ನವದೆಹಲಿ: ಬಂಜಾರಾ ಜನಾಂಗವು ಶಿಕ್ಷಣವನ್ನು ಹೊಂದಿ ನವಯುಗ ನಿರ್ಮಾಣದ ಸಂಕಲ್ಪ ತೊಡಬೇಕೆಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹೇಳಿದರು.
ನವದೆಹಲಿಯ ಎನ್ ಡಿ ಎಂ ಸಿ ಕನ್ವೆನ್ಷನ್ ಸಭಾಂಗಣದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ಸಂತ ಸೇವಾಲಾಲ ಮಹಾರಾಜ ಚಾರಿಟಬಲ್ ಟ್ರಸ್ಟ್ ಮತ್ತು ಅಖಿಲ ಭಾರತ ಬಂಜಾರ ಸೇವಾ ಸಂಘದ ಸಹಯೋಗದಲ್ಲಿ ಫೆಬ್ರವರಿ 19ರಂದು ಏರ್ಪಡಿಸಿದ ಸಂತ ಸೇವಾಲಾಲ ಮಹಾರಾಜರ 285ನೆಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಬಂಜಾರ ಸಮುದಾಯದವರು ಆಡುವ ಮಾತೃಭಾಷೆಯು ಒಂದೇ, ಉಡುಗೆ ,ಆಹಾರ ಕ್ರಮ ಎಲ್ಲವೂ ಒಂದೇ ಆಗಿದ್ದು ವೈವಿಧ್ಯತೆಯ ರಾಷ್ಟ್ರದಲ್ಲಿ ಏಕತೆಯನ್ನು ಸಾಧಿಸಿ ಬಾಳಿದವರು.ಕಠಿಣ ದುಡಿಮೆಯ ಸಂಸ್ಕೃತಿ ಮೈಗೂಡಿಸಿದ ಈ ಸಮಾಜವು ಶಿಕ್ಷಣ ಪಡೆದು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಬಯಸಿದ ಹಿಂದುಳಿದ ವರ್ಗಗಳ ಪ್ರಗತಿಯ ಸಂಕಲ್ಪದಲ್ಲಿ ಮುಂದಡಿಯಿಡು ವ ಅಗತ್ಯವಿದೆ. ಶಿಕ್ಷಣವಂತರಾದರೆ ಡಾ. ಉಮೇಶ್ ಜಾಧವ್ ಅಂತಹ ಸಂಸದರನ್ನು ಕೊಡುಗೆಯಾಗಿ ನೀಡಲು ಸಾಧ್ಯ ಮತ್ತು ಅವರು ತಮ್ಮ ಸಮುದಾಯಕ್ಕಾಗಿ ನಿರಂತರ ಶ್ರಮಿಸುತ್ತಿದ್ದು ಸಂಸತ್ತಿನಲ್ಲಿ ಅವರು ಮಂಡಿಸುವ ಪ್ರಶ್ನೆಗಳು ಅತ್ಯಂತ ಪ್ರಗತಿಪರವಾದುದು ಎಂದು ಸಂಸದ ಜಾಧವ್ ಅವರನ್ನು ಶ್ಲಾಘಿಸಿದರು. ಲಂಬಾಣಿಗರಲ್ಲಿ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪುನರ್ ಜಾಗೃತಿ ಮೂಡಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಬಲ ಶಕ್ತಿಯಾಗಿ ಬೆಳೆದು ನಿಲ್ಲಬೇಕು ಎಂದು ಅವರು ಹೇಳಿದರು.
ಸಂತ ಸೇವಾಲಾಲ ಮಹಾರಾಜರು ಬಂಜಾರ ಸಮುದಾಯಕ್ಕೆ ತಮ್ಮ ಅಮೂಲ್ಯವಾದ ಆದರ್ಶಗಳನ್ನು ನೀಡಿ ಆಧ್ಯಾತ್ಮದ ಬೋಧನೆ ಮಾಡಿದವರು. ದೇಶ ಮತ್ತು ಧರ್ಮದ ರಕ್ಷಣೆಗೆ ಪಣತೊಟ್ಟ ಬಂಜಾರ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ನೀಡಿದ ಕೊಡುಗೆ ಅನುಪಮವಾದದ್ದು ಬಂಜಾರ ಜನಾಂಗವು ಪ್ರಜಾಪ್ರಭುತ್ವದಲ್ಲಿ ಸಕ್ರಿಯ ಪಾಲುದಾರಿಕೆ ಪಡೆದ ಪರಿಣಾಮವಾಗಿ ನನ್ನಂಥವರು ಈ ಸ್ಥಾನಕ್ಕೆ ಬರಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳಿದರು.
