ಕಲಬುರಗಿಗೆ ಇದು ಐತಿಹಾಸಿಕ ದಿನ : ಡಾ. ಉಮೇಶ್ ಜಾಧವ್
ಕಲಬುರಗಿ: ಕಲ್ಯಾಣ ಕರ್ನಾಟಕದ ಜನತೆಯ ಬಲು ದೊಡ್ಡ ಕನಸು ನನಸಾಗಿದ್ದು ಮೋದಿಯವರ ಆಡಳಿತದಲ್ಲಿ ಅಭಿವೃದ್ಧಿಯ ಮಹಾಪರ್ವಕ್ಕೆ ಇವುಗಳು ಸಾಕ್ಷಿಯಾಗಿವೆ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಹೇಳಿದರು.
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಮಾರ್ಚ್ 12ರಂದು ಮಂಗಳವಾರ ವರ್ಚುವಲ್ ವೇದಿಕೆ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಲಬುರಗಿ – ಬೆಂಗಳೂರು ನಡುವಣ (ಬೈಯಪ್ಪನಹಳ್ಳಿ) ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡುವ ತುಂಬಿದ ಜನಸ್ತೋಮದ ನಡುವೆ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇಂತಹ ಮಹಾನ್ ಕೊಡುಗೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕಲ್ಬುರ್ಗಿಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿ ಬೆಂಗಳೂರಿಗೆ ರೈಲು ಸಂಚಾರ ಪ್ರಾರಂಭಿಸುವಂತೆ ಎಲ್ಲ ವರ್ಗ, ಸಮುದಾಯ ಮತ್ತು ಪಕ್ಷದವರು ಒಂದೇ ಬೇಡಿಕೆ ಯೊಡ್ಡಿದ್ದರು.
ಸುಮಾರು ಆರೆಳು ತಾಸಿನಲ್ಲಿ ಬೆಂಗಳೂರಿಗೆ ತಲುಪುವ ವಂದೇ ಭಾರತ್ ಆರಂಭದಿಂದ ಅಭಿವೃದ್ಧಿಯಲ್ಲಿ ಐತಿಹಾಸಿಕ ಮೈಲಿಗಲ್ಲಾಗಲಿದೆ. ಸಾವಿರಾರು ಜನ ಫೋನ್ ಕರೆ ಮಾಡಿ ಅಭಿನಂದನೆ ಸಲ್ಲಿಸಿದಾಗ ನನಗೆ ಸಂತಸವಾಗಿದೆ. ಐದು ವರ್ಷಗಳಲ್ಲಿ ಎರಡು ವರ್ಷಗಳ ಕಾಲ ಕರೋನಾ ಪಿಡುಗಿನಿಂದಾಗಿ ಅಭಿವೃದ್ಧಿಗಿಂತ ಹೆಚ್ಚಾಗಿ ಜನರ ಪ್ರಾಣರಕ್ಷಣೆಗಾಗಿ ಔಷದಿ ಪೂರೈಕೆ, ಐಸಿಎಂಆರ್ ಲ್ಯಾಬೋರೇಟರಿ, ಆಮ್ಲಜನಕ ಘಟಕ ಆರಂಭಕ್ಕೆ ಕೆಲಸ ಮಾಡಿ ಸಾರ್ಥಕ ಪ್ರಯತ್ನ ಮಾಡಲಾಗಿದೆ ಎಂದರು.
ನಂತರದ ದಿನಗಳಲ್ಲಿ ಹಗಲು ರಾತ್ರಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ರೂಪುರೇಷೆ ಸಿದ್ದಪಡಿಸಿ ಪ್ರಯತ್ನ ಮಾಡಿದ ಫಲವಾಗಿ ಇದೀಗ ಅಭಿವೃದ್ಧಿಯ ಅನೇಕ ಕೆಲಸಗಳು ಕಣ್ಣಿಗೆ ಕಾಣುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಯೋಗವು ದೆಹಲಿಗೆ ಆಗಮಿಸಿ ಮತ್ತು ಮಾಧ್ಯಮದವರ ಹೋರಾಟಗಾರರ ಸತತ ಒತ್ತಡದಿಂದ ವಂದೇ ಭಾರತ್ ರೈಲು ನಮಗೆ ದೊರೆತಿದೆ. ಅಮೃತ ಭಾರತ್ ರೈಲು ಅಭಿವೃದ್ಧಿ ಅಡಿಯಲ್ಲಿ ವಾಡಿ, ಶಹಬಾದ್, ಕಲಬುರಗಿ ಮತ್ತು ಸ್ಟೇಷನ್ ಗಾಣಗಾಪುರ ಅಭಿವೃದ್ಧಿಗೆ ಚಾಲನೆ ದೊರೆತಿದೆ ಎಂದು ತಿಳಿಸಿದರು.
