CUK ಕಾರ್ಯಕ್ರಮದಲ್ಲಿ ನಾವೇನು ಭಯೋತ್ಪಾದಕರಾ? ಪಾಕಿಸ್ತಾನದವರಾ? ಎಂದ ಮುಖ್ಯಮಂತ್ರಿಗಳ ಸಲಹೆಗಾರ

0
133

ಕಲಬುರಗಿ:. 400 ಸೀಟು ಗೆದ್ದರೆ ಸಂವಿಧಾನ ಬದಲಾಯಿಸುವ ಮಾತನಾಡುವ ರಾಜ್ಯದ ಸಂಸದರೊಬ್ಬರು ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಒಂದೇ ಒಂದು ಮಾತನಾಡಲಿಲ್ಲ ಎಂದು ಮಿಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಆಳಂದ ತಾಲೂಕಿನ ಕಡಗಂಚಿಯ ಕೇಂದ್ರಿಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಎಸ್ ಸಿ / ಎಸ್ ಟಿ ನೌಕರರ ಕಲ್ಯಾಣ ಸಂಘ ಏರ್ಪಡಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನದ ತತ್ವಗಳು ವಿಚಾರಸಂಕೀರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಮನುವಾದಿಗಳು ಮೊದಲು ಮನುಸ್ಮೃತಿಯನ್ನು ತಮ್ಮ ತಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಲಿ. ಆಗ ಅವರ ಮನೆಯವರ ಪ್ರತಿಕ್ರಿಯೆ ಹೇಗಿರುತ್ತದೆ ಗೊತ್ತಾಗುತ್ತದೆ ಎಂದರು.

ಬಿಜೆಪಿಯ ಪ್ರಮುಖ ನಾಯಕರ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಬಡವರ ಕೆಳವರ್ಗದವರ ಮಕ್ಕಳನ್ನು ಧರ್ಮ ರಕ್ಷಣೆ ಹಾಗೂ ಗೋ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ. ಎಷ್ಟು ಬಿಜೆಪಿ ನಾಯಕರು ಗೋಮೂತ್ರ ಕುಡಿಯುತ್ತಿದ್ದಾರೆ? ಎಷ್ಟು ಗೋಶಾಲೆ ನಡೆಸುತ್ತಿದ್ದಾರೆ ? ಎಂದು ಪ್ರಶ್ನಿಸಿದರು.

ನಾವೇನು ಭಯೋತ್ಪಾದಕರಾ? ಪಾಕಿಸ್ತಾನದವರಾ?; ಮುಖ್ಯಮಂತ್ರಿ ಸಲಹೆಗಾರರಾದ ಬಿ.ಆರ್. ಪಾಟೀಲ್ ಮಾತನಾಡಿ, ಇಂದಿನ ಸಂಕೀರಣಕ್ಕೆ ಒದಗಿಸಿರುವ ಪೊಲೀಸ್ ಬಂದೋಬಸ್ತ್ ನೋಡಿ ನನಗೆ ಗಾಬರಿಯಾಯಿತು. ನಾವೇನು ಭಯೋತ್ಪಾದಕರಾ? ಪಾಕಿಸ್ತಾನದವರಾ? ನಾವು ವಿವಿಗೆ ಬಂದಿರುವುದು ಬೆಂಕಿ ಹಚ್ಚುವುದಕ್ಕಲ್ಲ, ದೀಪ ಬೆಳಗಿಸಲು ಎಂದು ಕೇಂದ್ರೀಯ ವಿಶ ವಿದ್ಯಾಲಯದ ಆಡಳಿತ ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದರು.

