ಕಲಬುರಗಿಯಲ್ಲಿ ಟ್ರಾಮಾ ಸೆಂಟರ್ ಲೋಕಾರ್ಪಣೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಕ್ರಾಂತಿಗೆ ಸಂಕಲ್ಪ

0
16

ಕಲಬುರಗಿ; ಕಲ್ಯಾಣ ಕರ್ನಾಟಕ ಭಾಗದ ಬಡ ಜನ ಆರೋಗ್ಯ ಸೇವೆಗೆ ದೂರದ ಹೈದ್ರಾಬಾದ್, ಬೆಂಗಳೂರು, ಸೋಲಾಪೂರ ಹೋಗುವುದನ್ನು ತಪ್ಪಿಸಲು ಮತ್ತು ಅವರ ಆರ್ಥಿಕ ಹೊರೆಯನ್ನು ತಗ್ಗಿಸಲು ಇಲ್ಲಿಯೆ ಗುಣಮಟ್ಟದ ಸೇವೆ ನೀಡುವ ಮೂಲಕ ಆರೋಗ್ಯ ಕ್ರಾಂತಿಗೆ ನಮ್ಮ ಸರ್ಕಾರ ಸಂಕಲ್ಪ ಮಾಡಿದ್ದು, ಇದರ ಭಾಗವಾಗಿಯೇ ಇಂದಿಲ್ಲಿ ಕಲಬುರಗಿ ಟ್ರಾಮಾ ಸೆಂಟರ್ ಲೋಕಾರ್ಪಣೆ ಮಾಡಲಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ 55.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಟ್ರಾಮಾ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ದೆಹಲಿಯ ಏಮ್ಸ್ ಆಸ್ಪತ್ರೆ ಹೊರತುಪಡಿಸಿದರೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಟ್ರಾಮಾ ಸೆಂಟರ್ ಇದಾಗಿದೆ. ಇಂದು ಕಲ್ಯಾಣ ಕರ್ನಾಟಕದ ಬಡ ಜನರ ಸೇವೆಗೆ ಇದನ್ನು ಅರ್ಪಿಸಲಾಗಿದೆ ಎಂದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಠಿಕತೆ ಹೆಚ್ಚಿರುವ ಕಾರಣ ಇದನ್ನು ನಿವಾರಣೆಗೆ ಮತ್ತು ಈ ಭಾಗದಲ್ಲಿನ ಆರೋಗ್ಯ ಸೇವೆ ಮತ್ತಷ್ಟು ಸುಧಾರಿಸಲು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಜೊತೆ ಚರ್ಚಿಸಿ ಹಬ್ & ಸ್ಪೋಕ್ ಮಾದರಿಯಲ್ಲಿ ಕಲಬುರಗಿಯಲ್ಲಿ ಸೆಂಟರ್ ಆಫ್ ಹೆಲ್ತ್ ಎಕ್ಸಿಲೆನ್ಸ್ ಕೇಂದ್ರವನ್ನು ಆರ್.ಡಿ.ಪಿ.ಆರ್. ಇಲಾಖೆಯಿಂದ ತೆರೆಯಲಾಗುವುದೆಂದು ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದರು.

ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಈ ಟ್ರಾಮಾ ಸೆಂಟರ್‍ಗೆ ಅಡಿಗಲ್ಲು ಹಾಕಿದಲ್ಲದೆ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಂದ ಉದ್ಘಾಟನೆ ಸಹ ಮಾಡಲಾಗಿತ್ತು. ಮುಂದೆ ಸೆಂಟರ್ ಆರಂಭಕ್ಕೆ ಬೇಕಾಗುವ ವೈದ್ಯಕೀಯ ಸಲಕರಣೆಗಳ ಖರೀದಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು 20 ಕೋಟಿ ರೂ. ಡಿಪೋಸಿಟ್ ಸಹ ಇಟ್ಟಿದ್ದರು. ಆದರೆ ನಂತರ ಬಂದ ಸರ್ಕಾರ 4 ವರ್ಷ ಗತಿಸಿದರೂ ಇದರ ಕಾರ್ಯಾಚರಣೆಗೆ ಗೋಜಿಗೆ ಹೋಗಿಲ್ಲ. ಟ್ರಾಮಾ ಸೆಂಟರ್ ಆರಂಭಿಸಲು ಮತ್ತೆ ನಮ್ಮ ಸರ್ಕಾರವೇ ಬರಬೇಕಾಯ್ತು. ಸರ್ಕಾರಕ್ಕೆ ತಾಯಿ ಹೃದಯ ಇರಬೇಕು, ಆದರೆ ಹಿಂದಿನ ಸರ್ಕಾರಕ್ಕೆ ಅದು ಇರಲಿಲ್ಲ. ನಮ್ಮದು ತಾಯಿ ಹೃದಯ ಇರುವ ಕಾಳಜಿವಂತ ಸರ್ಕಾರ, ಹೀಗಾಗಿಯೆ 9 ತಿಂಗಳಲ್ಲಿಯೇ ಬಡ ಜನರಿಗೆ ಅರ್ಪಿಸಿದ್ದೇವೆ ಎಂದರು.

ಕಲ್ಯಾಣ ಕರ್ನಾಟಕ ಕೇಂದ್ರವನ್ನಾಗಿಸಿ ಕಲಬುರಗಿಯಲ್ಲಿ ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ, ಕೇಂದ್ರದಿಂದ ಇ.ಎಸ್.ಐ.ಸಿ. ಆಸ್ಪತ್ರೆ, ಜಯದೇವ ಆಸ್ಪತ್ರೆ, ನವೀಕೃತ ಕಿದ್ವಾಯಿ ಆಸ್ಪತ್ರೆ ಆರಂಭಿಸುವ ಮೂಲಕ ಕಲಬುರಗಿಯನ್ನು ಮೆಡಿಕಲ್ ಹಬ್ ಮಾಡಲಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಶರಣಪ್ರಕಾಶ ಪಾಟೀಲ ಅವರ ದೂರದೃಷ್ಠಿ ನಾಯಕತ್ವದಿಂದ. 371 ಕಾಯ್ದೆ ಪರಿಣಾಮ ಪ್ರತಿ ವರ್ಷ ಈ ಭಾಗದ 1,000 ಜನರು ವೈದ್ಯರ ಸೀಟು ಪಡೆಯುತ್ತಿದ್ದಾರೆ. ಇಂತಹ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಜನರು ಕೆಲಸ ಮಾಡಿದವರನ್ನು ಗುರುತಿಸಬೇಕಿದೆ ಎಂದರು.

ನಿಮ್ಹಾನ್ಸ್, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಸ್ಥಾಪಿಸುವ ಆಸೆ: ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಬಡ ಜನರಿಗೆ ಉತ್ತರ ಆರೋಗ್ಯ ಸೇವೆ ಒದಗಿಸಲೆಂದೆ ತಾವು ಕಂಕಣ ಬದ್ಧರಾಗಿದ್ದು, ಈ ನಿಟ್ಟಿನಲ್ಲಿ ಜಿಮ್ಸ್ ವೈದ್ಯಕೀಯ ಕಾಲೇಜು, ಟ್ರಾಮಾ ಸೆಂಟರ್, ತಾಯಿ-ಮಕ್ಕಳ ಆಸ್ಪತ್ರೆ, ಸೂಪರ ಸ್ಪೆಷಾಲಿಟಿ ಆಸ್ಪತ್ರೆ, ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ ತರುವ ಮೂಲಕ ಕಲಬುರಗಿ ಜಿಲ್ಲೆಯನ್ನು ಮೆಡಿಕಲ್ ಹಬ್ ಆಗಿ ಪರಿವರ್ತನೆ ಮಾಡಲಾಗಿದೆ. ಮುಂದಿನ ದಿನದಲ್ಲಿ ನಿಮ್ಹಾನ್ಸ್ ಮಾನಸಿಕ ಕೇಂದ್ರದ ಶಾಖೆ ಮತ್ತು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಸ್ಥಾಪಿಸುವ ಕನಸು ಹೊಂದಿರುವೆ ಎಂದರು.

ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ವೈದ್ಯಕೀಯ ಸಚಿವನಾಗಿದ್ದಾಗ ಟ್ರಾಮಾ ಸೆಂಟರ್ ಉದ್ಘಾಟಿಸಿ ಅದರ ಕಾರ್ಯರಂಭಕ್ಕೆ ಹಣ ಮೀಸಲಿಟ್ಟರು ನಂತರ ಬಂದ ಸರ್ಕಾರ ಇದನ್ನು ಆರಂಭಿಸಲೆ ಇಲ್ಲ. ಈ ಕುರಿತು ಹಲವು ಬಾರಿ ಅಂದಿನ ಸರ್ಕಾರದ ಸಚಿವರಿಗೆ, ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೆ, ಅದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಸುದೈವ ಇದೀಗ ನಮ್ಮ ಸರ್ಕಾರ ಬಂದು ಮತ್ತೆ ನಾನು ವೈದ್ಯಕೀಯ ಸಚಿವನಾಗಿರುವ ಕಾರಣ ಇಂದಿಲ್ಲಿ ನ್ಯೂರೋಲಾಜಿ, ಆರ್ಥೋಪೆಡಿಕ್ಸ್, ಜನರಲ್ ಸರ್ಜರಿ, ಓರಲ್ ಮ್ಯಾಕ್ಸಿಲ್ಲೋ ಫೇಶಿಯಲ್ ಸರ್ಜರಿ, ಅರವಳಿಕೆ, ಬ್ಲಡ್ ಬ್ಯಾಂಕ್, ಫಿಸಿಯೋಥೆರೆಪಿ, ಸಿ.ಟಿ. ಸ್ಕ್ಯಾನ್, ಎಂ.ಆರ್.ಐ. ಹೀಗೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಪೂರ್ಣ ಪ್ರಮಾಣದಲ್ಲಿ ಟ್ರಾಮಾ ಸೆಂಟರ್ ಲೋಕಾರ್ಪಣೆ ಮಾಡಲಾಗಿದ್ದು, ಇಂದಿನಿಂದಲೆ ಬಡ ಜನರಿಗೆ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಮತ್ತು ಎ.ಪಿ.ಎಲ್. ಪಡಿತರದಾರರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಪ್ರಸ್ತುತ ಇರುವ ಕಿದ್ವಾಯಿ ಕ್ಯಾನ್ಸರ್ 100 ಹಾಸಿಗೆ ಜೊತೆಗೆ 101 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆ ಶಾಖೆ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಜಿಮ್ಸ್ ಆಸ್ಪತ್ರೆಯಲ್ಲಿ 170 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಭರದಿಂದ ಸಾಗಿದ್ದು, ಬರುವ ಜೂನ್ ಅಂತ್ಯದಲ್ಲಿ ಇದನ್ನು ಉದ್ಘಾಟಿಸಲಾಗುತ್ತದೆ. ಮಾರ್ಚ್ ಅಂತ್ಯದೊಳಗೆ 371 ಹಾಸಿಗೆಯ ಜಯದೇವ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗುವುದು. ಹಳೇ ಜಿಲ್ಲಾ ಆಸ್ಪತ್ರೆ ಕೆಡವಿ ಅಲ್ಲಿ 200 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುತ್ತದೆ. ಇದಲ್ಲದೆ ಜಿಮ್ಸ್ ಆವರಣದಲ್ಲಿಯೇ 50 ಕೋಟಿ ರೂ. ವೆಚ್ಚದಲಿ ಕ್ರಿಟಿಕಲ್ ಕೇರ್ ಯೂನಿಟ್, 15 ಕೋಟಿ ರೂ. ವೆಚ್ಚದಲ್ಲಿ ಸುಟ್ಟು ಗಾಯಗಳ ಆರೈಕೆ ಕೇಂದ್ರ ಸಹ ಸ್ಫಾಪನೆಗೆ ಮುಂದಾಗಿದ್ದೇನೆ. ಈ ಭಾಗದ ಜನರು ಬಡವರು, ಖಾಸಗಿ ಆಸ್ಪತ್ರೆಯಲ್ಲಿ ತೋರಿಸುವಂತಹ ಆರ್ಥಿಕ ಶಕ್ತಿ ಅವರಲಿಲ್ಲ. ಇದಕ್ಕಾಗಿ ನಮ್ಮ ಸರ್ಕಾರ ಇಂತಹ ಕೇಂದ್ರಗಳನ್ನು ಹಿಂದುಳಿದ ಭಾಗದಲ್ಲಿ ತೆರೆಯಲಾಗುತ್ತಿದೆ ಎಂದರು.

