ವಿಜಯ ಸಂಕೇಶ್ವರ ಅವರಿಗೆ ಅಂಟಿಕೊಂಡಿರುವ ವೈದಿಕ ವೈರಸ್

0
240

ನಮ್ಮ ನಡುವೆ ಇರುವ ಬಹುತೇಕ ಲಿಂಗಾಯತರು ಕರ್ಮಠರ ಹಿಂದೆ ಬೆನ್ನು ಬಿದ್ದು ತಾವು ಯಾರು? ಎಂಬುದನ್ನು ಮರೆತು ಬಿಟ್ಟಿದ್ದಾರೆ. ವೈದಿಕ ವೈರಸ್ ಸೋಂಕಿನಿಂದ ನರಳುತ್ತಿರುವವರಲ್ಲಿ ಪ್ರಮುಖರಾದವರಲ್ಲಿ ಬಹು ಮುಖ್ಯರಾದವರು ವಿಜಯ ಸಂಕೇಶ್ವರ ಒಬ್ಬರು. ಬ್ರಾಹ್ಮಣರು ತಾವು ಅಂಟಿಸಿಕೊಂಡ ಬ್ರಾಹ್ಮಣ್ಯದಿಂದ ಹೊರ ಬರಬಹುದು. ಆದರೆ ಬ್ರಾಹ್ಮಣ್ಯ ಅಂಟಸಿಕೊಂಡ ಶೂದ್ರ ಅದರಿಂದ ಹೊರಬರುವುದು ಕಷ್ಟಕರ. ಇಂಥ ಕಳ್ಳ ಹುತದಲ್ಲಿ ವಿಜಯ ಸಂಕೇಶ್ವರ ಸಿಕ್ಕು ಹಾಕಿಕೊಂಡಿದ್ದಾರೆ ಎನ್ನುವುದರಲ್ಲಿ ತಪ್ಪೇನಿಲ್ಲ.

ದುರಂತವೆನೆಂದರೆ ತಾವು ವೀರಶೈವವಾದಿಗಳು ಅಥವಾ ಸನಾತನ ಪರಂಪರೆಯ ಹೆಣೆದ ಬಲೆಯಲ್ಲಿ ಸಿಕ್ಕು ಬಿದ್ದಿದ್ದೇನೆ ಎಂಬ ಅರಿವು ಕೂಡ ಅವರಿಗೆ ಇಲ್ಲವಾಗಿದೆ. ಇದಕ್ಕೆ ಮೂಲ ಕಾರಣ ಅವರ ಅಪ್ರಜ್ಞಾಪೂರ್ವ ನಡಾವಳಿಗಳು. ಮೊದಲಿನಿಂದಲೂ ರೂಢಿಸಿಕೊಂಡು ಬಂದ ಪದ್ಧತಿಗಳು. ಸ್ವಾರ್ಥದ ಲಾಲಸೆಯೊಂದು ಜೊತೆ ಯಾಗಿರುವುದರಿಂದ ಸಂಕೇಶ್ವರ ಲಿಂಗಾಯತ ಧರ್ಮಿಯರಿಗೆ ಸಿಗದಷ್ಟು ದೂರ ನಡೆದುಕೊಂಡು ಹೋಗಿದ್ದಾರೆ.