ಮಠ, ದರ್ಗಾಗಳಿರುವ ದಶಕಗಳ ಸಮಸ್ಯೆಯಾದ ನೀಲೂರು ಕೆಲಸ ಸೇತುವೆ ಈಗ ಸಾರ್ವಜನಿಕ ಉಪಯೋಗಕ್ಕೆ ಮೋದಿ ಅವರು ತೆರವುಗೊಳಿಸಿದ್ದಾರೆ. ಒಂದು ಲಕ್ಷ ನೇರ ಉದ್ಯೋಗ ಕಲ್ಪಿಸುವ ಪಿಎಂ ಮಿತ್ರ ಯೋಜನೆಯಡಿ ಆರಂಭವಾಗುವ ಮೆಗಾ ಜವಳಿ ಪಾರ್ಕ್ ತಲೆ ಎತ್ತಲಿದೆ. ಚಿತಾಪುರದ ಎಂಟು ತಾಂಡಾಗಳಿಗೆ ರೈಲ್ವೆ ಫುಟ್ ಓವರ್ ಸೇತುವೆ ನಿರ್ಮಾಣಗೊಂಡಿದೆ. ಭಾರತಮಾಲಾ ರಸ್ತೆ ಅಫ್ಜಲ್ಪುರ್ ದಿಂದ ಶಹಪುರ ಗಡಿಯ ತನಕ 1575 ಕೋಟಿ ರೂಪಾಯಿ ವೆಚ್ಚದಲ್ಲಿ 71 ಕೀ.ಮೀ. ಹೆದ್ದಾರಿ ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಐನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಮನೆಗೆ ಅಡುಗೆ ಅನಿಲ ಪೂರೈಕೆ ಪ್ರಗತಿಯಲ್ಲಿದೆ. 1500 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ನೆನೆಗುದಿಗೆ ಬಿದ್ದ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿ 2022 ನವೆಂಬರ್ ನಿಂದ ನಿತ್ಯ ವಿಮಾನ ಹಾರಾಟ ಹಾಗೂ ಈ ವರ್ಷ ಫೆಬ್ರವರಿ 22 ರಿಂದ ರಾತ್ರಿ ವಿಮಾನ ಇಳಿಯುವ ಸೌಲಭ್ಯ ಆರಂಭಿಸಲಾಗಿದೆ.
ಈ ವಿಮಾನ ನಿಲ್ದಾಣದಲ್ಲಿ ಎರಡು ಪೈಲೆಟ್ ತರಬೇತಿ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ರಿಂಗ್ ರೋಡ್ ಸರ್ವಿಸ್ ರಸ್ತೆಗೆ ಚಾಲನೆ ನೀಡಲಾಗಿದೆ. ಕೃಷಿ ಶೀತಲೀಕರಣ ಘಟಕ ಕಲ್ಬುರ್ಗಿ ಕೋಟನೂರು( ಬಿ) ಯಲ್ಲಿ ಪ್ರಾರಂಭವಾಗಿದೆ. ಸನ್ನತಿ – ಕನಗನಹಳ್ಳಿ ಬೌದ್ಧ ಸ್ತೂಪ ಅಭಿವೃದ್ಧಿಗೆ ಹಣ ಮಂಜೂರು ಮಾಡಲಾಗಿದೆ. ಭಾರತದಲ್ಲಿ ತಲಾ ಆದಾಯ ಅತ್ಯಂತ ಕಡಿಮೆ ಇರುವ ಜಿಲ್ಲೆ ಕಲ್ಬುರ್ಗಿಯಾಗಿದ್ದು ತಲಾ ಆದಾಯ ವೃದ್ಧಿಗೆ ಹೃತ್ಪೂರ್ವ ಸಿದ್ದಗೊಳಿಸಲಾಗಿದ್ದು ಈ ಭಾಗದ ಸಮಗ್ರ ಅಭಿವೃದ್ಧಿಗೆ ಪಣತೊಡಲಾಗಿದೆ ಎಂದು ಜಾಧವ್ ಹೇಳಿದರು.