ಖಾಸಗಿ ಆಸ್ಪತ್ರೆಗೆ ಅಂಬುಲೆನ್ಸ್ ಹೋದ್ರೆ, ಚಾಲಕ ಸಸ್ಪೆಂಡ್: ಜಿಲ್ಲೆಯಲ್ಲಿ 108 ಅಂಬುಲೆನ್ಸ್ ವಾಹನಗಳು ಎಲ್ಲಿಯೇ ಅಪಘಾತವಾದರೆ ಜಿಲ್ಲಾ ಆಸ್ಪತ್ರೆಗೆ ತರುವ ಬದಲು ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವ ದೊಡ್ಡ ರ್ಯಾಕೆಟ್ ನಡೆದಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಅಂತಹ ವಾಹನ ಚಾಲಕರನ್ನು ಸಸ್ಪೆಂಡ್ ಮಾಡಿ ಕೆಲಸದಿಂದ ತೆಗೆದು ಹಾಕಲಾಗುವುದು. ಇನ್ನು ಮುಂದೆ ಜಿಲ್ಲೆಯಲ್ಲಿ ಎಲ್ಲಿಯೆ ಅಪಘಾತವಾದರು ಟ್ರಾಮಾ ಸೆಂಟರ್‍ಗೆ ರೋಗಿ ಬರುವಂತಾಗಬೇಕು. ಈ ಕುರಿತು ಸೂಕ್ತ ಸುತ್ತೋಲೆ ಹೊರಡಿಸಬೇಕು ಎಂದು ವೇದಿಕೆಯಲ್ಲಿದ್ದ ಡಿ.ಎಚ್.ಓ. ಡಾ. ರವಿಕಾಂತ ಸ್ವಾಮಿ ಅವರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ನಿರ್ದೇಶನ ನೀಡಿದರು.

