ಸುರಪುರ: ಸರಕಾರ ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವ ಯೋಜನೆಯ ಮೂಲಕ ಹೆಣ್ಣು ಮಗುವಿನ ರಕ್ಷಣೆ ಎಷ್ಟು ಮುಖ್ಯ ಎನ್ನುವುದನ್ನು ಜಾಗೃತಿಗೊಳಿಸುತ್ತದೆ,ಹೆಣ್ಣು ಭ್ರೂಣ ಹತ್ಯೆಯಾಗಲಿ ಅಥವಾ ಲಿಂಗ ಪತ್ತೆಯಾಗಲಿ ಮಾಡುವುದು ಮಹಾ ಅಪರಾಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಅನಿಲಕುಮಾರ ಕಾಂಬ್ಳೆ ತಿಳಿಸಿದರು.
ನಗರದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತಿ,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ,ತಾಲೂಕ ಆಡಳಿತ,ತಾಲೂಕ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ನಡೆದ ತರಬೇತಿ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಹೆಣ್ಣು ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ,ಅಲ್ಲದೆ ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸುವ ಕಾರ್ಯವನ್ನು ಪೋಷಕರು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದಶರಥ ನಾಯಕ ಮಾತನಾಡಿ,ಹೆಣ್ಣು ಭ್ರೂಣ ಹತ್ಯೆ ಮಾಡುವುದು ಅಪರಾಧವಾಗಿದ್ದು,ಇದಕ್ಕೆ ಶಿಕ್ಷೆಯಾಗಲಿದೆ ಎಂದರು.
ಅಲ್ಲದೆ ಪ್ರಸವ ಪೂರ್ವ ಲಿಂಗ ಪತ್ತೆ ಮಾಡಿದರೆ ಅದಕ್ಕೂ ಶಿಕ್ಷೆಯಾಗಲಿದೆ ಎಂದರು.ಅಲ್ಲದೆ ಇಂದು ಬಾಲ್ಯ ವಿವಾಹ ಸಂಖ್ಯೆ ಹೆಚ್ಚುತ್ತಿರುವುದು ಕಳವಳದ ಸಂಗತಿಯಾಗಿದೆ,ಜಿಲ್ಲೆಯಲ್ಲಿ ಒಟ್ಟು 409 ಬಾಲ್ಯ ವಿವಾಹ ಪ್ರಕರಣಗಳು ಕಂಡುಬಂದಿದ್ದು,ಅದರಲ್ಲಿ 330 ನಮ್ಮ ತಾಲೂಕಿನಲ್ಲಿ ನಡೆದಿವೆ ಎನ್ನುವುದು ಬೇಸರದ ಸಂಗತಿಯಾಗಿದೆ ಎಂದರು.ಬಾಲ್ಯ ವಿವಾಹ ಹೆಚ್ಚು ನಮ್ಮ ಯಾದಗಿರಿ ಜಿಲ್ಲೆಯಲ್ಲಿ ನಡೆದಿವೆ ಎನ್ನುವುದು ಸದನದಲ್ಲಿ ಚರ್ಚೆಯಾಗಿದೆ,ಇದನ್ನು ತಡೆಗಟ್ಟುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಎಲ್ಲಿಯಾದರು ಬಾಲ್ಯ ವಿವಾಹ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ1098 ಸಂಖ್ಯೆಗೆ ಪೊಲೀಸ ಇಲಾಖೆಯ 100 ಸಂಖ್ಯೆಗೆ,ಗ್ರಾಮ ಸಮಿತಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಫೋಕ್ಸೊ ಕಾಯಿದೆ ಕೂಡ ಇದ್ದು,ಮಕ್ಕಳ ಮೇಲಿನ ಅಥವಾ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಕ್ಕಾಗಿ ಈ ಕಾಯಿದೆ ಜಾರಿಗೊಂಡಿದ್ದು,ಯಾವುದೇ ಫೋಕ್ಸೊ ಪ್ರಕರಣ ನಡೆದಲ್ಲಿ ಅಪರಾಧಿಗೆ 7 ವರ್ಷ ದಿಂದ ಜೀವಾವಧಿ ಶಿಕ್ಷೆಯಾಗಲಿದೆ ಎಂದು ತಿಳಿಸಿದರು.
ಇನ್ನು ಯಾವುದೇ ಹೆಣ್ಣು ಮಗು ತಂದೆ ತಾಯಿ ತೀರಿಕೊಂಡಿದ್ದರೆ ಅಂತಹ ಮಗುವಿಗೆ ಒಂದು ವರ್ಷದ ವರೆಗೆ ಪ್ರತಿ ತಿಂಗಳು 4 ಸಾವಿರ ನೀಡಲಾಗುತ್ತದೆ,ಸಮಾಜದಲ್ಲಿನ ಮುಖ್ಯವಾಗಿ ಪಿಡಗುಗಳು ದೂರವಾಗಬೇಕಾದರೆ ಮೊದಲು ಪ್ರತಿ ಹೆಣ್ಣುಮಗು ಶಿಕ್ಷಿತಳಾಗುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದ ಕುರಿತು ಮಹಿಳಾ ಮೇಲ್ವಿಚಾರಕಿ ಜಯಶ್ರೀ ಬಿರಾದಾರ ನಿರೂಪಿಸಿ,ಎಲ್ಲರನ್ನು ಸ್ವಾಗತಿಸಿ ವಂದಿಸಿದರು.ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಹಿಳಾ ಮೇಲ್ವಿಚಾಕರು,ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು,ಅಂಗನವಾಡಿ,ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.