ಕಾಡಿನಲ್ಲಿ ಜೀವನ ಮಾಡಿದ ಬಂಜಾರ ಸಮಾಜವು ಕಾಡಿನ ರಕ್ಷಣೆಯನ್ನು ಮತ್ತು ಪರಿಸರವನ್ನು ಕಾಪಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಶಿಕ್ಷಣದಿಂದ ದೂರ ಉಳಿದ ನಿವಾಸಿಗಳು ಅದರಲ್ಲೂ ಹೆಣ್ಣುಮಕ್ಕಳು ಶಿಕ್ಷಣ ಪಡೆದು ಪ್ರಗತಿಯನ್ನು ಸಾಧಿಸಲು ನಾವೆಲ್ಲರೂ ಒಟ್ಟಿಗೆ ಕಾರ್ಯವೆಸಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಓಂ ಬಿರ್ಲಾ ಅವರು ಭೋಗ ಪೂಜೆ ನೆರವೇರಿಸಿದ ನಂತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಡಾ. ಶಂಕರ್ ಸೇವಿಯಾ ಪವಾರ್ ಅವರ ಕುರಿತಾಗಿ ಪ್ರಕಟಗೊಂಡ ಗ್ರಂಥ ಭಾಜವಾದರೂ ವನ್ನು ಬಿಡುಗಡೆ ಮಾಡಿದರು ಶಿವಾಜಿ ಮಹಾರಾಜ ಜಯಂತಿಯ ದಿನ ವಾದುದರಿಂದ ಎಲ್ಲರಿಗೂ ಶುಭ ಕೋರಿದರು.
ಭರತಭೂಮಿ ರಕ್ಷಣೆ ಮಾಡಿದ ಬಂಜಾರ ಸಮದಾಯ; ಬಂಜಾರ ಸಮುದಾಯದ ಜನರಿಗೆ ಸಂತ ಸೇವಾಲಾಲ ಮಹಾರಾಜರು ದೇಶ ರಕ್ಷಣೆ ಮತ್ತು ಧರ್ಮ ರಕ್ಷಣೆಯ ಬೋಧನೆ ಮಾಡಿ ಬೆಳೆಸಿದರು ಎಂದು ಕೇಂದ್ರದ ಸಂಸ್ಕೃತಿ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ ಹೇಳಿದರು.
ಅಲೆಮಾರಿ ಜನಾಂಗವಾದ ಬಂಜಾರ ಸಮುದಾಯದವರು ಶೋಷಣೆಯ ವಿರುದ್ಧ ಹೋರಾಡಿ ಸನಾತನ ಪರಂಪರೆಯೊಂದಿಗೆ ಬೆಳೆದವರು. ಗುರುಗಳ ಬೋಧನೆಯಿಂದ ಇವೆಲ್ಲವೂ ಸಾಧ್ಯವಾಗಿದೆ ಸಮುದಾಯಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗವೇ ಹೊರತು ಬೇರೆ ಬೇರೆ ಅಲ್ಲ. ಎಲ್ಲರೂ ಒಂದೇ. ಭರತ ಭೂಮಿಯ ರಕ್ಷಣೆ ಹಾಗೂ ಧರ್ಮದ ರಕ್ಷಣೆ ಎಲ್ಲರ ಮೂಲ ಗುರಿ.
ಸಿಖ್ ಸಮುದಾಯದ ಗುರುಗಳು ಅನೇಕ ತ್ಯಾಗಗಳನ್ನು ಮಾಡಿ ಧರ್ಮವನ್ನು ರಕ್ಷಣೆ ಮಾಡಿದ್ದಾರೆ. ಹಾಗೆ ಸಣ್ಣ ಸಣ್ಣ ಜನ ಸಮುದಾಯಗಳು ಬಂಜಾರದವರಂತೆ ಒಂದೇ ಗುರಿ ಯೊಂದಿಗೆ ಮುನ್ನಡೆದಿರುವುದನ್ನು ನಾವು ಕಾಣಬಹುದು. ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯ ಕಟ್ಟಿದಂತೆ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಲಲ್ಲಾ ಮಂದಿರ ನಿರ್ಮಾಣದಿಂದ ಹಿಂದೂ ಸಾಮ್ರಾಜ್ಯ ಸ್ಥಾಪನೆಯ ಕಾರ್ಯ ಇದೀಗ ನಡೆದಿದೆ. ಪರಂಪರೆ ಮತ್ತು ಸನಾತನ ಸಂಸ್ಕೃತಿಯನ್ನು ವಿಚ್ಛಿದ್ರಗೊಳಿಸುವ ಶಕ್ತಿಗಳ ವಿರುದ್ಧ ಎದ್ದು ನಿಲ್ಲಬೇಕಾಗಿದೆ ಎಂದು ಲೇಖಿ ಹೇಳಿದರು.
ಸಾಂಸ್ಕೃತಿಕ ಕೇಂದ್ರಕ್ಕೆ ಜಮೀನು ಮಂಜೂರಾತಿಗೆ ಒತ್ತಾಯ: ಕಾರ್ಯಕ್ರಮದ ಪ್ರಮುಖ ಸಂಘಟಕರಾದ ಕಲ್ಬುರ್ಗಿ ಕ್ಷೇತ್ರದ ಸಂಸದ ಡಾ. ಉಮೇಶ್ ಜಿ .ಜಾದವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದೆಹಲಿಯಲ್ಲಿ ಬಂಜಾರ ಜನಾಂಗದ ಸಾಂಸ್ಕೃತಿಕ ಕೇಂದ್ರ ಸ್ಥಾಪನೆಗೆ ಜಮೀನು ನೀಡುವಂತೆ ಸ್ಪೀಕರ್ ಓಂ ಬಿರ್ಲಾ ಅವರ ಮೂಲಕ ಕೇಂದ್ರಕ್ಕೆ ಒತ್ತಾಯಿಸಿದರು. ಮಹಾರಾಷ್ಟ್ರ ಮತ್ತು ತೆಲಂಗಾಣಗಳಲ್ಲಿರುವಂತೆ ಏಪ್ರಿಲ್ 8 ರಂದು” ಬಂಜಾರ ಸಾಂಸ್ಕೃತಿಕ ದಿನ ” ಎಂದು ಕರ್ನಾಟಕದಲ್ಲಿ ಘೋಷಣೆ ಮಾಡಲು ಮುಖ್ಯಮಂತ್ರಿ ಅವರಿಗೆ ವಿನಂತಿಸುವುದಾಗಿ ಅವರು ಹೇಳಿದರು.
ಪೌರಾದೇವಿ ಅಭಿವೃದ್ಧಿಗೆ 593 ಕೋಟಿ ವೆಚ್ಚ: ಬಂಜಾರ ಜನಾಂಗದವರ ಕಾಶಿ ಎಂದೇ ಪರಿಗಣಿತ ಮಹಾರಾಷ್ಟ್ರದ ಪೌರಾದೇವಿಯ ಅಭಿವೃದ್ಧಿಗಾಗಿ ಮಹಾರಾಷ್ಟ್ರ ಸರ್ಕಾರವು 593 ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ಮಹಾರಾಷ್ಟ್ರದ ಮಣ್ಣು ಸಂರಕ್ಷಣಾ ಹಾಗೂ ಜಲ ಸಂವರ್ಧನೆ ಖಾತೆಯ ಸಚಿವರಾದ ಸಂಜಯ್ ಭಾವು ಡಿ. ರಾಥೋಡ್ ಹೇಳಿದರು.
