ಕಲಬುರಗಿ : ಭಾರತ ವಿಕಾಸ ಸಂಗಮ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಜಂಟಿಯಾಗಿ ಆಯೋಜಿಸುವ 7ನೇ ಭಾರತೀಯ ಸಂಸ್ಕೃತಿ ಉತ್ಸವ ದಾಖಲೆಯ ಸಮಾವೇಶವಾಗಲಿದೆ ಎಂದು ಮೈಸೂರು ಸುತ್ತೂರುಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶಯ ವ್ಯಕ್ತಪಡಿಸಿದರು.
ನಗರದ ಖಮಿತ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸ್ವರ್ಣ ಜಯಂತಿಯ ಸ್ವಾಗತ ಸಮಿತಿ ಮತ್ತು ಆಮಂತ್ರಿತರ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಚಿಕ್ಕ ತಾಲೂಕು ಕೇಂದ್ರವಾದ ಸೇಡಂನಲ್ಲಿ ಆರಂಭಿಸಿದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ರಾಷ್ಟ್ರೀಯ ದೃಷ್ಟಿ ಕೋನದ ಸಂಸ್ಥೆ ಆಗಿರುವುದರಿಂದ ಪರೋಪಕಾರ ಪ್ರಜ್ಞೆ ಹೊಂದಿದೆ. ಎಷ್ಟೇ ಹೊರಗಿನ ಜ್ಞಾನ ಪಡೆದರೂ ನಮ್ಮತನವನ್ನು ಬಿಟ್ಟಕೊಡದೆ, ಸ್ವಂತಿಕೆಯನ್ನು ರೂಢಿಸಿಕೊಳ್ಳಬೇಕು. ಈ ಸಮಿತಿಯ ಐವತ್ತನೇ ವಾರ್ಷಿಕೋತ್ಸವ ಸಂದರ್ಭಕ್ಕೆ ಭಾರತೀಯ ಸಂಸ್ಕೃತಿ ಉತ್ಸವ ಜೋಡಿಸಿರುವುದು ಉತ್ತಮ. ಈ ಜರುಗಿದ ಎಲ್ಲಾ ಉತ್ಸವಗಳಲ್ಲಿ ಭಾಗಿಯಾದ ಸಂತಸ ತಮ್ಮದಾಗಿದೆ ಎಂದರು.
ಭಾರತ ವಿಕಾಸ ಸಂಗಮದ ಸಂಸ್ಥಾಪಕರಾದ ಕೆ.ಎನ್.ಗೋವಿಂದಾಚಾರ್ಯ ಮಾತನಾಡಿ, ಪ್ರಕೃತಿಯು ಭೂಗೋಳವನ್ನು ನಿರ್ಮಿಸಿದೆ. ಮನುಷ್ಯರಾದವರು, ಭೂಗೋಳಕ್ಕೆ ಹಾನಿ ಮಾಡದೇ ಇತಿಹಾಸ ನಿರ್ಮಿಸಬೇಕು. ಪ್ರಕೃತಿ ಕೇಂದ್ರಿತ ವಿಕಾಸ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಈ ದಿಸೆಯಲ್ಲಿ ಪರಂಪರೆಯ ಪ್ರಜ್ಞೆ ವಿಸ್ತರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಿಕಾಸ ಅಕಾಡೆಮಿ ಸಂಯೋಜಕ ಬಸವರಾಜ ಪಾಟೀಲ ಸೇಡಂ ಪ್ರಾಸ್ತಾವಿಕ ಮಾತನಾಡಿ, ಸ್ವರ್ಣ ಜಯಂತಿ ಮತ್ತು ಭಾರತೀಯ ಸಂಸ್ಕೃತಿ ಉತ್ಸವ ಆಯೋಜನೆಯ ರೂಪುರೇಷೆ ವಿವರಿಸಿದರು.
ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಸದಾಶಿವ ಸ್ವಾಮಿಗಳು ನೇತೃತ್ವ ವಹಿಸಿ, ಸಮಿತಿ ನಡೆದು ಬಂದ ದಾರಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಾಧವರೆಡ್ಡಿ ಹೈದರಾಬಾದ್, ಲಿಂಗರಾಜಪ್ಪ ಅಪ್ಪಾ, ರವೀಂದ್ರ ಧಾರಿಯಾ, ಹರ್ಷಾನಂದ ಸ್ವಾಮಿಜಿ, ವೇಣುಗೋಪಾಲರೆಡ್ಡಿ, ಡಾ.ಗುರುರಾಜ ಕರ್ಜಗಿ, ವಾಸುದೇವ ದೇಶಪಾಂಡೆ, ಡಾ.ಬಿ.ಜಿ.ಮೂಲಿಮನಿ ಇತರರು ಉಪಸ್ಥಿತರಿದ್ದರು.
ಸಭೆಗೂ ಮುನ್ನ ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ಪಂಡಿತ ನರಸಿಂಹಲು ವಡವಾಟಿ ಹಾಗೂ ಶಾರದಾ ವಡವಾಟಿ ಅವರು ಪ್ರಾರ್ಥನಾಗೀತೆ ಹಾಡಿದರು.