ಕಲಬುರಗಿ ರೊಟ್ಟಿ ಬ್ರ್ಯಾಂಡ್ ಬಿಡುಗಡೆ: ರೈತರ ಆದಾಯ ದ್ವಿಗುಣಕ್ಕೆ ಪಂಚ ಯೋಜನೆಗಳು ಜಾರಿ ಸಚಿವ ಖರ್ಗೆ

0
408

ಕಲಬುರಗಿ: ಸಿರಿಧಾನ್ಯಕ್ಕೆ ಇದೀಗ ಎಲ್ಲೆಡೆ ಬೇಡಿಕೆ ಹೆಚ್ಚಳವಾಗಿರುವ ಕಾರಣ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಕಲಬುರಗಿಯಲ್ಲಿ “ಕಲಬುರಗಿ ರೊಟ್ಟಿ” ಬ್ರ್ಯಾಂಡ್ ಬಿಡುಗಡೆಗೊಳಿಸಿದರು.

ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ರೊಟ್ಟಿ ಬ್ರ್ಯಾಂಡಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ರೊಟ್ಟಿ ತಿಂದವರು ಬಲುಗಟ್ಟಿ. ಇದು ಸಿರಿಧಾನ್ಯದ ಶಕ್ತಿಯಾಗಿದ್ದು, ಇದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಬ್ರ್ಯಾಂಡಿಂಗ್ ಮಾಡಲಾಗುತ್ತಿದೆ. ಇದರಿಂದ ರೊಟ್ಟಿ ತಯ್ಯಾರಕ ಮಹಿಳೆಯರ ಆದಾಯ ದ್ವಿಗುಣವಾಗಲಿದೆ ಎಂದರು.

Contact Your\'s Advertisement; 9902492681

ನಾನಾ ಕಾರಣದಿಂದ ನಗರ ನಿವಾಸಿಗಳು ರೊಟ್ಟಿಯಿಂದ ದೂರವಾಗುತ್ತಿದ್ದಾರೆ. ಇದರ ಪರಿಣಾಮ ಸಕ್ಕರೆ ಕಾಯಿಲೆ, ಅನೇಮಿಯಾದಂತಹ ಸಮಸ್ಯೆ ಕಾಣುತ್ತಿದ್ದೇವೆ. ಕಲಬುರಗಿ ರೊಟ್ಟಿ ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ವರ್ಷ 1 ಲಕ್ಷ ಟನ್ ಬಿಳಿ ಜೋಳ ಬೆಳೆಯುತ್ತಿದ್ದು, ರೊಟ್ಟಿ ತ್ಯಯಾರಿಸಿ ಮಾರಾಟ ಮಾಡಲು ಇದು ಪೂರಕವಾಗಿದೆ ಎಂದರು.

ಪ್ರಸ್ತುತ ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರು ಗುಂಪಾಗಿ ಸೇರಿ ರೊಟ್ಟಿಯನ್ನು ತಯ್ಯಾರಿಸಿ ಅದಕ್ಕೆ ತಮ್ಮ ಸಂಸ್ಥೆ ಹೆಸರಿಟ್ಟು ಹೋಟೆಲ್-ಖಾನಾವಳಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ವ್ಯವಸ್ಥಿತವಾಗಿ ಮಾಡಲು ಮತ್ತು ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸಲು ರೊಟ್ಟಿ ತಯ್ಯಾರಕರು ಮತ್ತು ರೊಟ್ಟಿ ಖರೀದಿದಾರ ನಡುವೆ ಇಂದು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಸ್ವ-ಸಹಾಯ ಸಂಘದ ಮಹಿಳೆಯರಿಗೆ ರೊಟ್ಟಿ ತಯ್ಯಾರಿಕೆ ಯಂತ್ರ ಸಹ ನೀಡಲಾಗುತ್ತಿದೆ. ಒಟ್ಟಾರೆ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.

