ಜೇವರ್ಗಿ: ಬಸವಪೂರ್ವ ಯುಗದ ಸಾಮಾಜಿಕ ಜೀವನ ಅನೇಕ ಧಾರ್ಮಿಕ, ಶಾಸ್ತ್ರ ಕಟ್ಟು ಕಟ್ಟಳೆಗಳಿಂದ ಕೂಡಿತ್ತು. ಸ್ತ್ರೀ ಸಮಾನತೆಗಾಗಿ ಮನೆಯಿಂದ ಹೊರ ನಡೆದ ಬಸವಣ್ಣ ಸಮಾಜದಲ್ಲಿ ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ನಿವಾರಿಸಿ ಸಮಾನತೆ, ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಅತ್ತಿವೇರಿಯ ಮಾತೆ ಬಸವೇಶ್ವರಿ ತಾಯಿ ನುಡಿದರು.
ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜೇವರ್ಗಿ ಬಸವ ಕೇಂದ್ರದ ಮಹಿಳಾ ಘಟಕದ 4ನೇ ವಾರ್ಷಿಕೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ವಿಶೇಷ ಅನುಭಾವ ನೀಡಿದ ಅವರು, ಇಷ್ಟಲಿಂಗವೆಂಬ ಅದ್ಭುತ ಶಕ್ತಿಯನ್ನು ಕರುಣಿಸಿದ ಬಸವಣ್ಣನವರು, ಪಾಪ, ಪುಣ್ಯ, ಪವಿತ್ರ, ಅಪವಿತ್ರ, ಶ್ರೇಷ್ಠ, ಕನಿಷ್ಠ, ಶಕುನ, ಅಪಶಕುನ, ರಾಹುಕಾಲ, ಗುಳಿಕಾಲ, ಜಾತಿ ಭೇದ, ಲಿಂಗಭೇದಗಳನ್ನು ತೊಡೆದು ಹಾಕಿ ಆತ್ಮವಿಶ್ವಾಸವನ್ನು ತುಂಬಿದರು ಎಂದು ಹೇಳಿದರು.
ಮನಷ್ಯ ಮನುಷ್ಯರ ನಡುವಿನ ಅಸ್ಪೃಶ್ಯತೆ ಮಾತ್ರವಲ್ಲ ಭಾಷೆಯಲ್ಲಿನ ಅಸ್ಪೃಶ್ಯತೆ ಯನ್ನೂ ಹೊಡೆದು ಹಾಕಲು ವಚನಾಂದೋಲನ ಆರಂಭಿಸಿದ ಬಸವಣ್ಣನವರು, ಮನುಷ್ಯ ಪರಿಪೂರ್ಣನಾಗುವ, ಎಲ್ಲರಿಗೂ ಎಟುಕುವ ಸುಲಭ ಮಾರ್ಗವನ್ನು ಕಂಡು ಹಿಡಿದರು ಎಂದರು.
ಮುಖ್ಯ ಅತಿಥಿಯಾಗಿದ್ದ ಬಾಲಕ ಪ್ರಣವ ಶಿವರಂಜನ ಸತ್ಯಂಪೇಟೆ ಮಾತನಾಡಿ, ಮೂಢನಂಬಿಕೆ, ಕಂದಾಚಾರ, ಭ್ರಷ್ಟಾಚಾರದಂತಹ ಸಾಮಾಜಿಕ ಅನಿಷ್ಟಗಳನ್ನು ತೊರೆದು ವೈಚಾರಿಕ ಮತ್ತು ವೈಜ್ಞಾನಿಕ ಬದುಕು ನಡೆಸಬೇಕೆಂದು ಹೇಳಿದರು.
ಬಸವಣ್ಣನವರ ‘ನೀರ ಕಂಡಲ್ಲಿ ಮುಳುಗುವರಯ್ಯ, ಮರನ ಕಂಡಲ್ಲಿ ಸುತ್ತುವರಯ್ಯ’ ವಚನವನ್ನು ಹಿಂದಿ ಭಾಷೆಯಲ್ಲಿ ವಿಶ್ಲೇಷಣೆ ಮಾಡುವ ಮಾಡುವ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.