Contact Your\'s Advertisement; 9902492681

“ಗುಲಾಮನಿಗೆ ಯಾವತ್ತೂ ತಾನು ಗುಲಾಮ ಎಂಬ ಅರಿವು ಇರಲಾರದು. 1789 ರಿಂದ 1999 ರವರೆಗೆ ಪ್ರಾನ್ಸ್ ನಲ್ಲಿ ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಜನಗಳನ್ನು ಜೈಲಿನಲ್ಲಿ ಬಂಧಿಯಾಗಿ ಇರಿಸಲಾಗಿತ್ತು. ಹತ್ತು ವರ್ಷಗಳ ಕಾಲ ಜೈಲಿನಲ್ಲಿ ಖೈದಿಯಾಗಿದ್ದ ಜನ ಸಾಮಾನ್ಯರನ್ನು ಬಿಡುಗಡೆಗೊಳಿಸಿದಾಗ ಅವರೆಲ್ಲ ಕಕ್ಕಾಬಿಕಿಯಾದರು. ಇಷ್ಟು ವರ್ಷಗಳ ಕಾಲ ನಾವು ಕತ್ತಲ ಕೋಣೆಯಲ್ಲಿ ಬಂಧಿಯಾಗಿ ಜೀವನ ಕಳೆದಿದ್ದೇವೆ. ಹತ್ತು ವರ್ಷಗಳ ದೀರ್ಘಕಾಲದ ಸಮಯ ಈಗಾಗಲೆ ಕಳೆದಿದ್ದೇವೆ. ಜೇಲಿನ ಹಲವಾರು ಕಟ್ಟಳೆಗಳು, ಕೈಕೊಳ, ಕಾಲಿಗೆ ಹಾಕಿದ ಸರಪಳಿ, ಜೇಲಿನ ಊಟಕ್ಕೆ ಒಗ್ಗಿ ಹೋಗಿದ್ದೇವೆ. ಇಲ್ಲಿನ ಕತ್ತಲ ಕೋಣೆಗಳು, ಒಂಟಿತನ ನಮ್ಮನ್ನು ಹೊರಗಿನ ಪ್ರಪಂಚದಿಂದ ದೂರ ತೆಗೆದುಕೊಂಡು ಹೋಗಿದೆ. ಹೀಗಾಗಿ ನಾವು ಜೈಲನ್ನು ಬಿಟ್ಟು ಹೊರ ಹೋಗಲು ಬಯಸುವುದಿಲ್ಲ. ಹೊರಗಡೆಯ ಕತ್ತಲು, ಸ್ವಾತಂತ್ರ್ಯ ನಮಗೆ ಕಿರಿಕಿರಿಯಾಗುತ್ತದೆ. ಹೀಗಾಗಿ ನಮ್ಮನ್ನು ಬಿಡುಗಡೆ ಮಾಡಬೇಡಿ ಎಂದು ಜೈಲರ್ನಲ್ಲಿ ವಿನಂತಿಸಿಕೊಂಡರಂತೆ.”

ವಿಜಯ ಸಂಕೇಶ್ವರ ಸಹ ಸುದೀರ್ಘಕಾಲ ಹಿಂದೂ ಧರ್ಮದ ಜೈಲಿನಲ್ಲಿ ಇಷ್ಟು ವರ್ಷಗಳ ಕಾಲ ಜೀವನ ಮಾಡಿದವರು. ಆ ಧರ್ಮದ ಮತಾಂಧತೆ, ಮೌಢ್ಯಗಳು, ಶಿಷ್ಟಾಚಾರಗಳು ಅವರನ್ನು ಸುತ್ತುವರೆದಿವೆ. ಹೆಜ್ಜೆ ಹೆಜ್ಜೆಗೂ ಸಂಕೇಶ್ವರರಿಗೆ ವಾರ, ತಿಥಿ, ನಕ್ಷತ್ರ, ರಾಹುಕಾಲ ಆಳುತ್ತಿವೆ. ವೀರಶೈವ ಧರ್ಮದಲ್ಲಿಯ ಜಗದ್ಗುರುಗಳ ಅಪ್ಪಣೆಯಿಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಲಾರದು ಎಂಬ ಬಲವಾದ ನಂಬುಗೆಯಲ್ಲಿ ಅವರು ಇದ್ದಾರೆ. ನಿತ್ಯವು ಸುತ್ತ ಮುತ್ತ ಕಾಣುವ ದೇವರುಗಳು ತಮ್ಮ ಕೈ ಹಿಡಿದು ಮುನ್ನಡೆಸುತ್ತಿವೆ ಎಂಬ ಗಾಢವಾದ ವಿಶ್ವಾಸ ಸಂಕೇಶ್ವರರಿಗೆ ಇದೆ.  ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಮಾತಿನಲ್ಲಿ ನಂಬುಗೆಗಿಂತ ತಮ್ಮ ಹಣೆಬರಹದಲ್ಲಿ ಬರೆದುದೆ ಜೀವನದಲ್ಲಿ ನಡೆದಿದೆ ಎಂಬ ನಂಬಿಕೆ ಅವರಲ್ಲಿ ಬಲವಾಗಿದೆ. ಜೊತೆಗೆ ಮತಿಯವಾದಿಗಳ ಸಹಜವಾಸ ದೋಷದಿಂದ ಸಂಪೂರ್ಣ  ತಮ್ಮ ತನ ಮರೆತು ಬೇರೆ ಧರ್ಮದ ಆಚರಣೆಗಳಲ್ಲಿ ಬೆರೆತು ಹೋಗಿದ್ದಾರೆ.

