ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಪ್ರಿಯಾಂಕ್ ಖರ್ಗೆ ಪತ್ರ
ಕಲಬುರಗಿ: ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳೂ ಮುಂದಿನ ಆರ್ಥಿಕ ವರ್ಷದಲ್ಲಿ ವಿವಿಧ ಬಾಬ್ತುಗಳಡಿ ಲಭ್ಯವಾಗುವ ಅನುದಾನ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳನ್ನೊಳಗೊಂಡಂತೆ ಗ್ರಾಮ ಪಂಚಾಯತಿ ಆಯವ್ಯಯ (ಪಂಚಾಯತ್ ಬಜೆಟ್) ಕಡ್ಡಾಯವಾಗಿ ತಯಾರಿಸಿ ಮಾರ್ಚ್ 10ನೆ ತಾರೀಕಿನ ಒಳಗೆ ಗ್ರಾಮ ಪಂಚಾಯತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಗ್ರಾಮ ಪಂಚಾಯತಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುವ ಶಾಸನಬದ್ಧ ಅನುದಾನ, ವಿವಿಧ ಯೋಜನೆಗಳಡಿ ದೊರೆಯುವ ಅನುದಾನದ ಜೊತೆಗೆ ಸ್ವಂತ ಸಂಪನ್ಮೂಲ ಸಂಗ್ರಹಿಸಲು ಅವಕಾಶವಿರುವುದರಿಂದ ಈ ಎಲ್ಲ ಮೂಲಗಳನ್ನು ಕ್ರೋಢೀಕರಿಸಿ ಗ್ರಾಮ ಪಂಚಾಯತಿಗಳು ಆಯವ್ಯಯವನ್ನು ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಲು ಸಚಿವರು ಪತ್ರದಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ವೈಯಕ್ತಿಕವಾಗಿ ಬರೆದಿರುವ ಪತ್ರಗಳಲ್ಲಿ ಕೋರಿದ್ದಾರೆ.
ಗ್ರಾಮ ಪಂಚಾಯತಿ ಸಭೆಯಲ್ಲಿ ಅನುಮೋದನೆಯಾದ ಆಯವ್ಯಯವನ್ನು ತಾಲ್ಲೂಕು ಪಂಚಾಯಿತಿಗೆ ಕಳುಹಿಸಿಕೊಡಬೇಕು ಎಂದು ಹೇಳಿರುವ ಸಚಿವರು ಗ್ರಾಮ ಪಂಚಾಯತಿ ಆಯವ್ಯಯವು (ಪಂಚಾಯತ್ ಬಜೆಟ್) ಲಭ್ಯ ಅನುದಾನ, ಅದು ಕೈಗೊಳ್ಳುವ ಜನಪರ ಯೋಜನೆಗಳು ಹಾಗೂ ತನ್ನ ಅಭಿವೃದ್ಧಿ ಪರ ಆಶಯಗಳನ್ನು ಪ್ರತಿಬಿಂಬಿಸುವಂತಿರಬೇಕಾಗುತ್ತದೆಂದು ತಿಳಿಸಿದ್ದಾರೆ.
ರಾಜ್ಯದ ಬಹಳಷ್ಟು ಗ್ರಾಮ ಪಂಚಾಯತಿಗಳು ಸಕಾಲದಲ್ಲಿ ಆಯವ್ಯಯ ತಯಾರಿಸಿ ಅನುಮೋದನೆ ಪಡೆಯದೇ ವೆಚ್ಚ ಭರಿಸುತ್ತಿರುವುದು ಲೆಕ್ಕಪರಿಶೋಧನಾ ವರದಿಗಳಿಂದ ತಿಳಿದು ಬಂದಿದ್ದು, ಗ್ರಾಮ ವಿಕೇಂದ್ರಿಕರಣದ ಆಶಯಗಳಂತೆ ಪಂಚಾಯತಿಗಳು ಬಜೆಟ್ ಮಂಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.