ಸ್ವಾತಂತ್ರ್ಯ ನಂತರ ಮೊಟ್ಟ ಮೊದಲ ಬಾರಿಗೆ ವಂದೇ ಭಾರತ್ ರೈಲು ಹಾಗೂ ಸಾಪ್ತಾಹಿಕ 3 ದಿವಸ ರೈಲು ಬೆಂಗಳೂರಿಗೆ ಸಂಚಾರ ಪ್ರಾರಂಭಿಸಿದೆ. ಇದರಿಂದ ಈ ಭಾಗದಲ್ಲಿ ಸಂತಸ ಮನೆ ಮಾಡಿ ಹಬ್ಬದ ವಾತಾವರಣ ಸೃಷ್ಟಿಗೊಂಡಿದೆ. ಜನ ಸಾಮಾನ್ಯರು, ಮಕ್ಕಳು,ವಿದ್ಯಾರ್ಥಿಗಳು, ಕ್ಯಾನ್ಸರ್ ರೋಗಿಗಳು ಮೊದಲ ವಂದೇ ಭಾರತ್ ನಲ್ಲಿ ಪ್ರಯಾಣಿಸುತ್ತಿರುವುದು ಸಂತಸದ ವಿಷಯ ಎಂದರು.
ಯಾದಗಿರಿ ನಿಲುಗಡೆಗೆ ದೆಹಲಿಗೆ ನಿಯೋಗ: ಯಾದಗಿರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ 15 ದಿನಗಳಿಗೆ ದೆಹಲಿಗೆ ನಿಯೋಗ ತೆರಳಿ ಇಲಾಖೆಗೆ ಮನವಿ ಮಾಡಲಾಗುವುದು ಆ ಭಾಗದ ಜನರು ತೀವ್ರ ಒತ್ತಡ ಹೇರುತ್ತಿದ್ದು ಇದು ನ್ಯಾಯೋಚಿತ ಬೇಡಿಕೆಯಾಗಿದೆ. ರಾಯಚೂರು ಸಂಸದರ ಜೊತೆ ಸೇರಿ ನಿಯೋಗ ತೆರಳಿ ಕನಿಷ್ಠ ಒಂದು ನಿಮಿಷವಾದರೂ ನಿಲುಗೊಡೆಗೆ ಒತ್ತಾಯಿಸಲಾಗುವುದು ಈ ಬೇಡಿಕೆಯನ್ನು ಈಡೇರಿಸುವ ಭರವಸೆ ಇದ್ದು ರೈಲು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಕೂಡಲೇ ಶಿಫಾರಸು ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಜಾಧವ್ ಸೂಚನೆ ನೀಡಿದರು ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸೋಣ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸೂಗುರು ಶ್ರೀ ಚನ್ನ ಶಿವರುದ್ರಮನಿ ಸ್ವಾಮೀಜಿ, ಮಾಜಿ ಸಚಿವರಾದ ಮಾಲೀಕಯ್ಯ ವಿ ಗುತ್ತೇದಾರ್, ವಿಧಾನ ಪರಿಷತ್ ಉಪನಾಯಕರಾದ ಸುನಿಲ್ ವಲ್ಯಾಪುರೆ, ವಿಧಾನ ಪರಿಷತ್ ಸದಸ್ಯರಾದ ಬಿ ಜಿ ಪಾಟೀಲ್, ಮಾಜಿ ವಿಧಾನಪರಿಷತ್ ಸದಸ್ಯರಾದ ಅಮರನಾಥ್ ಪಾಟೀಲ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರು, ಶಾಸಕ ಬಸವರಾಜ ಮತ್ತಿಮುಡು, ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಬಾಲರಾಜ್ ಗುತ್ತೇದಾರ್, ಬಿಜೆಪಿ ಯುವ ಮುಖಂಡರಾದ ಚಂದು ಪಾಟೀಲ್, ಕೃಷ್ಣಾರೆಡ್ಡಿ, ರವಿರಾಜ್ ಕೊರವಿ, ಶರಣಪ್ಪ ಹದನೂರು ಗೌತಮ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೋಲಾಪುರ ರೈಲ್ವೆ ವಿಭಾಗದ ವಿಭಾಗಿಯ ರೈಲ್ವೆ ಪ್ರಬಂಧಕರು ನೀರಜ್ ಕುಮಾರ್ ದೊಹರೆ, ಹಿರಿಯ ವಿಭಾಗಿಯ ವಾಣಿಜ್ಯ ವ್ಯವಸ್ಥಾಪಕರಾದ ಜಗ್ಗೇಶ್ ಪಾಟೀಲ್ ಹಾಗೂ ಇತರ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.