ಇದೇವೇಳೆಯಲ್ಲಿ ಬಸವ ಕೇಂದ್ರ ಮತ್ತು ನೀಲಮ್ಮನ ಬಳಗದ ಸದಸ್ಯೆಯರು ವಿಭೂತಿ ಧರಿಸಿದರೆ ಹೋಗುವುದು ಭವರೋಗ ವಚನ ನೃತ್ಯ ಮಾಡುವ ಮೂಲಕ ವಿಭೂತಿಯ ಮಹತ್ವ ತಿಳಿಸಿಕೊಟ್ಟರು. ಇದಕ್ಕೂ ಮುಂಚೆ ಪ್ರದರ್ಶನಗೊಂಡ ಮಕ್ಕಳ ಅನುಭವ ಮಂಟಪದಲ್ಲಿನ ಶರಣ ಶರಣೆಯರ ರೂಪಕ ಮನಸೆಳೆಯುವಂತಿತ್ತು.
ಸ್ವಾತಿ ಶಿವರಾಜ ಪಾಟೀಲ, ಹೇಮಾ ರಾಜಶೇಖರ ಸೀರಿ, ಸುನಿತಾ ಷಣ್ಮುಖಪ್ಪ ಸಾಹು ಗೋಗಿ, ನೀಲಮ್ಮನ ಬಳಗದ ಅಧ್ಯಕ್ಚೆ ಮಹಾನಂದ ಶಿವಕುಮಾರ ಹುಗ್ಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನಾಗಮ್ಮ ಮಲ್ಲಿಕಾರ್ಜುನ ಬಿಳವಾರ, ಶರಣಮ್ಮ ಕಂಠೆಪ್ಪ ಮಾಸ್ತರ, ರೂಪಾ ಗುರುಶಾಂತ ಪಾಟೀಲ ವೇದಿಕೆಯಲ್ಲಿದ್ದರು. ಬಸವ ಕೇಂದ್ರದ ತಾಲ್ಲೂಕು ಘಟಕದ ಅಧ್ಯಕ್ಷೆ ರಾಜೇಶ್ವರಿ ವಿಜಯಕುಮಾರ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಶಿವನಗೌಡ ಪಾಟೀಲ ಹಂಗರಗಿ, ಸದಾನಂದ ಪಾಟೀಲ, ವಿಜಯಕುಮಾರ ಪಾಟೀಲ, ನೀಲಕಂಠರಾಯ ಅವಂಟಿ, ಅವ್ವನಗೌಡ ಬಿರಾದಾರ, ಬಸವರಾಜ ಅರಳಗುಂಡಗಿ, ಕಂಠೆಪ್ಪ ಮಾಸ್ತರ, ಎಸ್.ಕೆ. ಬಿರಾದಾರ, ಬಾಪೂಗೌಡ ಬಿರಾಳ, ಶಿವಶರಣಯ್ಯ ಚತುರಾಚಾರ್ಯ ಮಠ, ತ್ರಿವೇಣಿ ಕುಳಗೇರಿ, ಶ್ರೀದೇವಿ ಶರಣಬಸವ ಕಲ್ಲಾ, ಈರಣ್ಣ ಭೂತಪೂರ, ದೇವೇಂದ್ರ ಹಳಿಮನಿ, ರಾಮಣ್ಣ ತೊನಸಳ್ಳಿಕರ ಇತರರಿದ್ದರು.
ವಚನ ಬಿತ್ತನೆ, ನಿಜಾಚರಣೆ ಮಾಡುವ ಮೂಲಕ ಬಸವ ಕೇಂದ್ರದ ಮಹಿಳಾ ಘಟಕ ಮತ್ತು ನೀಲಮ್ಮನ ಬಳಗ ಶರಣರ ವಿಚಾರಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಜೊತೆಗೆ ಧರ್ಮ ರಕ್ಷಿಸುವ ಕೆಲಸ ಮಾಡುತ್ತಿದೆ. -ಶರಣಬಸವ ಕಲ್ಲಾ, ಅಧ್ಯಕ್ಷರು, ಬಸವ ಕೇಂದ್ರ, ಜೇವರ್ಗಿ.