ಖಾಸಗಿ ಆಸ್ಪತ್ರೆ ಬಿಲ್ ತಪಾಸಣೆ ಮಾಡಿ: ಜಿಲ್ಲೆಯಲ್ಲಿ ಸಣ್ಣ-ಪುಟ್ಟ ಸರ್ಜರಿಗೆ ಖಾಸಗಿ ಆಸ್ಪತ್ರೆಗೆ ಸೇರಿದರೆ ಸಾಕು 4 ರಿಂದ 10 ಲಕ್ಷ ರೂ. ವರೆಗೆ ಬಿಲ್ ಮಾಡಲಾಗುತ್ತಿದೆ. ಈ ಭಾಗದ ಬಡ ಜನರಿಗೆ ಇದರಿಂದ ಆರೋಗ್ಯ ಸೇವೆ ದುಬಾರಿಯಾಗಿದೆ. ಕಾರ್ಪೋರೇಟ್ ಆಸ್ಪತ್ರೆಗೆ ಸ್ಫರ್ಧೇ ನೀಡಲೆಂದೇ ನಮ್ಮ ಸರ್ಕಾರ ಇಂತಹ ಆರೋಗ್ಯ ಕೇಂದ್ರಗಳನ್ನು ತೆರೆಯುತ್ತಿದೆ. ಕಲಬುರಗಿ ನಗರದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗೆ ನೀಡಲಾದ ಚಿಕಿತ್ಸೆ ಬಿಲ್ಲುಗಳು ಸರ್ಕಾರ ಮಾರ್ಗಸೂಚಿ ಪ್ರಕಾರ ಇವೆಯೇ ಎಂದು ಪರಿಶೀಲಿಸಬೇಕು ಎಂದು ಡಿ.ಎಚ್.ಓ. ಅವರಿಗೆ ಡಾ.ಶರಣಪ್ರಕಾಶ ಪಾಟೀಲ ಸೂಚನೆ ನೀಡಿದರು.

ಕಾಳಜಿಯಿಂದ ಸೇವೆ ನೀಡಿ: ಕಲಬುರಗಿ ನಗರಕ್ಕೆ ಬಹುತೇಕ ಎಲ್ಲಾ ಆರೋಗ್ಯ ಕೇಂದ್ರಗಳನ್ನು ತರಲಾಗಿದೆ. ಇಲ್ಲಿನ ವೈದ್ಯರು ಮತ್ತು ಇತರೆ ಎಲ್ಲಾ ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ಕಾಳಜಿಯಿಂದ ಮಾತನಾಡಿ ಕೌನ್ಸಿಲಿಂಗ್ ಜೊತೆಗೆ ಚಿಕಿತ್ಸೆಯ ನಿಖರತೆಯನ್ನು ಸ್ಪಷ್ಟವಾಗಿ ರೋಗಿಗೆ ತಿಳಿಸಬೇಕು. ಅವರನ್ನು ವಿಶ್ವಾಸಕ್ಕೆ ಪಡೆದು ಚಿಕಿತ್ಸೆ ನೀಡಬೇಕು. ಸರಿಯಾಗಿ ಆರೈಕೆ ಮಾಡಬೇಕು. ಜಯದೇವ ಆಸ್ಪತ್ರೆಯ ಗುಣಮಟ್ಟದ ಸೇವೆ ಬಗ್ಗೆ ಜನ ಮಾತಾಡುಕೊಳ್ಳುತ್ತಾರೆ. ಅದೇ ರೀತಿ ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿಯಿಂದ ಸೇವೆ ನಿರೀಕ್ಷಿಸಿದ್ದೇನೆ ಎಂದು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಆಸ್ಪತ್ರೆಗೆ ಬೇಕಾದ ಮೂಲಸೌಕರ್ಯ ನೀಡಲು ನಾನು ಸದಾ ಸಿದ್ಧನಿದ್ದೇನೆ ಎಂದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ 2019ರಲ್ಲೆ ಉದ್ಘಾಟಿಸಿದರೂ ಟ್ರಾಮಾ ಸೆಂಟರ್ ಇದೂವರೆಗೆ ಕಾರ್ಯಚರಣೆ ಆರಂಭಿಸಿರಲಿಲ್ಲ. ಕೊರೋನಾ ಅವಧಿಯಲ್ಲಿ ತಾವು, ಎಂ.ಎಲ್.ಸಿ. ತಿಪ್ಪಣಪ್ಪ ಕಮಕನೂರ, ದಿ. ಕೆ.ಬಿ.ಶಾಣಪ್ಪ ಅವರು ಇಲ್ಲಿಯೇ ಚಿಕಿತ್ಸೆ ಪಡೆದಿದ್ದೇವೆ ಎಂದು ಸ್ಮರಿಸಿದ ಅವರು ಕೆಲಸ ಮಾಡಿದವರನ್ನು ಪ್ರೋತ್ಸಾಹಿಸುವ ಕೆಲಸ ಜನರಿಂದಾಗಬೇಕಿದೆ ಎಂದರು.