ಒಂದೇ ಭಾಷೆ, ಒಂದೇ ಪೋಷಾಕು ಮತ್ತು ಆಹಾರ ಸಂಸ್ಕೃತಿಯನ್ನು ಹೊಂದಿದ ಲಂಬಾಣಿ ಜನಾಂಗದವರಿಗೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆಯಾಗಿ ಮೀಸಲಾತಿ ನೀಡುತ್ತಿದ್ದು ಇದನ್ನು ಇಡೀ ದೇಶದಲ್ಲಿ ಒಂದೇ ತೆರನಾಗಿ ಅನ್ವಯಿಸುವಂತೆ ಜಾರಿ ಮಾಡಲು ಅವರು ಒತ್ತಾಯಿಸಿದರು.
ತೆಲಂಗಾಣದ ಮಾಜಿ ಸಂಸದರಾದ ರವೀಂದ್ರ ನಾಯಕ್ ಮಾತನಾಡಿ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು, ರಾಷ್ಟ್ರದಲ್ಲಿ ಸಮಾನ ಮೀಸಲಾತಿ ಜಾರಿಗೊಳಿಸಬೇಕು, ತಾಂಡಾ ಗಳ ಅಭಿವೃದ್ಧಿಗೆ ನಿಗಮ ರಚನೆ ಆಗಬೇಕು ಹಾಗೂ ಬಂಜಾರ ಗುರುಗಳಾದ ರಾಮರಾಜ ಮಹಾರಾಜರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಒತ್ತಾಯ ಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಗಳಾದ ಮಂಜಿಂದರ್ ಸಿಂಗ್ ಸಿರ್ಸಾ, ಬಂಜಾರ ರಾಷ್ಟ್ರೀಯ ಸೇವಾ ಸಂಘದ ಅಧ್ಯಕ್ಷರಾದ ಶಂಕರ್ ಪವಾರ್, ತೆಲಂಗಾಣದ ಮಾಜಿ ವಿಧಾನ ಪರಿಷತ್ ಸದಸ್ಯರಾದ ರಾಮಲು ನಾಯಕ್, ಕುಲವಂತ್ ಸಿಂಗ್, ಬಾಬು ರಾಜೇಂದ್ರ ಶಿವರಾಜ ರದ್ದೇವಾಡಗಿ, ಅರುಣ್ ಜಾಧವ್, ವಿಠ್ಠಲ್ ಜಾಧವ್, ಆರ್. ಕೆ. ಕಾಶಿನಾಥ್ ಬಿರಾದಾರ್ ಮತ್ತಿತರರು ಹಾಜರಿದ್ದರು.
ಲಂಬಾಣಿ ನೃತ್ಯೋತ್ಸವ: ಜಯಂತ್ಯೋತ್ಸವದ ಅಂಗವಾಗಿ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಬಂಜಾರ ಕಲಾತಂಡಗಳಿಂದ ಲಂಬಾಣಿ ಪೋಷಾಕು ಧರಿಸಿ ಸಾಂಸ್ಕೃತಿಕ ವೈವಿಧ್ಯಮಯ ನೃತ್ಯ- ಹಾಡುಗಳು ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು. ಕೊಪ್ಪಳದ ಕಾದಂಬರಿ ಲಂಬಾಣಿ ಕಲಾವಿದರ ತಂಡ, ದಾವಣಗೆರೆಯ ಚಿನ್ನಸಮುದ್ರ ತಾಂಡಾದ ಜಾನಪದ ಗಾಯಕ ಉಮೇಶ್ ನಾಯಕ್, ಕಸ್ತೂರಿ ಬಾಯಿ ಹಾಗೂ ತೆಲಂಗಾಣದ ಭಿಕ್ಷು ನಾಯಕ್ ತಂಡವು ಹಾಡು, ನೃತ್ಯಗಳೊಂದಿಗೆ ಮನರಂಜನೆ ನೀಡಿತು.ಸಾಯಂಕಾಲ ಬಂಜಾರ ಸಮುದಾಯದ ಸವಾಲುಗಳು ಕುರಿತಾಗಿ ವಿಚಾರಗೋಷ್ಠಿ ನಡೆಯಿತು.