ಮುಸ್ಲಿಂ ಅಂಗಡಿ ಮೇಲೆ ಕಲ್ಲು ತೂರಾಟ: 6 ಜನರ ವಿರುದ್ಧ ಪ್ರಕರಣ ದಾಖಲು | ವಾಡಿಯಲ್ಲಿ ನಿಷೇದಾಜ್ಞೆ ಜಾರಿ

0
307

ವಾಡಿ: ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ಅಯೋಧ್ಯ ರಾಮ ಮಂದಿರ ಸಂಭ್ರಮಾಚರಣೆ ವೇಳೆ ಎರಡು ಕೋಮುಗಳ ಮಧ್ಯೆ ಗಲಾಟೆ ನಡೆದು ಕಲ್ಲು ತೂರಾಟಕ್ಕೆ ಕಾರಣವಾಗಿದ್ದು, ಪರಸ್ಥಿತಿ ನಿಯಂತ್ರಿಸಲು ಜ.22ರ ಮಧ್ಯ ರಾತ್ರಿಯಿಂದ ಜ.25ರ ಬೆಳಗ್ಗೆ 6:00 ಗಂಟೆಯ ವರೆಗೆ ಕಲಂ 144 ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ಶ್ರೀರಾಮ ಮೂರ್ತಿಯ ಮೆರವಣಿಗೆ ನಡೆಸಲು ನಿರಾಕರಿಸಿದ್ದ ಪೊಲೀಸರ ಸರ್ಪಗಾವಲಿನಲ್ಲೇ ಮೂರ್ತಿ ಲಕ್ಷ್ಮೀನಾರಾಯಣ ಮಂದಿರ ವರೆಗೆ ತರಲಾಗುತ್ತಿತ್ತು. ಈ ವೇಳೆ ಸೇರಿದ್ದ ಸಾವಿರಾರು ಜನ ಹಿಂದೂ ಕಾರ್ಯಕರ್ತರು, ಘೋಷಣೆಗಳನ್ನು ಮೊಳಗಿಸುತ್ತ ಬಸ್ ನಿಲ್ದಾಣ ತಲುಪಿದ್ದರು. ಮೆರವಣಿಗೆ ಇನ್ನಷ್ಟು ದೂರ ಸಾಗಬೇಕಿತ್ತು. ಆದರೆ ಉದ್ರಿಕ್ತ ಕೆಲ ಹಿಂದೂ ಕಾರ್ಯಕರ್ತರು, ಬಸ್ ನಿಲ್ದಾಣ ಹತ್ತಿರವಿದ್ದ ಝಹೂರ್ ಖಾನ್ ಎಂಬುವವರಿಗೆ ಸೇರಿದ ಮಾಂಸದೂಟದ ಅಂಗಡಿಯ ಮೇಲೆ ಕಲ್ಲೆಸೆದರು ಎಂಬ ಕಾರಣಕ್ಕೆ ಗಲಾಟೆ ಭುಗಿಲೆದ್ದಿತು.

Contact Your\'s Advertisement; 9902492681

ಜೈ ಶ್ರೀರಾಮ ಘೋಷಣೆ ಮುಗಿಲು ಮುಟ್ಟಿತು. ಕಲ್ಲೇಟಿನಿಂದ ಗಾಯಗೊಂಡ ಝಹೂರ್ ಖಾನ್ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯಿಂದ ಕುಪಿತಗೊಂಡ ಮುಸ್ಲಿಂ ಸಮುದಾಯದ ನೂರಾರು ಯುವಕರು ಅಂಗಡಿ ಮುಂದೆ ಜಮಾಯಿಸಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂ ಯುವಕರ ಈ ಆಕ್ರೋಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಪರಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಎರಡು ಗುಂಪುಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಪರಸ್ಥಿತಿ ನಿಯಂತ್ರಣಕ್ಕೆ ತರುವ ಮೂಲಕ ಸಂಭವಿಸಬಹುದಾಗಿದ್ದ ಕೋಮು ಸಂಘರ್ಷವನ್ನು ತಡೆದರು. ಪರಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವ ಪೊಲೀಸ್ ಮಾಹಿತಿ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಚಿತ್ತಾಪುರ ತಹಶೀಲ್ದಾರ ಸೈಯದ್ ಷಾಷಾವಲಿ ಅವರು ಎರಡು ದಿನಗಳ ಕಾಲ 144 ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.

ಸದ್ಯ ಪಟ್ಟಣದಾದ್ಯಂತ ಪೊಲೀಸರು ಬೀಡು ಬಿಟ್ಟಿದ್ದು, ಪ್ರತಿ ಬಡಾವಣೆ ಹಾಗೂ ಪ್ರತಿಯೊಂದು ವೃತ್ತಗಳಲ್ಲೂ ಖಾಕಿ ಕಣ್ಗಾವಲು ಏರ್ಪಡಿಸಲಾಗಿದೆ. ಸಾರ್ವಜನಿಕರ ಚಲನವಲನಗಳ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ. ಔಷಧ, ಆಸ್ಪತ್ರೆ ಹಾಗೂ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರೆತುಪಡಿಸಿ ಇತರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಶಹಾಬಾದ ಡಿವೈಎಸ್‍ಪಿ ಶೀಲವಂತ ಹೊಸಮನಿ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ಶಹಾಬಾದ ಸಿಪಿಐ ನಟರಾಜ ಲಾಡೆ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ವಾಡಿ ಪಿಎಸ್‍ಐ ತಿರುಮಲೇಶ ಕುಂಬಾರ, ದಿವ್ಯಾ ಮಹಾದೇವ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಅಧಿಕೃತವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿರಲಿಲ್ಲವಾದರೂ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಕೆಲ ಖಾಸಗಿ ಶಾಲೆಗಳು ಸ್ವಯಂ ರಜೆ ಘೋಷಿಸಿದ್ದವು.

ಆರು ಜನ ಮುಖಂಡರ ವಿರುದ್ಧ ಪ್ರಕರಣ ದಾಖಲು: ಶ್ರೀರಾಮ ಮೂರ್ತಿ ಮೆರವಣಿಗೆ ವೇಳೆ ಉಂಟಾದ ಕಲ್ಲು ತೂರಾಟ ಘಟನೆಗೆ ಸಂಬಂದಿಸಿದಂತೆ ಮುಸ್ಲಿಂ ಸಮುದಾಯದ ಝಹೂರ್ ಖಾನ್ ನೀಡಿದ ದೂರಿನ ಮೇರೆಗೆ ಒಟ್ಟು ಆರು ಜನ ರಾಮ ಉತ್ಸವ ಸಮಿತಿಯ ಮುಖಂಡರು ಸೇರಿದಂತೆ ಇತರರ ವಿರುದ್ಧ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಡಿಯಲ್ಲಿ ಸದ್ಯ ಪರಸ್ಥಿತಿ ಹತೋಟಿಯಲ್ಲಿದ್ದು, ಬಂದೋಬಸ್ತ್ ಮುಂದು ವರೆಸಲಾಗಿದೆ. ಯಾವುದೇ ಸಮುದಾಯದ ಕಿಡಿಗೇಡಿಗಳು ಕೋಮು ಸಂಘರ್ಷಕ್ಕೆ ಮುಂದಾರೆ ಅಂತಹವರ ಹೆಡೆಮುರಿ ಕಟ್ಟಲಾಗುವುದು ಎಂದು ಪಿಎಸ್‍ಐ ತಿರುಮಲೇಶ ಕುಂಬಾರ ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here