ಆದ್ದರಿಂದ ವಿಜಯ ಸಂಕೇಶ್ವರ ಸಹಜವಾಗಿಯೆ ಲಿಂಗಾಯತ ಧರ್ಮದ ಹೋರಾಟ ಕುರಿತು ಏನೇನೋ ಅಕಳಾ ಸಕಳಾ ಮಾತನಾಡುತ್ತಾರೆ. ತಾವೇ ಪ್ರಾರಂಭಿಸಿದ ಪತ್ರಿಕೆ ’ವಿಜಯ ವಾಣಿ’ಯನ್ನು ದ್ವಿಜರ ಉಡಿಯಲ್ಲಿ ಹಾಕಿ ತೆಪ್ಪಗೆ ಕುಳಿತ್ತಿದ್ದಾರೆ. ’ದಿಗ್ವಿಜಯ’ ಎಂಬ ನ್ಯೂಸ್ ಚಾನಲ್ ನ್ನು ಸಹ ಅವರಿಗೆ ಅರ್ಪಿಸಿ ಕೃತಾರ್ಥತೆಯನ್ನು ಅನುಭವಿಸುತ್ತಿದ್ದಾರೆ.

ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ

ಧರೆ ಹತ್ತಿ ಉರಿದೊಡೆ ನಿಲ್ಲಬಹುದೆ ?

ಏರಿ ನೀರೊಂಬಡೆ ಬೇಲಿ ಕೇಯ ಮೇವೊಡೆ

ನಾರಿ ತನ್ನ ಮನೆಯಲ್ಲಿ ಕಳವೊಡೆ

ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವಾ

ಲಿಂಗಾಯತ ಧರ್ಮವನ್ನು ಅರಿತು, ಆ ಧರ್ಮದ ತತ್ವಗಳನ್ನು ಪಸರಿಸಬೇಕಾದ ವಿಜಯ ಸಂಕೇಶ್ವರ ಸ್ವತಃ ತುಕ್ಕು ಹಿಡಿದು ಕೊಳೆತು ಹೋಗಿದ್ದಾರೆ. ತನ್ನ ಧರ್ಮಕ್ಕೆ ಬೇಲಿಯಾಗಿ ಕಾಯಬೇಕಾದ ಮನುಷ್ಯ ತಾನೇ ಎದ್ದು ಹೊಲ ಮೇಯ ತೊಡಗಿದ್ದಾರೆ. ತಾಯಿಯ ಹಾಲು ನಂಜಾಗಿ ಕೊಲ್ಲುವಂತಾದಾಗ ರಕ್ಷಿಸುವ ಹೊಣೆ ಯಾರದು? ತಾವು ಯಾವುದರಿಂದ ನಿರ್ಮಾಣಗೊಂಡವರು ಎಂಬ ಪರಿಕಲ್ಪನೆ ಇಲ್ಲದೆ ಹೋದಾಗ, ಸಹಜವಾಗಿ ಇಂಥವರ ಸುತ್ತ ಮುತ್ತ ಗುಂಗಿ ಹುಳಗಳು ಮುತ್ತುತ್ತವೆ. ಅವುಗಳ ಗೊಣಗಾಟದಲ್ಲಿ ತಮ್ಮ ಕಣ್ಣ ಮುಂದೆ ಏನು ನಡೆಯುತ್ತಿದೆ ಎಂಬ ಸತ್ಯ ಗೊತ್ತಾಗದಂತಾಗುತ್ತದೆ.  ಆ ಗುಂಗಿ ಹುಳಗಳು ಹೇಳಿದ್ದೆ ಸತ್ಯ ಎಂಬ ನಂಬಿಕೆಯಲ್ಲಿ ತಮ್ಮ ಒಳಗಣ್ಣು, ಒಳಗಿವಿ, ಒಳ ಮನಸ್ಸನ್ನು ತೆರೆದುಕೊಳ್ಳದೆ ಕುಳಿತ್ತಿದ್ದಾರೆ.