ರೈತರ ಆದಾಯ ದ್ವಿಗುಣಕ್ಕೆ ಪಂಚ ಯೋಜನೆಗಳು ಜಾರಿ: ಇದೇ ಪ್ರಥಮ ಬಾರಿಗೆ ರೈತರ ಆದಾಯ ವೃದ್ಧಿಗೆ ಮತ್ತು ನವೀನ ತಂತ್ರಜ್ಞಾನಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ರೈತರ ಕಲ್ಯಾಣಕ್ಕೆ ಕಲಬುರಗಿ ಜಿಲ್ಲೆಯಲ್ಲಿ 27.20 ಕೋಟಿ ರೂ. ಮೊತ್ತದ ಪಂಚ ಯೋಜನೆಗಳು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದ್ದು, ಇದರ ಫಲಿತಾಂಶದ ಮೇರೆಗೆ ಪ್ರದೇಶದ ಇತರೆ ಜಿಲ್ಲೆ, ತಾಲೂಕಿಗೆ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಡ್ರೋನ್ ತಂತ್ರಜ್ಞಾನ ಬಳಸಿ ಕೀಟನಾಶಕ ಮತ್ತು ರಸಗೊಬ್ಬರ ಸಿಂಪಡಿಸಲು ಜಿಲ್ಲೆಯ ಅಫಜಲಪೂರ, ಕಮಲಾಪೂರ, ಚಿತ್ತಾಪೂರ ಹಾಗೂ ಸೇಡಂ ತಾಲೂಕಿನಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಸಿಂಪರಣಾ ಕೇಂದ್ರಗಳ ಸ್ಥಾಪನೆ, ಭೌಗೋಳಿಕ ಸೂಚ್ಯಂಕ ಹೊಂದಿರುವ ತೊಗರಿ, ಕೆಂಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಶೇಖರಣೆಗೆ ಚಿತ್ತಾಪೂರನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶೀತಲೀಕರಣ ಘಟಕ ಸ್ಥಾಪನೆ, ಜಿಲ್ಲೆಯಲ್ಲಿ ಬೆಳೆಯುವ ಬಿಳಿಜೋಳ, ಸಜ್ಜೆ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆಗೆ ತಲಾ 150 ಲಕ್ಷ ರೂ. ವೆಚ್ಚದಲ್ಲಿ ಚಿತ್ತಾಪೂರ ಹಾಗೂ ಅಫಜಲಪೂರ ತಾಲೂಕಿನಲ್ಲಿ ಮೌಲ್ಯವರ್ಧನೆ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ.

ವಿಶೇಷವಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಹಾಯವಾಗಲು ಗ್ರಾಮ ಮಟ್ಟದಲ್ಲಿ 9 ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಮಹಿಳಾ ಸ್ವ-ಸಹಾಯ ಸಂಘಗಳಿಗೆ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ರೂ 50 ಲಕ್ಷ ರೂ. ಒದಗಿಸಲಾಗುವುದು. ಇದಲ್ಲದೆ ಭೂರಹಿತರ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲೆಯ ಹಳೆಯ ತಾಲೂಕಿಗೆ ಒಂದರಂತೆ ಒಟ್ಟು 7 ಕಿರು ಜಲಾನಯನ ಪ್ರದೇಶಗಳ ಉಪಚಾರಕ್ಕೆ ಪ್ರತಿ ಕಿರು ಜಲಾಯನಕ್ಕೆ 1.10 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಹೀಗೆ ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಹೆಜ್ಜೆ ಇಟ್ಟಿದೆ ಎಂದರು.

ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಮಕ್ಷಮದಲ್ಲಿ ಕಲಬುರಗಿ ರೊಟ್ಟಿ ತಯ್ಯಾರಕರ ಸಂಘ ಮತ್ತು ಕಲಬುರಗಿ ಹೋಟೆಲ್ ಮಾಲೀಕರ ಸಂಘ ಮತ್ತು ಮಂಜುನಾಥ ಫುಡ್ ಪ್ರೊಡೆಕ್ಟ್-ಸಪ್ತಗಿರಿ ಹೋಟೆಲ್ ಸಮೂಹ ನಡುವೆ ರೊಟ್ಟಿ ಬ್ರ್ಯಾಂಡ್ ವಹಿವಾಟಿಗೆ ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು.

ರೊಟ್ಟಿ ತಯ್ಯಾರಿಕಾ ಯಂತ್ರ ವಿತರಣೆ: ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎರಡನೇ ಕೃಷಿ ನಿರ್ದೇಶನಾಲಯ ಯೋಜನೆಯಡಿ ಕಲಬಯರಗಿ ತಾಲೂಕಿನ ಕುಸನೂರ ಗ್ರಾಮದ ಮಹಾದೇವಿ ಬಸಣ್ಣಾ ಎಂಬ ಮಹಿಳೆಗೆ ಘಟಕ ವೆಚ್ಚ 6 ಲಕ್ಷ ರೂ. ಗಳಲ್ಲಿ 3 ಲಕ್ಷ ರೂ. ಸಹಾಯಧನದ ರೊಟ್ಟಿ ತ್ಯಯಾರಿಕಾ ಯಂತ್ರಗಳನ್ನು ವಿತರಣೆ ಮಾಡಿದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಡಿ.ಸಿ.ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಚೇತನ ಆರ್., ಎಸ್.ಪಿ. ಅಕ್ಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿ ಅನೇಕ ಅಧಿಕಾರಿಗಳು, ಹೋಟೆಲ್ ಮಾಲೀಕರ ಸಂಘದ ಪ್ರತಿನಿಧಿಗಳು, ರೊಟ್ಟಿ ತಯ್ಯಾರಕ ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here