ಕಲಬುರಗಿ: ಇಲ್ಲಿನ ಎಚ್ಕೆಇ ಸಂಸ್ಥೆಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಸಿ ಮತ್ತು ಡಿ ಬ್ಲಾಕ್ ಹಾಗೂ ಡಾ. ಬಿ.ಜಿ. ಜವಳಿ ಒಳಾಂಗಣ ಕ್ರೀಡಾ ಸಂಕೀರ್ಣದ ಉದ್ಘಾಟನಾ ಸಮಾರಂಭ ಫೆ.10ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದು, ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ , ಶಾಸಕ ಅಲ್ಲಮಪ್ರಭು ಪಾಟೀಲ, ಎಚ್ಕೆಇ ಮಾಜಿ ಅಧ್ಯಕ್ಷ ಡಾ.ಬಿ.ಜಿ. ಜವಳಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಎಚ್ಕೆಇ ಸೊಸೈಟಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಟ್ಟಡಗಳು ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಾನುಸಾರ ಕಟ್ಟಲ್ಪಟ್ಟಿದೆ. ಹಾಗೆಯೇ ಡಾ. ಬಿ.ಜಿ. ಜವಳಿಯವರ ಹೆಸರಿನಲ್ಲಿರುವ ಸುಸಜ್ಜಿತ ಮತ್ತು ಆಧುನಿಕ ಸವಲತ್ತುಗಳನ್ನೊಳಗೊಂಡ ಒಳಾಂಗಣ ಕ್ರೀಡಾಂಗಣ ಸಂಕೀರ್ಣ ಕಾರ್ಯಾನುಷ್ಠಾನಕ್ಕೆ ಬರುತ್ತಿರುವುದು ನಿಜಕ್ಕೂ ಸಂತೋಷದ ವಿಷಯ ಎಂದರು.
ಎಂ.ಆರ್. ಮೆಡಿಕಲ್ ಕಾಲೇಜಿನ ಡೀನ್ ಡಾ.ಎಸ್.ಎಂ. ಪಾಟೀಲ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಶರಣಬಸಪ್ಪ ಕಾಮರೆಡ್ಡಿ ಇದ್ದರು.