ಕೊಳೆತ ಶವದ ಮುಂದೆ ತಾಸೆರಡು ತಾಸು ಕುಳಿತುಕೊಳ್ಳಬಹುದು. ಆದರೆ ಪುರೋಹಿತರಿಂದ ಆವೃತ್ತಗೊಂಡ, ಅವರಿಂದಲೇ ಪ್ರಭಾವಿತಗೊಂಡ ಲಿಂಗಾಯತ ತನ ಬಗ್ಗಡಗೊಂಡಿದೆ. ಕಾಮಾಲೆ ಕಣ್ಣಿಗೆ ಕಂಡದ್ದೆಲ್ಲ ಹಳದೆಯಾಗಿ ಕಾಣುವಂತೆ ವೈದಿಕ ವ್ಯವಸ್ಥೆಗೆ ವಿರುದ್ಧವಾದ ಎಲ್ಲಾ ಕ್ರಿಯೆಗಳು ಅಸಂಬದ್ಧವಾಗಿ ಕಾಣುತ್ತಿವೆ.

ಆದ್ದರಿಂದಲೆ ಲಿಂಗೈಕ್ಯ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳನ್ನು ತಮ್ಮ ಹರಕು ಬಾಯಿಯ ಮೂಲಕ ನಿಂದಿಸಿದ್ದಾರೆ. ತೋಂಟದಾರ್ಯರು ವೀರಶೈವ/ಲಿಂಗಾಯತ ಎಂಬುದು ಒಂದೆ ಇದ್ದರೂ ಇವರಿಬ್ಬರ ನಡುವೆ ವಿಷಬೀಜ ಬಿತ್ತಿದ್ದಾರೆ ಎಂದು ಮೂದಲಿಸಿದ್ದಾರೆ.  ಜಗತ್ತೆ ಬಲ್ಲಂತೆ ವಚನಗಳ ರಚನೆ, ಅವುಗಳ ಆಶಯ, ಶರಣರ ನಡೆ ನುಡಿಗಳು ನಿಬ್ಬೆರಗನ್ನು ಉಂಟು ಮಾಡುವಂಥವು. ನಮ್ಮ ಕಣ್ಣ ಮುಂದಿನ ಪ್ರಪಂಚ ಪರಿಶುದ್ಧಗೊಳ್ಳಬೇಕಾದರೆ ವಚನ ಸಾಹಿತ್ಯದ ಹೊಳೆಯಲ್ಲಿ ಈಜಾಡಲೇಬೇಕಾಗುತ್ತದೆ. ಈ ಬಗ್ಗೆ ಈಗಾಗಲೆ ಜಗತ್ತಿನಾದ್ಯಂತ ಚಿಂತನೆ, ಚರ್ಚೆಗಳು ನಡೆದಿವೆ. ನೋಡ ನೋಡುತ್ತಲೆ ವಿಶ್ವದ ತುಂಬೆಲ್ಲ ಬಸವಣ್ಣನವರ ಬೆಳಕು ಮೂಡುತ್ತಿದೆ. ತೋಂಟದಾರ್ಯರು ವಿಷ ಬೀಜ ಬಿತ್ತಿದ್ದಾರೆ ಎಂದೆನ್ನುವುದಾದರೆ,  ಇದಕ್ಕಿಂತ ಪೂರ್ವದಲ್ಲಿ ಬಸವಾದಿ ಶರಣರೂ ಸಹ ವಿಷ ಬೀಜವನ್ನು ಬಿತ್ತಿದ್ದರು ಎಂದೆನ್ನಬಹುದೆ? ಒಂದು ವೇಳೆ ಶರಣರು ಅಂದು ವಿಷಬೀಜ ಬಿತ್ತಿದ್ದು ಸತ್ಯವಾಗಿದ್ದರೆ ವಚನಗಳು ಇಷ್ಟು ಶತಮಾನಗಳ ಕಾಲ ಜೀವಂತವಾಗಿ ಇರಬಲ್ಲವಾಗಿದ್ದವೆ?