ಇದಕ್ಕು ಮುನ್ನ ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್. ಪ್ರಸ್ತಾವಿಕವಾಗಿ ಮಾತನಾಡಿ, 100 ಹಾಸಿಗೆಯ ಟ್ರಾಮಾ ಸೆಂಟರ್ ಅತ್ಯಾಧುನಿಕ ಇ.ಎಂ.ಆರ್.ಐ, ಸಿ.ಟಿ. ಸ್ಕ್ಯಾನಿಂಗ್ ಸೌಲಭ್ಯ ಇದೆ. ಮೇಜರ್ ಮತ್ತು ಮೈನರ್ ಓ.ಟಿ. ಒಳಗೊಂಡಿದೆ. 20 ಹಾಸಿಗೆ ಐ.ಸಿ.ಯು, 30 ಹಾಸಿಗೆ ಮಾಸ್ ಕ್ಯಾಜುವಲ್ಟಿಗೆ, 40 ಜನರಲ್ ವಾರ್ಡ್‍ಗೆ ಮೀಸಲಿರಿಸಿದೆ. ಮಹಿಳೆಯರಿಗೆ ಪ್ರತ್ಯೇಕ ವಾರ್ಡ್ ಸೌಲಭ್ಯ ಇದೆ. ಅತ್ಯಾಧುನಿಕ ಸೌಲಭ್ಯದ ಅಂಬುಲೆನ್ಸ್, ಬ್ಯಾಟರಿ ಚಾಲಿತ ವಾಹನಗಳು ಇಲ್ಲಿವೆ ಎಂದು ಕಟ್ಟಡ ಕುರಿತು ಮಾಹಿತಿ ನೀಡಿದರು.

ಮುಸ್ಕಾನ್ ಪ್ರಶಸ್ತಿ,ವೈದ್ಯ ತಂಡಕ್ಕೆ ಅಭಿನಂದನೆ: ನವಜಾತ ಶಿಶು ಮಕ್ಕಳಿಗೆ ಗುಣಮಟ್ಟದ ಸೇವೆ ನೀಡುತ್ತಿರುವ ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ಮುಸ್ಕಾನ್ ಯೋಜನೆಯಡಿ ಪ್ರಶಂಸನಾ ಪತ್ರ ಪಡೆದಿದ್ದು, ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಸಂದೀಪ ಅರಸಣಗಿ, ಡಾ.ರೇವಣಸಿದ್ದಪ್ಪ ಸೇರಿದಂತೆ ಇಡೀ ತಂಡಕ್ಕೆ ಹೂಗುಚ್ಚ ನೀಡಿ ಸಚಿವರುಗಳು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಆರ್.ಚೇತನ ಕುಮಾರ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಜಿಲ್ಲಾ ಶಸ್ತ್ರಜ್ಞ ಡಾ. ಅಂಬಾರಾಯ ರುದ್ರವಾಡಿ, ಟ್ರಾಮಾ ಸೆಂಟರ್ ಆರ್.ಎಮ್.ಓ ಡಾ.ರಾಜಶೇಖರ ಮಾಲಿ ಸೇರಿದಂತೆ ಜಿಮ್ಸ್ ಮತ್ತು ಟ್ರಾಮಾ ಸೆಂಟರ್ ವೈದ್ಯರು, ಅಧಿಕಾರಿ-ಸಿಬ್ಬಂದಿಗಳು ಇದ್ದರು. ಜಿಮ್ಸ್ ನಿರ್ದೇಶಕ ಡಾ.ಎಸ್.ಆರ್.ಉಮೇಶ ಸ್ವಾತಿಸಿದರು. ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಸಂದೀಪ ಅರಸಣಗಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here