ಅಭಿಜಾತ ಅಭಿಯಂತರ ಸರ್ ಎಂ. ವಿಶ್ವೇಶ್ವರಯ್ಯ

0
147

ಇಂದು ಸಪ್ಟೆಂಬರ್ ೧೫ ನೇಯ ತಾರೀಖಿನ ವಿಶೇಷವಾದ ದಿನ. ನಮ್ಮ ದೇಶದ ಅಭಿವೃದ್ಧಿಗಾಗಿ ಅಪಾರವಾಗಿ ಶ್ರಮಿಸಿದ, ಪ್ರಾಮಾಣಿಕತೆಯೇ ಮೂರ್ತಿವೆತ್ತಂತ್ತಿದ್ದ, ಅದ್ಭುತ ಬುದ್ಧಿ ಕೌಶಲ್ಯಗಳಿಗೆ  ಹೆಸರಾದ, *ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ(15.9.1861 – 12.4.1962)* ಅವರ ಜನ್ಮದಿನ.  ನಮ್ಮ  ಭಾರತ ದೇಶದಾದ್ಯಂತ ಇಂದು “ರಾಷ್ಟ್ರೀಯ ಇಂಜಿನೀಯರ್ಸ್ ದಿನ” ವನ್ನಾಗಿ  ಆಚರಿಸಲಾಗುತ್ತದೆ.

ಅಪ್ಪಟ ಕನ್ನಡಿಗಳಾಗಿ ಸರ್ ಎಮ್.ವ್ಹಿ.ಅವರ ಕುರಿತು ಬರೆಯುವುದಕ್ಕೆ ಅತೀ ಮುಖ್ಯ ಕಾರಣವೇನೆಂದರೆ ಇಂಜಿನೀಯರ್ ವಿಶ್ವೇಶ್ವರಯ್ಯ ಅವರು ನಮ್ಮ ಕನ್ನಡದವರು ಎಂಬ ಅಪಾರ ಅಭಿಮಾನ ಹಾಗೂ  ಹೆಮ್ಮೆ. ನವಕರ್ನಾಟಕ, ನವ ಭಾರತ ನಿರ್ಮಾಣಕ್ಕೆ ಬುನಾದಿ ಹಾಕಿಕೊಟ್ಟ ಮಹನೀಯರು ಅವರು.

Contact Your\'s Advertisement; 9902492681

ಅಭಿಜಾತ ಅಭಿಯಂತ ಎಂದೇ ಹೆಸರಾದ  ಸರ್ ಎಮ್ ವಿಶ್ವೇಶ್ವರಯ್ಯ ಸಪ್ಟೆಂಬರ್ 15, 1861 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು.ವಿಶ್ವೇಶ್ವರಯ್ಯ ಅವರ ಪೂರ್ವಜರೆಲ್ಲ ಆಂಧ್ರ ಪ್ರದೇಶದ   ‘ಮೋಕ್ಷಗುಂಡಂ’ ಎಂಬ ಹಳ್ಳಿಯವರಾದ ಕಾರಣ   ವಿಶ್ವೇಶ್ವರಯ್ಯ ಹೆಸರಿನೊಂದಿಗೆ ಅವರ ಮೂಲ ಹಳ್ಳಿಯ ಹೆಸರೂ ಸೇರಿಕೊಂಡು ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದೇ ಪ್ರಸಿದ್ಧರಾದರು.

ಸರ್ ಎಂ. ವಿ.ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು. ಯಾವಾಗಲೂ ಸಮಾಜಮುಖಿಯಾಗಿ ಚಿಂತಿಸುತ್ತ, ತಮ್ಮನ್ನು ತಾವು ಸಮಾಜದ ಅಭಿವೃದ್ಧಿಗಾಗಿ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಶಿಸ್ತು, ಸಂಯಮ, ಸ್ವಾಭಿಮಾನ ಹಾಗೂ ಪ್ರಾಮಾಣಿಕತೆಯ ಆಗರವಾಗಿದ್ದ ಅವರು ಮೈಸೂರಿನ ದಿವಾನರಾಗಿ (1912 ರಿಂದ 1918 ರವರೆಗೆ) ಕೈಗೊಂಡ ಸೇವೆ ಅನನ್ಯವಾದುದು, ಹಾಗೂ ಅವರ ಆಡಳಿತ ನಿರ್ವಹಣೆಗೆ ಉತ್ತಮ ನಿದರ್ಶನವಾಗಿದೆ.

