ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ವ್ಯಕ್ತಿಗೆ ಉದ್ಯೋಗ ನೀಡುವುದರೊಂದಿಗೆ ಗ್ರಾಮಕ್ಕೆ ಬೇಕಾದ ಆಸ್ತಿಗಳನ್ನು ನಿರ್ಮಾಣ ಮಾಡುತ್ತದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭನ್ವರಸಿಂಗ್ ಮೀನಾ ರವರು ತಿಳಿಸಿದರು.
ನಗರದ ಹೊರವಲಯದಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆ ಮೈಸೂರು, ರವರ ಆಶ್ರಯದಲ್ಲಿ ಆಯೋಜಿಸಿದ್ದ ಬೇರ್ ಫುಟ್ ಟೆಕ್ನೀಷಿಯನ್ಸ್ ಗಳಿಗೆ 90 ದಿನಗಳ ಪ್ರಮಾಣೀಕರಣ ತರಬೇತಿಯನ್ನು ಉದ್ಘಾಟಸಿ ಮಾತನಾಡುತ್ತಿದ್ದರು.
ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯು ವ್ಯಕ್ತಿಗಳಿಗೆ ಉದ್ಯೋಗ ಕೊಡುವುದಲ್ಲದೆ, ಅಂತಹ ಉದ್ಯೋಗದಡಿ ನಿರ್ಮಾಣವಾಗುವ ಕೆರೆ, ಬಾವಿ, ಕೃಷಿ ಹೊಂಡ, ಬದುನಿರ್ಮಾಣ, ಕ್ರೀಡಾ ಮೈದಾನಗಳು, ಇತ್ಯಾದಿಗಳು ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಬೇಕಾದಂತಹ ಆಸ್ತಿಯನ್ನು ನಿರ್ಮಾಣ ಮಾಡುತ್ತವೆ ಎಂದರು.
ಇಂತಹ ಆಸ್ತಿಗಳ ನಿರ್ಮಾಣವಾಗುವಿಕೆಯಲ್ಲಿ ಮೇಲ್ವಿಚಾರಣೆ ಮಾಡುವ ಬಿ.ಎಫ್.ಟಿ ಸಿಬ್ಬಂಧಿಗಳ ಕರ್ತವ್ಯ ಜವಾಬ್ದಾರಿ ಅತ್ಯಂತ ಮುಖ್ಯವಾಗಿರುತ್ತದೆ. ಹಾಗೂ ಸಿಬ್ಬಂಧಿಗಳು ಸಂಕುಚಿತ ಭಾವವನ್ನು ಹೊಂದದೆ ವಿಶಾಲ ಮನೋಭಾವ ಹೊಂದಬೇಕು, ಅಂದಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಕಲಬುರಗಿಯ ಉಪನಿರ್ದೇಶಕರಾದ ಧನರಾಜ್ ಬೋರಾಳೆ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಸಂಸ್ಥೆಯ ಬೋಧಕರಾದ ಶಿವಪುತ್ರ ಗೊಬ್ಬೂರು, ವಂದಿಸಿದರು.
ಬೋಧಕರಾದ ಡಾ.ರಾಜು ಕಂಬಳಿಮಠ ಕಾರ್ಯಕ್ರಮ ನಿರೂಪಿಸಿದರು, ಬೋಧಕರಾದ ಸಂತೋಷ ನಾಗಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನರೇಗಾ ಎಡಿಪಿಸಿ ಮಲ್ಲಮ್ಮ, ತರಬೇತಿ ವ್ಯವಸ್ಥಾಪಕರಾದ ಪ್ರಶಾಂತ ಅಂಗಡಿ, ತರಬೇತಿ ಸಹಾಯಕರಾದ ಅರ್ಚನ ಪಾಟೀಲ್, ಅಶ್ವಿನಿ ಪೂಜಾರಿ ಉಪಸ್ಥಿತರಿದ್ದರು.