ಕಲಬುರಗಿ: ಭಾರತದ ಮಾಜಿ ಉಪರಾಷ್ಟ್ರಪತಿ ಹಾಗೂ ಬಸವ ಸಮಿತಿ ಸಂಸ್ಥಾಪಕ ಡಾ. ಬಿ.ಡಿ. ಜತ್ತಿ ಸ್ಮಾರಕವನ್ನು ಎಲ್ಲ ಸಂಸದರ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು.
ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಮಂಗಳವಾರ ಸಂಜೆ ಜರುಗಿದ ಡಾ. ಬಸಪ್ಪ ದಾನಪ್ಪ ಜತ್ತಿಯವರ ೧೦೭ನೇ ಜನ್ಮ ದಿನೋತ್ಸವ ಅಂಗವಾಗಿ ಸಂಸ್ಥಾಪಕರ ದಿನಾಚರಣೆ ಹಾಗೂ ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬಸವ ಸಮಿತಿ ಜಾಲತಾಣ ಹಾಗೂ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಘೋಷಣೆ ಮಾಡಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಬಸವ ಸಮಿತಿಗೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಯೊಬ್ಬರೂ ನನಗೆ ವೋಟುಹಾಕಿರಿ ಎಂಬುದು ನನಗೆ ಗೊತ್ತು. ನನಗಲ್ಲ. ನರೇಂದ್ರ ಮೋದಿಗೆ ಹಾಕಿದ್ದೀರಿ. ನಿಮ್ಮೆಲ್ಲರಿಗೂ ಶಿರಸಾಷ್ಟಾಂಗ ನಮಸ್ಕಾರ -ಡಾ. ಉಮೇಶ ಜಾಧವ, ಸಂಸದ
ಬಸವ ಸಮಿತಿ ವೆಬ್ಸೈಟ್ ಲೋಕಾರ್ಪಣೆ ಮಾಡಿದ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿದರು.
ಇದೇವೇಳೆಯಲ್ಲಿ ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ದಂಪತಿಗೆ ಬಿ.ಡಿ. ಜತ್ತಿ ಸಂಶೋಧನ ಪ್ರಶಸ್ತಿ ಹಾಗೂ ಶಿವಮೊಗ್ಗದ ಜಯದೇವಪ್ಪ ಜೈನಕೇರಿ ಅವರಿಗೆ ಬಸವ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತ ಡಾ. ದಂಡೆ ದಂಪತಿ ಹಾಗೂ ಜೈನಕೇರಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಬಸವ ಸಮಿತಿಯ ಕೇಂದ್ರಾಧ್ಯಕ್ಷ ಅರವಿಂದ ಜತ್ತಿ ಅವರು ಪ್ರಶಸ್ತಿ ಪುರಸ್ಕೃತ ರ ಪರಿಚಯ ಮಾಡಿಕೊಟ್ಟರು. ಬಸವ ಸಮಿತಿಯ ಕಲಬುರಗಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಬೇಲಿಮಠದ ಡಾ. ಶಿವರುದ್ರ ಸ್ವಾಮೀಜಿ, ತಮಿಳುನಾಡಿನ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಚ್. ಎಸ್. ದೇವಾಡಿಗ ಸ್ವಾಗತಿಸಿದರು. ಡಾ. ಮಧುರಾ ಅಶೋಕಕುಮಾರ ನಿರೂಪಿಸಿದರು. ಉದ್ದಂಡಯ್ಯ ವಂದಿಸಿದರು.