*ಕೈಗಾರಿಕರಣ ಇಲ್ಲವೇ ವಿನಾಶ* ಎಂಬ ಅಚಲ ನಿಲುವನ್ನು ಹೊಂದಿದ್ದ ವಿಶ್ವೇಶ್ವರಯ್ಯ ಅವರು ಕರ್ನಾಟಕದ ಅಸಂಖ್ಯಾತ ಜನಸಾಮಾನ್ಯರ ದುಡಿಯುವ ಕೈಗಳಿಗೆ ದುಡಿಮೆಯನ್ನು ಒದಗಿಸಿಕೊಟ್ಟರು. ಅವರೇ ಪ್ರಾರಂಭಿಸಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅವರ ಆರ್ಥಿಕ ಚಿಂತನೆಯ ಪ್ರತೀಕವಾದರೆ,  ಮೈಸೂರು ಸೋಪ್, ಕಾಗದ,  ಗಂಧದ ಎಣ್ಣೆ ಫ್ಯಾಕ್ಟರಿ ಗಳು ಕೈಗಾರಿಕಾ ಚಿಂತನೆಯ ಪ್ರತೀಕಗಳಾಗಿವೆ. ಮಹಾರಾಣಿ ಮಹಿಳಾ ಕಾಲೇಜು ಸಾಮಾಜಿಕ ಚಿಂತನೆಯ ದ್ಯೋತಕ ವಾದರೆ,  ನಮ್ಮೆಲ್ಲರ ಹೆಮ್ಮೆಯ ಕೃಷ್ಣರಾಜ ಸಾಗರ ಅಣೆಕಟ್ಟು  ಕರ್ನಾಟಕದ ಅಸಂಖ್ಯ ಜನರಿಗೆ ಉದ್ಯೋಗ ಒದಗಿಸಿರುವ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿರುವ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ದ್ಯೋತಕವಾಗಿದೆ.

ನಿಜ… ವಿಶ್ವೇಶ್ವರಯ್ಯನಂತಹ  ಅಭಿಯಂತರರು ಭಾರತದ ನಿಜವಾದ ನಿರ್ಮಾತೃರು !!

ಸಂಕೀರ್ಣವಾದ ಸಂಸ್ಕರಣಾಗಾರಗಳಿಂದ ಹಿಡಿದು ಆಧುನಿಕ ಬುಲೆಟ್ ಟ್ರೈನ್  ನಿರ್ಮಾಣ ಮಾಡುವಲ್ಲಿ ಇಂಜಿನಿಯರ್ ಗಳ ಪಾತ್ರ ಬಹುಮುಖ್ಯವಾದದ್ದು. ಪ್ರತಿವರ್ಷ  ನಮ್ಮ ದೇಶದಲ್ಲಿ ಸುಮಾರು ೧೫ ಲಕ್ಷ ಯವಕ- ಯುವತಿಯರು ಅಭಿಯಂತರರಾಗಿ ಹೊರಬರುತ್ತಿದ್ದಾರೆ.

ಆದರೆ ಲಭ್ಯವಿರುವ ಕೆಲಸಗಳು ಅತೀ ಕಡಿಮೆ.ಹಾಗಾಗಿ ಇಂಜಿನೀಯರಿಂಗ್ ವಲಯದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಲೇ ಸಾಗುತ್ತಿದೆ.ಓದಿಗೆ ಸಂಬಂಧವೇ ಇಲ್ಲದ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದೊದಗುತ್ತಿದೆ. ಹೀಗಾಗಿ ಉದ್ಯಮಶೀಲತೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಸರ್ಕಾರ ಹಾಗೂ ಬೃಹತ್ ಕಂಪನಿಗಳು ಸೃಷ್ಟಿ ಸುವ ಉದ್ಯೋಗ ಸಾಕಷ್ಟು ಪ್ರಮಾಣದಲ್ಲಿ ಇಲ್ಲವಾದ ದ್ದರಿಂದ ಶಿಕ್ಷಣ ಪಡೆದವರು ಕೇವಲ ಉದ್ಯೋಗದ ಕಡೆ ನೋಡದೆ ಸ್ವಂತ ಉದ್ಯಮ ಸ್ಥಾಪಿಸಿ ಉದ್ಯೊಗ ಸೃಷ್ಟಿಸಿ ಕೊಳ್ಳಬೇಕಾದ ಅವಶ್ಯಕತೆ ಇದೆ.

ಹಾಗಾಗಿ ಇವತ್ತಿನ ಇಂಜಿನೀಯರಿಂಗ್ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಪ್ರೀತಿಸುವ, ಹೊಸ ಹೊಸ ಅನ್ವೇಷಣೆಗಳನ್ನು ಮಾಡುವ,  ಸಾಮಾಜಿಕ ಚಿಂತನೆ  ಹಾಗೂ ಸಾಮಾಜಿಕ ಬದ್ಧತೆ ಯ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಾದದ್ದು ಇವತ್ತಿನ ದಿನಗಳ ಅವಶ್ಯಕತೆ ಹಾಗೂ ಅನಿವಾರ್ಯವಾಗಿದೆ.

ಈ ದಿಸೆಯಲ್ಲಿ  ಇವತ್ತಿನ ಅಭಿಯಂತರರು ಸಮಾಜ ಹಾಗೂ ಪರಿಸರ ಸ್ನೇಹಿಯಾಗಿ ಪ್ರಗತಿ ಹೊಂದಬೇಕು,  ಆರ್ಥಿಕ ಲಾಭವೂ ಸೇರಿದಂತೆ ದೇಶದ ