ತುಲಾಭಾರ ಒಲ್ಲೆ ಅಂದ ಖಾಸಾಮಠದ ಸ್ವಾಮೀಜಿ

0
270

ಮಠಮಾನ್ಯಗಳನ್ನು ಹೆಚ್ಚಾಗಿ ಇಷ್ಟಪಡುವವನು ನಾನಲ್ಲ. ನನಗೂ ಮಠಗಳಿಗೂ ಅಲ್ಲಿನ ಪೀಠಾಧಿಪತಿಗಳಿಗೂ ಒಂದು ರೀತಿಯಲ್ಲಿ ಎಣ್ಣೆ ಸೀಗೆಕಾಯಿ ಸಂಬಂಧ. ಹಾಗಂತ ಎಲ್ಲಾ ಮಠಾಧೀಶರನ್ನು ಸಾರಾಸಗಟಾಗಿ ನಾನು ತಿರಸ್ಕರಿಸಲಾರೆ. ಸಂಪೂರ್ಣ ಕಾರ್ಗತ್ತಲ ದಾರಿಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಮಿಂಚು ಹುಳದಂತೆ ತಮ್ಮ ಕಾರ್ಯವನ್ನು ಮಾಡುತ್ತಿರುವುದನ್ನು ನಾನು ನೋಡಿದ್ದೇನೆ. ಇಂಥವರನ್ನು ಕಂಡರೆ ಸಹಜವಾಗಿ ನನ್ನಂಥವರಿಗೆ ಖುಷಿಯೊ ಖುಷಿ.

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಖಾಸಾಮಠದ ಪೂಜ್ಯ ಶ್ರೀ.ಶಾಂತವೀರ ಸ್ವಾಮೀಜಿಗಳು ನಾವೆಲ್ಲ ಬಲ್ಲಂತೆ ವೈಚಾರಿಕ ನಿಲುವಿನ ಮಠಾಧೀಶರು. ಇತ್ತೀಚೆಗೆ ಅವರ ಖಾಸಾಮಠದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರಿಂದ ಆಹ್ವಾನ ಕೂಡ ಬಂದಿತ್ತು. ಸಹಜವಾಗಿ ನಾನು ಅತ್ಯಂತ ಆನಂದದಿಂದಲೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ.

Contact Your\'s Advertisement; 9902492681

ಶ್ರಾವಣ ಮಾಸದ ದಿನಗಳವು. ಮಠದ ಅಂಗಳದಲ್ಲಿ ಸಮಾರಂಭ ನಡೆದಿತ್ತು. ಅಪಾರವಾದ ಜನಸ್ತೋಮ ಸೇರಿತ್ತು. ವೇದಿಕೆಯ ಮೇಲೆ ಮಾತಾಡುತ್ತಿರುವಂತೆಯೆ ಜನ ಸಮೂಹದಿಂದ ಎದ್ದು ನಿಂತ ಮಹಿಳೆಯೊಬ್ಬಳು “ ನಾನು ಪೂಜ್ಯ ಸ್ವಾಮೀಜಿ ಅವರಿಗೆ ನಾಣ್ಯಗಳಿಂದ ತುಲಾಭಾರದ ಸೇವೆ ಮಾಡುತ್ತೇನೆ ಎಂದು ಅವಲತ್ತುಕೊಂಡಳು. ಸೂಜಿ ಬಿದ್ದರೂ ಕೇಳಿಸುವಷ್ಟು ನಿಶಬ್ಧ. ನಾನು ಮುಂದೆ ಇನ್ನೇನಾಗಬಹುದು ಎಂದು ಕುತೂಹಲಗನಾಗಿ ಸ್ವಾಮೀಜಿಯನ್ನು ನೋಡುತ್ತಿದ್ದೆ.

ಪೂಜ್ಯ ಶ್ರೀ. ಶಾಂತವೀರ ಸ್ವಾಮೀಜಿಗಳು ಸಭೆಯಲ್ಲಿನ ಮೈಕ್ ಕೈಯಲ್ಲಿ ಹಿಡಿದುಕೊಂಡು ಹೇಳತೊಡಗಿದರು. “ ನನಗೆ ತುಲಾಭಾರ, ಪಲ್ಲಕ್ಕಿ ಮುಂತಾದ ಕಾರ್ಯಗಳಲ್ಲಿ ನಂಬಿಕೆ ಇಲ್ಲ. ಇವೆಲ್ಲ ಬಸವಾದಿ ಶರಣರ ಆಶಯಕ್ಕೆ ವಿರುದ್ಧವಾದ ಸಂಗತಿಗಳು. ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದರಿಂದ ಮಹಿಳೆ ಇಚ್ಚೆ ಪಟ್ಟರೆ ಮಠಕ್ಕೆ ದಾಸೋಹವನ್ನು ನೀಡಬಹುದು. ಅವರು ನೀಡಿದ ದಾಸೋಹವನ್ನು ಜನ ಮನಕ್ಕೆ ಅರ್ಪಿಸುತ್ತೇವೆ” ಎಂದು ಹೇಳಿದಾಗ ನನಗಂತೂ ಖುಷಿಯೋ ಖುಷಿ.

ಹಿಂದೊಮ್ಮೆ ನನ್ನ ತಂದೆಯ ಒಡನಾಟದಲ್ಲಿ ಮಠಾಧೀಶರೊಬ್ಬರು ಅತ್ತು ಕರೆದು ಔತಣ ಹೇಳಿಸಿಕೊಂಡರು ಎಂಬಂತೆ ತನ್ನ ಭಕ್ತ(?)ರಿಗೆ ಗಂಡುಬಿದ್ದು ತುಲಾಭಾರ ಮಾಡಿಸಿಕೊಂಡದ್ದು ನೋಡಿದ್ದೆ. ಅವರ ಹಾರ ತುರಾಯಿ, ಪಲ್ಲಕ್ಕಿ, ಪಾದಯಾತ್ರೆ ಎಂಬ ಗಿಲಿಟು ನಾಟಕಗಳು ಕಣ್ಮುಂದೆ ಬಂದು ನನ್ನಷ್ಟಕ್ಕೆ ನಾನು ನಕ್ಕೆ.
ಖಾಸಾ ಮಠದ ಪೂಜ್ಯ ಶ್ರೀ. ಶಾಂತವೀರ ಸ್ವಾಮೀಜಿಗಳ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಯಿತು.

– ಗುಂಡಣ್ಣ ಕಲ್ಬುರ್ಗಿ
ಅಧ್ಯಕ್ಷರು: ಜಾಗತಿಕ ಲಿಂಗಾಯತ ಮಹಾಸಭೆ ಯಾದಗಿರಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here