ಕಲಬುರಗಿ; ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಡಿಯುವ ಜನರ ಶೋಷಣೆ ಮಾಡುತ್ತಿರುವುದರಿಂದ ಜನ ವಿರೋಧಿ ನೀತಿ ಅನುಸುರಿಸುತ್ತಿದೆ ಎಂದು ಆರೋಪಿಸಿ ಶುಕ್ರವಾರ ರೈತ, ಕೃಷಿ, ಕಾರ್ಮಿಕ ಸಂಯುಕ್ತ ಹೋರಾಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಿಸಾನ್ ಸಭಾದ ಮೌಲಾ ಮುಲ್ಲಾ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಸ್.ಆರ್. ಕೊಲ್ಲೂರ್, ನಾಗೇಂದ್ರಪ್ಪ ಥಂಬೆ, ಮಲ್ಲಿಕಾರ್ಜುನ್ ಪಾಟೀಲ್, ಅರ್ಜುನ್ ಗೊಬ್ಬೂರ್, ಪದ್ಮಿನಿ ಕಿರಣಗಿ, ಭೀಮಾಶಂಕರ್ ಮಾಡಿಯಾಳ್, ಮೇಘರಾಜ್ ಕಠಾರೆ, ಜಾವೇದ್ ಹುಸೇನ್, ನಾಗಯ್ಯಸ್ವಾಮಿ, ಮೋಬಿನ್ ಅಹ್ಮದ್ ಶಿವರೆಡ್ಡಿ ಪಾಸೋಡಿ, ರಮೇಶ್ ರಾಗಿ, ಬಾಬುರಾವ್ ಸುಳ್ಳದ್ ಮುಂತಾದವರು ಪಾಲ್ಗೊಂಡಿದ್ದರು.
ಸಂಯುಕ್ತ ಹೋರಾಟ ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪ್ರಮುಖರು ಮಾತನಾಡಿ, ರೈತರ, ಕೂಲಿಕಾರ್ಮಿಕ, ಕಾರ್ಮಿಕರ, ದುಡಿಯುವ ಜನರ ವಿರೋಧಿ ನೀತಿ ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಲೋಕಸಭೆ ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಂತೆ 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಗಳು ಡಾ. ಸ್ವಾಮಿನಾಥನ್ ಅವರ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸಿಲ್ಲ. ವಿದೇಶದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿರುವ ಪ್ರಧಾನಿ ಮೋದಿ, ಅವರಿಂದ ಬಡವರ ಹೊಟ್ಟೆ ತುಂಬುವುದೇ? ಎಂದು ಪ್ರಶ್ನಿಸಿದರು.
ಕಳೆದ 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು, 20 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ರೂ.ಗಳು ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕನಿಷ್ಟ 10 ಸಾವಿರ ರೂ.ಗಳಲ್ಲಿ ಪಿಂಚಣಿ ನೀಡುವಂತೆ, ಪ್ರಜಾಪ್ರಭುತ್ವ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೊಳಿಸುವಂತೆ, ನರೇಗಾ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಿ, 600 ರೂ.ಗಳ ಕೂಲಿ ನಿಗದಿ ಮಾಡಿ, ಬಯೋಮೆಟ್ರಿಕ್ ಪದ್ಧತಿಯನ್ನು ಕೈಬಿಡುವಂತೆ, ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುವಂತೆ ಅವರು ಒತ್ತಾಯಿಸಿದರು.
ಎಲ್ಲ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವಂತೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಸೆಸ್ ಕಾನೂನು-1996 ಪುನರ್ ಸ್ಥಾಪಿಸುವಂತೆ, 3ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸುವಂತೆ, ಬರ ಪೀಡಿತ ಕರ್ನಾಟಕದ ರೈತರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಅವರು ಆಗ್ರಹಿಸಿದರು.