ಕಲಬುರಗಿ: ಜಗತ್ತಿನಲ್ಲಿಯೇ ಭಾರತದಲ್ಲಿನ ಜ್ಞಾನ ಪ್ರಪಂಚ ಅದ್ಭುತವಾಗಿದೆ. ತತ್ವಜ್ಞಾನ ಕುರಿತು ಉನ್ನತ ಮಟ್ಟದಲ್ಲಿ ಸಂಶೋಧನೆಯಾಗಬೇಕಿದೆ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಜೆ.ಎಸ್.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಶ್ರೀವಿಜಯ ಪ್ರಕಾಶನ ಭಾನುವಾರ ಆಯೋಜಿಸಿದ್ದ ಹಿರಿಯ ಪತ್ರಕರ್ತ, ಸಾಹಿತಿ ಡಾ. ಶ್ರೀನಿವಾಸ ಸಿರನೂರಕರ್ ರಚಿಸಿದ ಯಾಜ್ಞವಲ್ಕ್ಯ ಸ್ಮೃತಿ ಅಂದು-ಇಂದು-ಎಂದೆಂದೂ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜ್ಞಾನದ ಮೂಲಕ ಭಾರತ ಜಗತ್ತಿನ ದೊಡ್ಡಣ್ಣನಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ಪತ್ರಕರ್ತ ಸಿರನೂರಕರ್ ಅವರು ರಚಿಸಿದ ಈ ಕೃತಿ ಅದ್ಭುತ ಕೊಡುಗೆಯಾಗಿದೆ ಎಂದರು.
ಭಾರತೀಯ ನ್ಯಾಯಶಾಸ್ತ್ರದ ಮೂಲ ಗ್ರಂಥ ಮಿತಾಕ್ಷರವಾಗಿದೆ. ವಿಜ್ಞಾನೇಶ್ವರರ ಮಿತಾಕ್ಷರ ಗ್ರಂಥವು ಯಾಜ್ಞ ವಲ್ಕ್ಯಸ್ಮೃತಿ. ಹೀಗಾಗಿ ನ್ಯಾಯ ಶಾಸ್ತ್ರಕ್ಕೆ ಯಾಜ್ಞವಲ್ಕ್ಯರ ಕೊಡುಗೆ ಅನುಪಮವಾಗಿದೆ. ಬ್ರಿಟಿಷರು ರಚಿಸಿದ ಕಾನೂನು ಶಾಸ್ತ್ರದಲ್ಲಿ ಯಾಜ್ಞವಲ್ಕ್ಯ ಹಾಗೂ ವಿಜ್ಞಾನೇಶ್ವರರು ಹೇಳಿರುವುದು ಇದೆ. ಬ್ರಿಟಿಷರು ಬರುವ ಮುನ್ನ ದೇಶದಲ್ಲಿ ನ್ಯಾಯದಾನ ಪದ್ಧತಿ ಎಂದು ಕರೆಯಲಾಗುತ್ತಿತ್ತು. ಅಂದು ಪ್ರಾಯಶ್ಚಿತಕ್ಕೆ ಮಹತ್ವ ನೀಡಲಾಗುತ್ತಿತ್ತು. ಸರ್ವರಿಗೂ ಸಮಾನ ನ್ಯಾಯ ಸಿಗುತ್ತಿತ್ತು. ಇಂದು ಕಾನೂನು ಉಲ್ಲಂಘಿಸಿದರೆ ದಂಡ ಎಂದು ಹೆದರಿಸುವ ಪ್ರವೃತ್ತಿ ಬೆಳೆಯುತ್ತಿದೆ ಎಂದರು.
ಕೇಂದ್ರೀಯ ವಿಶ್ವವಿದ್ಯಾಲಯ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ರಾಜೀವ ಜೋಶಿ ಕೃತಿ ಕುರಿತು ಮಾತನಾಡಿ, ಯಾಜ್ಞವಲ್ಕ್ಯರ ವಿಜ್ಞಾನ ಕಾಳಜಿಯನ್ನು ಲೇಖಕ ಡಾ. ಶ್ರೀನಿವಾಸ ಸಿರನೂರಕರ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಯಾಜ್ಞವಲ್ಕ್ಯ ಕೇವಲ ಯೋಗಿಗಳಲ್ಲ ಶ್ರೇಷ್ಠ ವಿಜ್ಞಾನಿಗಳಾಗಿದ್ದರು ಎಂದು ಹೇಳಿದರು.
ಪಂ.ಗೋಪಾಲಾಚಾರ್ಯ ಅಕಮಂಚಿ, ಕೃತಿಯ ಲೇಖಕ ಹಿರಿಯ ಪತ್ರಕರ್ತ ಡಾ. ಶ್ರೀನಿವಾಸ ಸಿರನೂರಕರ್, ನೂತನ ವಿದ್ಯಾಲಯ ಸಂಸ್ಥೆ ಅಧ್ಯಕ್ಷ ಡಾ.ಗೌತಮ ಜಾಗಿರದಾರ, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ನಾರಾಯಣರಾವ ಜವಳಿ, ಡಾ.ಸುರೇಶ ಹೇರೂರ, ಡಾ.ಕೃಷ್ಣ ಕಾಕಲವಾರ, ನಾರಾಯಣ ಕುಲಕರ್ಣಿ, ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಸಾಪ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ,ಪೆÇ್ರ. ಪರಿಮಳಾ ಅಂಬೇಕರ್, ಶಕುಂತಲಾ ಜೆ.ಎಸ್. ಪಾಟೀಲ್, ಸಂಧ್ಯಾ ಹೊನಗುಂಟಿಕರ್ ಉಪಸ್ಥಿತರಿದ್ದರು.
ಪ್ರಕಾಶನದ ಉಪಾಧ್ಯಕ್ಷ ಜಗನ್ನಾಥ ಉಟಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶನ ಪ್ರಧಾನ ಸಂಚಾಲಕ ಸಂಜೀವ ಸಿರನೂರಕರ್‍ಪ್ರಾಸ್ತಾವಿಕ ಮಾತನಾಡಿದರು. ರಾಘವೇಂದ್ರ ವಕೀಲ, ಲಕ್ಷ್ಮೀ ದೇಶಪಂಡೆ ಸ್ವಾಗತಿಸಿದರು. ವೆಂಕಟೇಶ ಮುದಗಲ್ ವಂದಿಸಿದರು. ವ್ಯಾಸರಾಜ ಸಂತೆಕೆಲ್ಲೂರ ಕಾರ್ಯಕ್ರಮ ನಿರೂಪಿಸಿದರು.