ಎಡ್ಗರ್ ಥರಸ್ಟೀನ್ ಎಂಬ ವ್ಯಕ್ತಿಯ ಹೇಳಿಕೆಯಂತೆ ಲಿಂಗಾಯತವೆಂಬ ನಡುಗಡ್ಡೆ ಹಿಂದೂ ಮಹಾಸಾಗರದ ಅಲೆಗಳಿಗೆ ತುತ್ತಾಗಿ ಕ್ರಮೇಣ ಕರಗಿ ಹೋಗುತ್ತಿದೆ. ಲಿಂಗಾಯತರು ತಮ್ಮ ಧರ್ಮದ ಅಸ್ಮಿತೆಯನ್ನು ಅರಿತುಕೊಳ್ಳದೆ ಹಿಂದೂ ಮಹಾಸಾಗರವೆಂಬ ಪರರ ಅಲೆಯಲ್ಲಿ ತಮ್ಮ ಅಸ್ವಿತ್ವವನ್ನು ಕಳೆದುಕೊಳ್ಳತೊಡಗಿದ್ದಾರೆ. ಕಾವಿ ಧರಿಸಿದವರೆಲ್ಲರೂ ಹಿಂದೂಗಳಾಗಿರಬೇಕಿಲ್ಲ ಎಂಬ ಸಣ್ಣ ತಿಳುವಳಿಕೆ ಕೂಡ ವಿಜಯ ಸಂಕೇಶ್ವರರಿಗೆ ಇಲ್ಲದಂತಹದಾಗಿದೆ. ಕಾವಿ ವಸ್ತ್ರ ತ್ಯಾಗದ ಸಂಕೇತ. ಅದು ಒಂದು ಧರ್ಮದ ಗುತ್ತಿಗೆ ಅಲ್ಲ. ಕಾವಿ ಧರಿಸಿ ಹಲವಾರು ಜನ ಬಾರಾ ಬಾನಗಡಿ ಮಾಡಿದವರು ನಮ್ಮ ಕಣ್ಣ ಮುಂದೆ ಇದ್ದಾರೆ. ಹಾಗಂತ ಕಾವಿಯನ್ನು ಕನಿಷ್ಠ ಅನ್ನಬಹುದೆ? ಕಾವಿಯನ್ನು ಧರಿಸಿಯೆ ಸ್ವಾಮಿ ವಿವೇಕಾನಂದರು ನಾಡಿಗೆ ಬಹುದೊಡ್ಡ ಕೊಡುಗೆ ನೀಡಿಲ್ಲವೆ? ಸ್ವಾಮಿ ವಿವೇಕಾನಂದರು ವೈದಿಕಶಾಹಿ ವ್ಯವಸ್ಥೆಯ ವಿರುದ್ಧ, ಅಲ್ಲಿನ ಕರ್ಮಠತನವನ್ನು ನಖಶಿಖಾಂತವಾಗಿ ಖಂಡಿಸಿದವರು. ವೇದ ಶಾಸ್ತ್ರಗಳ ಹೆಸರಿನ ಮೇಲೆ ಹೊಟ್ಟೆ ಹೊರೆಯುವ ಮತಿಗೇಡಿ ಸನ್ಯಾಸಿಗಳನ್ನು ಚಾಲಾಡಿದವರು. ಹಾಗಂತ ಅವರೂ ಕಾವಿ ಬಿಚ್ಚಿರಿಸಬೇಕಾಗಿತ್ತೆ?

