ಯಾದಗಿರಿ: ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಆದೇಶಕ್ಕೂ ಕವಡೆ ಕಿಮ್ಮತ್ತು ನೀಡದೇ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಮತ್ತು ಉಡಾಫೆ ವರ್ತನೆ ರೂಢಿಸಿಕೊಂಡಿರುವುದಕ್ಕೆ ಮುದ್ನಾಳ ಖಾಸಗಿ ಜಮೀನಿನಲ್ಲಿ ಸರ್ಕಾರದ ಸುಮಾರು ೯ ಯೋಜನೆ ಜಾರಿಗೊಳಿಸಿರುವುದೇ ಸಾಕ್ಷಿಯಾಗಿದೆ ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ತಾಲ್ಲೂಕಿನ ಮುದ್ನಾಳ ಗ್ರಾಮದ ಸರ್ವೆ ನಂ ೨೪೯/೧ ರಲ್ಲಿ ಗ್ರಮ ಪಂಚಾಯಿತಿ ಸೇರಿ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಭೂ ಸ್ವಾಧೀನ ಮಾಡಿಕೊಳ್ಳದೇ ಅಕ್ರಮವಾಗಿ ಕಟ್ಟಡಗಳನ್ನು ಇನ್ನಿತರ ಯೋಜನೆಗಳನ್ನು ಕೈಗೊಂಡು ಪೂರ್ಣಗೊಳಿಸಿ ಬಿಲ್ ಎತ್ತಿ ತಿಂದುಹಾಕಲಾಗಿದೆ ಎಂದು ದೂರು ಸಲ್ಲಿಸಿದ ನಂತರವೂ ಇದುವರೆಗೆ ನಿರ್ಲಕ್ಷ್ಯವೇ ಉತ್ತರವಾಗಿದೆ. ನಮ್ಮ ಸಂಘಟನೆ ವತಿಯಿಂದ ಮೇ೯ ರಂದು ದೂರು ಸಲ್ಲಿಸಿದ ನಂತರ ಜಿಲ್ಲಾಧಿಕಾರಿಗಳು ಆದೇಶ ನೀಡಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ ನಂತರ ೧೭-೭-೨೦೧೯ ರಂದು ತನಿಖಾ ತಂಡ ರಚನೆ ಮಾಡಿ ಆದೇಶ ನೀಡಿದರು.
ಈ ತಂಡದಲ್ಲಿ ಜಿಲ್ಲಾ ಮಟ್ಟದ ಜವಳಿ ಇಲಾಖೆ ಅಧಿಕಾರಿ ನೇತೃತ್ವದಲ್ಲಿ ನಾಲ್ಕು ಜನರ ತಂಡ ರಚಿಸಿ ೩೧-೭-೨೦೧೯ ರೊಳಗಾಗಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು. ಆದರೆ ಈ ದಿನಾಂಕವೂ ಮುಗಿದಿದ್ದರೂ ತಂಡ ಕೆಲಸ ಮಾಡುವುದಿರಲಿ ಆರಂಭವೇ ಮಾಡಿಲ್ಲ ಎಂದು ಉಮೇಶ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ರವರ ಆದೇಶಕ್ಕೂ ಕಿಮ್ಮತ್ತು ಕೊಡದ ಕೆಳಮಟ್ಟದ ಅಧಿಕಾರಿಗಳು ಸಂಪೂರ್ಣ ಕುಂಭಕರ್ಣ ನಿದ್ರೆ ಮಾಡುತ್ತಿದ್ದಾರೆ ಇವರ ಮೇಲೆ ಚಾಟಿ ಬೀಸಬೇಕು ಇಲ್ಲವಾದಲ್ಲಿ ೨೪ ಗಂಟೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಿ ವರದಿ ಸಲ್ಲಿಸದಿದ್ದಲ್ಲಿ ಜಿಲ್ಲಾಡಳಿತ ಭವನದಿಂದ ೨ ಕಿ.ಮೀ. ದೂರದಲ್ಲಿರುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಜಿಪಂ ಸಿಇಓ ಭೇಟಿ ನೀಡಬೇಕು ಅಂದಾಗ ಮಾತ್ರ ಕೆಲಸ ಚುರುಕಾಗಿ ಆಗಲು ಸಾಧ್ಯ ಎಂದು ಅವರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಜಿಲ್ಲಾಡಳಿತದ ವಿರುದ್ದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.