ಇಲ್ಲಿಗೆ ರಾಜ್ಯ ಸರ್ಕಾರ ಮಂತ್ರಿಗಳು ಅಥವಾ ಶಾಸಕರು ವಿವಿಗೆ ಬಂದರೆ ಸೌಜನ್ಯಕ್ಕಾದರೂ ವಿವಿಯ ಅಧಿಕಾರಿಗಳು ನಮ್ಮನ್ನು ಸ್ವಾಗತಿಸಲಿಲ್ಲ. ಈ ವರ್ತನೆಯನ್ನು ನಾನು ಖಂಡಿಸುತ್ತೇನೆ. ಇದೇ ವರ್ತನೆ ಮುಂದುವರೆಸಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವಿವಿಗೆ ಜಾಗ, ನೀರು ಹಾಗೂ ಕರೆಂಟ್ ಕೊಟ್ಟಿದ್ದು ಕರ್ನಾಟಕ ರಾಜ್ಯ. ಇವೆಲ್ಲವನ್ನೂ ಬಂದ್ ಮಾಡಿದರೆ ವಿವಿಯವರು ಏನು ಮಾಡುತ್ತಾರೆ?. ಇಲ್ಲಿ ವಿಚಾರ ಸಂಕಿರಣ ನಡೆಸಲು ವಿವಿ ಕುಲಪತಿ ಬಟ್ಟು ಸತ್ಯನಾರಾಯಣ ಅನುಮತಿ ಕೊಟ್ಟಿರುವುದೇ ಮೇಲು ಎಂದು ರುಮ್ಮಾ ಹೇಳಿದರು, ಯಾಕೆ ಅನುಮತಿ ಕೊಡುವುದಿಲ್ಲ? ವಿವಿ ಏನು ಅವರ ಅಪ್ಪನ ಮನೆಯಾ ? ಇನ್ನು ಮೇಲೆ ನಾನು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಪದೇ ಪದೇ ಬರುತ್ತೇವೆ. ಕಾರ್ಯಕ್ರಮ ನಡೆಸುತ್ತೇವೆ ಯಾವುದೇ ಅನುಮತಿ ಬೇಕಿಲ್ಲ, ಎಂದು ಹರಿಹಾಯ್ದರು.

ಆರ್.ಕೆ. ಹುಡಗಿ ಮಾತಮಾಡಿ ಸತ್ಯ, ನ್ಯಾಯ ಹಾಗೂ ಸಂವಿಧಾನದ ಪರವಾಗಿ ಇರಬೇಕು. ಡಾ. ಬಿ.ಆರ್ ಅಂಬೇಡ್ಕರ್ ಅವರು ಇದನ್ನು ಒತ್ತಿ ಹೇಳಿದ್ದಾರೆ. ಯಾವುದೋ ಒಂದು ವಿಚಾರಧಾರೆಯನ್ನು ಬೆಳೆಯಲು ಬಿಟ್ಟು ಮಿಕ್ಕೆಲ್ಲ ವಿಚಾರ ಧಾರೆಗಳನ್ನು ತುಳಿಯುವುದು ವಿಶ್ವವಿದ್ಯಾಲಯಕ್ಕೆ ಶೋಭೆ ತರುವಂತದ್ದಲ್ಲ ಎಂದರು.

ಕೇಂದ್ರೀಯ ವಿವಿ ಬರಲು ಬಹಳಷ್ಟು ಹೋರಾಟ ನಡೆದಿವೆ. ನಾವೆಲ್ಲ ಲಾಠಿ ಏಟು ತಿಂದಿದ್ದೇವೆ. ಅಂದು ಕೇಂದ್ರದಲ್ಲಿಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದಿಂದ ಇಲ್ಲಿ ವಿವಿ ಸ್ಥಾಪನೆಯಾಗಿದೆ. ಇದು ಸೂಫಿ ಸಂತರ ನಾಡಾಗಿದೆ. ಇಲ್ಲಿ ವೈಚಾರಿಕತೆ, ಪ್ರಗತಿಪರತೆ ಬೆಳೆಯಬೇಕೆ ಹೊರತು ಮೌಢ್ಯವಲ್ಲ. ಯಾವ ಉದ್ದೇಶಕ್ಕೆ ವಿವಿ ಸ್ಥಾಪನೆಯಾಗಿದೆ ಅದೇ ಉದ್ದೇಶ ಉಳಿಯಬೇಕು, ಬೆಳೆಯಬೇಕು. ಈ ನಿಟ್ಟಿನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಪ್ರೊ ಸಿ.ಲಕ್ಷ್ಮಣನ್ ಮಾತಮಾಡಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ನಮ್ಮೊಳಗೆ ಅಂತರ್ಭವಿಸಿಕೊಳ್ಳಬೇಕು. ಇಲ್ಲಿ ದಲಿತ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿರುವುದು ನನಗೆ ತಿಳಿದುಬಂತು. ದೇವಾಲಯಗಳಲ್ಲಿ ಕುರಿಗಳನ್ನು ಮಾತ್ರ ಬಲಿಕೊಡಲಾಗುತ್ತದೆ ಹೊರತೆ ಸಿಂಹಗಳನ್ನಲ್ಲ. ನೀವು ಸಿಂಹಗಳಂತಾಗಬೇಕು ಎಂದು ಕರೆನೀಡಿದರು.

