್ಯಂಪೇಟೆ, ಶರಣ ಚಿಂತಕ, ಶಹಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here