ಪ್ಯಾಕೇಜ್ ಪದ್ಧತಿ ಟೆಂಡರ್ ಕಾಮಗಾರಿಗೆ ಗುತ್ತಿಗೆದಾರರ ಸಂಘದ ವಿರೋಧ

0
20

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಟೆಂಡರ್ ಕಾಮಗಾರಿಗಳನ್ನು ಪ್ಯಾಕೇಜ್ ಪದ್ದತಿಯಡಿ ಕರೆಯುವುದನ್ನು ಹಾಗೂ ಭೂ ಸೇನಾ ನಿಗಮಕ್ಕೆ ಕಾಮಗಾರಿಗಳನ್ನು ವಹಿಸುವುದನ್ನು ಕೈಬಿಡಬೇಕು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಶೇಗಜಿ ಅವರು ಒತ್ತಾಯಿಸಿದರು.

ನಗರದಲ್ಲಿ ಯಾತ್ರಿಕ ನಿವಾಸ್ ಹೋಟೆಲ್ ನಲ್ಲಿ ಜರುಗಿದ ಗುತ್ತಿಗೆದಾರರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಏಳು ಜಿಲ್ಲೆಗಳು ಬರುತ್ತವೆ. ಅವುಗಳ ಅಡಿಯಲ್ಲಿ ಬರುವ ಕಾಮಗಾರಿಗಳಿಗೆ ಪ್ಯಾಕೇಜ್ ಪದ್ದತಿ ಮಾಡಬಾರದು ಎಂದು ಉಚ್ಛ ನ್ಯಾಯಾಲಯದ ಆದೇಶವಿದ್ದರೂ ಸಹ ಆದೇಶವನ್ನು ಉಲ್ಲಂಘಿಸಿ ಎಲ್ಲ ಅಧಿಕಾರಿಗಳು ಟೆಂಡರ್ ಕರೆಯುತ್ತಿದ್ದಾರೆ ಎಂದು ದೂರಿದರು.

Contact Your\'s Advertisement; 9902492681

ಉಳಿದ ಕಾಮಗಾರಿಗಳನ್ನು ಟೆಂಡರ್ ಕರೆಯದೇ ನೇರವಾಗಿ ಕೆಆರ್‍ಐಡಿಎಲ್ (ಭೂಸೇನಾ ನಿಗಮ)ಕ್ಕೆ ಕಾಮಗಾರಿಗಳನ್ನು ವಹಿಸಿದ್ದಾರೆ. ಹೀಗಾದರೆ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಜಾರಿಯಾಗಿದ್ದರೂ ಅದನ್ನು ಅನುಷ್ಠಾನಕ್ಕೆ ತರದೇ ಅನ್ಯಾಯ ಮಾಡಲಾಗುತ್ತಿದೆ. ಅದೇ ರೀತಿ ಗುತ್ತಿಗೆದಾರರ ಯಂತ್ರೋಪಕರಣಗಳು, ಕೂಲಿ ಕಾರ್ಮಿಕರು ಕೆಲಸವಿಲ್ಲದಂತಾಗಿ ಬೀದಿ ಪಾಲಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ಹಿಂದೆ ನಿರ್ವಹಿಸಿದ ಕಾಮಗಾರಿಗಳ ಬಿಲ್ ಸಹ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದ ಅವರು, ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಹಿಂದಿನ ಸರ್ಕಾರದ ಎಲ್ಲ ತಪ್ಪುಗಳನ್ನು ಸರಿಪಡಿಸುವ ಭರವಸೆ ನೀಡಿದ್ದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದು ಸಂತೋಷದ ಸಂಗತಿ. ಆದಾಗ್ಯೂ, ಆ ಭರವಸೆ ಇನ್ನೂ ಇತ್ಯರ್ಥವಾಗಿಲ್ಲ ಎಂದು ದೂರಿದರು.

ಮುಖ್ಯಮಂತ್ರಿಗಳು ಕೊಟ್ಟ ಭರವಸೆಯನ್ನು ಈಡೇರಿಸಬೇಕು. ಕೂಡಲೇ ಮಧ್ಯಸ್ಥಿಕೆ ವಹಿಸಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ಯಾಕೇಜ್ ಪದ್ಧತಿ ಟೆಂಡರ್ ಕಾಮಗಾರಿಗಳನ್ನು ಹಾಗೂ ಭೂಸೇನಾ ನಿಗಮಕ್ಕೆ ವಹಿಸುವ ಕಾಮಗಾರಿಗಳನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು.

ಸಭೆಯಲ್ಲಿ ಎನ್.ಎಸ್. ಮೂಲಗೆ, ಮೊಹಸಿನ್ ಎಂ. ಪಟೇಲ್, ಸಂಜಯ್ ಆರ್.ಕೆ., ಎಂ.ಕೆ. ಪಾಟೀಲ್, ರಾಜಶೇಖರ್ ಯಂಕಂಚಿ, ರಿಯಾಜುದ್ದೀನ್ ಪಟೇಲ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here