ರಾಜಕೀಯದಲ್ಲಿ ಭಕ್ತಿ ಇರುವುದು ಅಪಾಯಕಾರಿಯಾದುದು ಅದು ಪ್ರಜಾತಂತ್ರ ವ್ಯವಸ್ಥೆಯನ್ನು ನಾಶಪಡಿಸುತ್ತದೆ ಎಂದ ಹೇಳಿದ ಪ್ರೊ, ಲಕ್ಷ್ಮಣನ್ ಬಲಪಂಥಿಯರು ಸಂವಿಧಾನದ ಪ್ರಬಲ ವಿರೋಧಿಗಳಾಗಿದ್ದಾರೆ. ಅವರು ಸಂವಿಧಾನವನ್ನು ಮುಗಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂಬೇಡ್ಕರ್ ತತ್ವಪಾಲಕರು ಸಂವಿಧಾನದ ರಕ್ಷಣೆ ಮಾಡಬೇಕು. ಜಾತ್ಯಾತೀತ ತತ್ವ ಪ್ರತಿಯೊಬ್ಬ ವ್ಯಕ್ತಿಯ ಹಾಗೂ ಸಮುದಾಯ ಹಕ್ಕುಗಳ ರಕ್ಷಣೆ ಮಾಡುತ್ತದೆ. ಸಂವಿಧಾನದಲ್ಲಿ ಇದನ್ನೇ ಅಳವಡಿಸಿಕೊಳ್ಳಲಾಗಿದೆ.

ಡಿ.ಜಿ.ಸಾಗರ ಮಾತನಾಡಿ ಮಾನವನ ಹಕ್ಕುಗಳನ್ನು ಕಾಪಾಡುವ ಅತ್ಯಂತ ದೊಡ್ಡ ಗ್ರಂಥ ನಮ್ಮ ದೇಶದ ಸಂವಿಧಾನವಾಗಿದೆ. ಇಂತದ್ದೆ ಬಟ್ಟೆ ಹಾಕಿ ಎನ್ನುವುದು, ಇಂತದ್ದೆ ತಿನ್ನಬೇಕು ಎಂದು ಒತ್ತಾಯಪಡಿಸುವುದು ಸರಿಯಾದ ಕ್ರಮವಲ್ಲ. ಈ ವಿವಿಯಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯ ಬರಬಾರದು. ಕಾನೂನು ಹಾಗೂ ವಿವಿ ನಿಯಮಾವಳಿಗಳ ಪ್ರಕಾರ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗಬೇಕು ಎಂದರು.

ವೇದಿಕೆಯ ಮೇಲೆ ಮುಖ್ಯಮಂತ್ರಿ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ, ಪ್ರೊ ಸಿ. ಲಕ್ಷ್ಮಣನ್, ಪ್ರೊ, ಆರ್.ಕೆ.ಹುಡಗಿ, ಶಿವಗಂಗಾ ರುಮ್ಮಾ, ಡಿ.ಜಿ.ಸಾಗರ, ಅಪ್ಪಗೆರೆ ಸೋಮಶೇಖರ, ವಿದ್ಯಾರ್ಥಿಗಳು ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here