ಕಲಬುರಗಿ: ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಕೋಮುವಾದ ಹೆಚ್ಚಿಸುತ್ತಿರುವ ಹಿಂದೂ ಜಾಗೃತಿ ಸೇನೆಯ ಮುಖಂಡರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಅಶ್ವಿನಿ ಯವರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‍ಐ) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಶರಣ ಸೂಫಿ ಸಂತರ ನಾಡಿನಲ್ಲಿ ಜಾತಿವಾದ, ಕೋಮುವಾದಕ್ಕೆ ನಾವು ಜಾಗ ನೀಡುವುದು ಬೇಡ. ಜಾತಿ ಧರ್ಮಗಳನ್ನು ಮೀರಿದ ಮಾನವೀಯತೆ ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು. ಆದರೆ ಕಳೆದ ವಾರ 22 ರಂದು ರಟಕಲ್ ಗ್ರಾಮದ ನರ್ಸ್ ಅಶ್ವಿನಿ ಅವರ ಮೇಲೆ ಮತಾಂತರದ ಸುಳ್ಳು ಆರೋಪ ಹೊರಿಸಿ ಕೋಮುವಾದ ಹೆಚ್ಚಿಸಲು ಹಿಂದೂ ಜಾಗೃತಿ ಸೇನೆಯು ಮುಂದಾಗಿದೆ ಎಂದು ಸಂಘಟನೆಯ ಸಂಚಾಲನಾ ಸಮಿತಿ ಲವಿತ್ರ ಆರೋಪಿಸಿದರು.
ನರ್ಸ್ ಅಶ್ವಿನಿ ಯವರು ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿರುವ ಸಂಧರ್ಭದಲ್ಲಿ ಹಿಂದೂ ಜಾಗೃತಿ ಸೇನೆಯ ಮುಖಂಡರು ಒತ್ತಾಯಪೂರ್ವಕ ಮನೆಯೊಳಗೆ ಬಂದು ಪೂಜೆ ಮಾಡುತ್ತಿರುವ ಅಶ್ವಿನಿ ಹಾಗೂ ಸಂಗಡಿಗರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮನೆಯೊಳಗೆ ಒತ್ತಾಯಪೂರ್ವಕ ನುಗ್ಗಿ ಅವರನ್ನು ಪೂಜೆ ಮಾಡುತ್ತಿರುವ ಕೋಣೆಯಿಂದ ಹೊರದೂಡುವುದಲ್ಲದೇ ನೀವು ಮತಾಂತರ ಮಾಡುತ್ತಿದ್ದೀರಿ ಎಂದು ಅವರಿಗೆ ಬೆದರಿಕೆ ಹಾಕಿ ಗ್ರಾಮದಲ್ಲಿ ವಿವಾದ ಹುಟ್ಟುಹಾಕಿದ್ದಾರೆ.
ಅಶ್ವಿನಿಯವರು ತಮ್ಮ ಕೆಲಸಕ್ಕೆಂದು ಹೋಗುವಾಗ ಮತ್ತೆ ಅವರಿಗೆ ಜೀವ ಬೆದರಿಕೆ ನೀಡಿದ್ದಾರೆ. ಅಶ್ವಿನಿ ಯವರು ಅಟ್ರಾಸಿಟಿ ಕೇಸನ್ನು ದಾಖಲಿಸಿದ್ದಾರೆ ಆದರೆ ಪೊಲೀಸರು ಇದರ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಅಶ್ವಿನಿ ಯವರಿಗೆ ಜೀವ ಬೆದರಿಕೆ ಇರುವುದರಿಂದ ಅವರಿಗೆ ರಕ್ಷಣೆ ನೀಡಬೇಕು ಎಂದು ಸಂಘಟನೆಯ ಸದಸ್ಯರು ಆಗ್ರಹಿಸಿದರು.
ಜಿಲ್ಲಾಡಳಿತ ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಧರ್ಮದ ಹೆಸರಲ್ಲಿ ನಾಡಿನ ಸೌಹಾರ್ಧತೆಯನ್ನು ಕದಡುತ್ತಿರುವ ಕೋಮುವಾದಿಗಳನ್ನು ನಿಯಂತ್ರಿಸುವಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾಗರಾಜ, ನಾಗಮ್ಮ, ಆಕಾಶ ಚಿಂಚನಸೂರ, ಕಮಲಾಕರ, ಕೃಷ್ಣಪ್ಪ ಧನ್ನಿ ಇದ್ದರು.