ಹಾಕಿದ ಪೋಷಾಕುಗಳಿಂದ ಯಾರೂ ದೊಡ್ಡವರು ಸಣ್ಣವರು ಆಗಲು ಸಾಧ್ಯವಿಲ್ಲ. ಅವರ ಗುಣ ನಡತೆ ವಿಚಾರಗಳು ಮನುಷ್ಯನನ್ನು ಮೇಲಕ್ಕೆ ಒಯ್ಯುತ್ತವೆ. ಕೆಳಕ್ಕೂ ತಳ್ಳಬಲ್ಲವು. ಎಡೆಯೂರು ಸಂಸ್ಥಾನ ಮಠದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಲಿಂಗಾಯತ ಧರ್ಮಿಯರನ್ನು ಕೊಳಕಿನಿಂದ ಮೇಲೆತ್ತುವ ಕಾರ್ಯವನ್ನು ಮಾಡಿದ್ದಾರೆ. ವೀರಶೈವವೆಂಬ ವ್ರತದಲ್ಲಿ ತಮ್ಮ ಧರ್ಮದ ಜನ ಕೊಳೆತು ಹೋಗಬಾರದೆಂದು ಎಚ್ಚರಿಸಿದ್ದಾರೆ. ಆದರೆ ಇದು ಹಲವರಿಗೆ ಸಂಕಟವನ್ನು ಉಂಟು ಮಾಡುತ್ತದೆ.

ಗೂಗೆ ಕಣ್ಣ ಕಾಣಲರಿಯದೆ ರವಿಯ ಬಯ್ವದು.

ಕಾಗೆ ಕಣ್ಣ ಕಾಣಲರಿಯದೆ ಶಶಿಯ ಬಯ್ವದು

ಕುರುಡ ಕಣ್ಣ ಕಾಣಲರಿಯದೆ ಕನ್ನಡಿಯ ಬಯ್ವನು

ಇವರ ಮಾತೆಲ್ಲವೂ ಸಹಜವೆ

ನರಕ ಸಂಸಾರದಲ್ಲಿ ಹೊದಕುಳಿಗೊಳುತ್ತ ಶಿವನಿಲ್ಲ ಮುಕ್ತಿಯಿಲ್ಲ ಹುಸಿಯೆಂದಡೆ

ನರಕದಲ್ಲಿಕ್ಕದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯ

ಎಂಬ ಅಕ್ಕಮಹಾದೇವಿಯ ವಚನದಲ್ಲಿ ವಿಜಯ ಸಂಕೇಶ್ವರ ಅವರು ಲಿಂಗಾಯತ ಧರ್ಮದ ಮೂಲ ತಿರುಳನ್ನು ಅರಿಯದೆ ಟೀಕೆ ಮಾಡುತ್ತಿದ್ದಾರೆ. ತನಗೆ ಕಣ್ಣು ಕಾಣದೆ ರವಿಯ ಬಯ್ವ ಗೂಗೆ, ಚಂದ್ರನ ಬಯ್ವ ಕಾಗೆ, ಕನ್ನಡಿಯನ್ನು ಬಯ್ವ ಕುರುಡನಂತೆ ಸಂಕೇಶ್ವರ ಅವರ ಸ್ಥಿತಿಯಾಗಿದೆ. ಒಂದು ಮಾತನ್ನು ಅವರು ಮರೆಯಬಾರದು. ತೋಂಟದ ಸಿದ್ಧಲಿಂಗ ಶಿವಯೋಗಿಗಳು ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ.

ಅಮೇಧ್ಯವ ಭುಂಜಿಸುವ ಸೂಕರ ಅಮೃತದ ಸವಿಯನೆತ್ತ ಬಲ್ಲುದಯ್ಯಾ?

ಗೆಜ್ಜಲ ತಿಂಬ ಕರಡಿ ಖರ್ಜೂರದ ಹಣ್ಣಿನ ಸವಿಯನೆತ್ತಬಲ್ಲುದೆಯ್ಯ?

ಬೇವ ತಿಂಬ ಕಾಗೆ ಬೆಲ್ಲದ ಸವಿಯನೆತ್ತ ಬಲ್ಲುದಯ್ಯ ? ಅಂಗನೆಯರ

ಸಮ್ಮೇಳನದ ವಿಕಾರದ ಭಂಗಿಯ ಕೊಂಡು ಮೈಮರೆದ ಮನುಜರು

ಲಿಂಗ ಪ್ರೇಮದ ಸುಖವನೆತ್ತಬಲ್ಲರಯ್ಯಾ ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ ?

 

: ವಿಶ್ವಾರಾಧ್ಯ ಸತ್ಯಂಪೇಟೆ

ಮೊ: 9480161315

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here