ಕಲಬುರಗಿ: ರಟಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ಆಗಿರುವ ಅಶ್ವಿನಿ ಭೇಲ್ಕರ್ ಅವರಿಗೆ ಮತಾಂತರ ಮಾಡುತ್ತಿದ್ದೀರಿ ಎಂದು ಆರೋಪಿಸಿ ಬೆದರಿಕೆ ಹಾಕಿದ್ದು, ಕರ್ತವ್ಯಕ್ಕೆ ಅಡ್ಡಿ ಪಡಿಸಿ ಗ್ರಾಮದಲ್ಲಿ ಹಿಂದೂ ಧರ್ಮದ ಹೆಸರಲ್ಲಿ ಅಶಾಂತಿ ಸೃಷ್ಠಿಸುತ್ತಿರುವ ಯುವಕರನ್ನು ಬಂಧಿಸಿ ಕಾನೂನು ರೀತಿಯಲ್ಲಿ ಕಠಿಣ ಕ್ರಮಕೈಗೊಳ್ಳಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ಪದ್ಮಿನಿ ಕಿರಣಗಿ ಅವರು ಹೇಳಿದರು.
ಫೆ. 22 ರಂದು ಸರಕಾರಿ ಕಟ್ಟಡದಲ್ಲಿ ವಾಸಿಸಲು ಹೋಗುವುದಕ್ಕಿಂತ ಮೊದಲು ಆ ದಿನ ಸಂಜೆ ತಮ್ಮ ಸಂಪ್ರದಾಯದ ಪ್ರಕಾರ ಸಂಗಡಿಗ ರೊಂದಿಗೆ ಪೂಜೆ ಮತ್ತು ಪ್ರಾರ್ಥನೆ ಮಾಡುವಾಗ ಹಿಂದೂ ಜಾಗೃತ ಸೇನೆಯ ತಾಲೂಕ ಘಟಕದ ಅಧ್ಯಕ್ಷ ಮತ್ತು ಇತರ ಮುಖಂಡರ ನೇತೃತ್ವದ ತಂಡ ಬೂಟುಗಾಲಿನಿಂದ ಅವರು ಪೂಜೆ ಮಾಡುತ್ತಿರುವ ರೂಮಿಗೆ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಮಾತಾಡಿ ಅವರಿಗೆ ಪೂಜೆ ಮತ್ತು ಪ್ರಾರ್ಥನೆ ಮಾಡದಂತೆ ತಡೆದುದ್ದಲ್ಲದೆ ಅವರನ್ನು ರೂಮಿನಿಂದ ಹೊರದೂಡಿದರು.
ಆರೋಗ್ಯ ಕೇಂದ್ರದಲ್ಲಿ ಕಾರ್ಯಾನಿರ್ವಹಿಸುತ್ತಿರುವ ನರ್ಸ್ ಗೆ ಮತಾಂತರ ಮಾಡುತ್ತಿದ್ದೀರಿ ಎಂದು ಆರೋಪಿಸಿ ಅವರಿಗೆ ಬೆದರಿಕೆ ಹಾಕಿದರು. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ತಡೆದು ಮತ್ತೂ ಅವಾಚ್ಯ ಶಬ್ದಗಳಿಂದ ಮಾತಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅವರ ಪ್ರಾರ್ಥನೆಯಲ್ಲಿ ಭಾಗವಹಿಸಿದವರ ಹೇಳಿಕೆಯ ಪ್ರಕಾರ ತಾವ್ಯಾರು ಮತಾಂತರ ಹೊಂದಲು ಬಂದಿರುವುದಿಲ್ಲ ಪೂಜೆ ಮತ್ತು ಪ್ರಾರ್ಥನೆ ಮಾಡಲು ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.
ಹೀಗಿರುವಾಗಲೂ ಹಿಂದೂ ಜಾಗೃತ ಸೇನೆಯವರು ಬೇಕಂತಲೇ ಷಡ್ಯಂತರ ಮಾಡಿ ಅವಳಿಗೆ ಬೆದರಿಕೆ ಹಾಕುತ್ತಿದ್ದಾರೆ ಇದು ಖಂಡನೀಯ. ಅಶ್ವಿನಿಯವರಿಗೆ ರಕ್ಷಣೆ ಕೊಡಬೇಕು, ಅಲ್ಲದೆ ಈಗಾಗಲೇ ಅಟ್ರಾಸಿಟಿ ಪ್ರಕರಣದಲ್ಲಿ ದೂರು ದಾಖಲಾಗಿರುವ ಅವರೆಲ್ಲರನ್ನು ಕೂಡಲೇ ಬಂಧಿಸಬೇಕು, ಆರೋಪಿಗಳನ್ನು ಬಂಧನವಾಗಿಲ್ಲವಾದ್ದರಿಂದ ಅಶ್ವಿನಿಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತವಾಗಿ ತಪಿತಸ್ಥರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸುತ್ತೇವೆ. ಧರ್ಮದ ಹೆಸರಲ್ಲಿ ಶಾಂತಿ ಕದಡುತ್ತಿರುವ ಕೋಮುವಾದಿಗಳನ್ನು ನಿಯಂತ್ರಿಸಬೇಕು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.