ಕಾಳಗಿ; ಸಂವಿಧಾನದಲ್ಲಿ ಹೆಣ್ಣು, ಗಂಡು, ಮೇಲು, ಕೀಳು ಎನ್ನದೇ ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಭಾರತದ ಸಂವಿಧಾನವು ಸರ್ವರ ಹಿತವನ್ನು ಕಾಯುವ ಶ್ರೇಷ್ಠ ಗ್ರಂಥವಾಗಿದೆ ಎಂದು ತಹಸಿಲ್ದಾರ್ ಗಮಾವತಿ ರಾಠೋಡ್ ಅವರು ಹೇಳಿದರು.
ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ಗುರುವಾರ ಸಂಜೆ ಸಂವಿಧಾನ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಇಂದು ಸಮಾಜದಲ್ಲಿ ಗೌರವದಿಂದ ಬಾಳಲು ಬಾಬಾಸಾಹೇಬರು ನೀಡಿದ ಸಂವಿಧಾನವೇ ಕಾರಣ. ಹೀಗಾಗಿ ಎಲ್ಲರಿಗೂ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಕ ಶಂಕರ್ ಬಿರಾದಾರ್ ಅವರು ವಿಶೇಷ ಉಪನ್ಯಾಸ ನೀಡಿ, ಸಂವಿಧಾನದಲ್ಲಿ ಸರ್ವರ ಹಿತ ಅಡಗಿದೆ. ಬಾಬಾಸಾಹೇಬರ ದೂರದೃಷ್ಟಿಯ ಫಲವಾಗಿ ಇಂದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದೆ. ಯುವ ಸಮುದಾಯ ಸಂವಿಧಾನವನ್ನು ಓದಿ ಅವರ ತತ್ವಗಳನ್ನು ಆಚರಣೆಯಲ್ಲಿ ತರಬೇಕು ಎಂದು ಸಲಹೆ ನೀಡಿದರು.
ವೇದಿಕೆಯ ಮೇಲೆ ರಟಕಲ್ ಪೋಲಿಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್, ಸಮಾಜ ಕಲ್ಯಾಣ ಅಧಿಕಾರಿ ಪ್ರಭುಲಿಂಗ್ ವಾಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಪ್ರೇಮಕುಮಾರ್, ಕಿತ್ತೂರ್ ರಾಣಿ ಚೆನ್ನಮ್ಮ, ವಸತಿ ಶಾಲೆಯ ಪ್ರಿನ್ಸಿಪಾಲ್ ಡಾ. ರಾಜಶೇಖರ್ ಮಾಂಗ್, ಮಾಜಿ ಅಧ್ಯಕ್ಷ ಶ್ರೀಕಾಂತ್ ತಾಂಡೂರ್, ಸದಸ್ಯರಾದ ಮಲ್ಲಪ್ಪ ಚಿತಕೋಟಿ, ಕೃಷ್ಣ ಸೇರಿ, ರೇವಣಸಿದ್ದಪ್ಪ ತೆಳಗಿನದೊಡ್ಡಿ, ರೇವಣಸಿದ್ದಪ್ಪ ಬಬಲಿ, ಸಿದ್ದಯ್ಯ ಮಡಿವಾಳ್, ಅಜೀಜ್ ಮೋಮಿನ್, ಬಾಲಾಜಿ ಜಮಾದಾರ್, ಹಣಪತಿ ರಾಟೋಡ್, ಪ್ರೇಮಿಳಾ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ, ಪ್ರೌಢ ಹಾಗೂ ಅನುದಾನಿತ, ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಕಂದಾಯ, ಶಾಲಾ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕವನ್ನು ಬಹುಮಾನವಾಗಿ ನೀಡಲಾಯಿತು. ಸುಧಾಕರ್ ಅವರು ಸ್ವಾಗತಿಸಿದರು. ಶಿಕ್ಷಕ ಬಾದಶಹಾ ಅಲ್ದಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳ ಪಿರಾಮಿಡ್ ರಚನೆ ಹಾಗೂ ಸಂವಿಧಾನ ಪ್ರಸ್ತಾವನೆಯ ವಾಚನ ಆಕರ್ಷಕವಾಗಿತ್ತು. ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಕುಂಭ ಕಲಶ, ಹಲಗೆ, ಡೊಳ್ಳು, ಕೋಲಾಟ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಷಕವಾಗಿದ್ದವು.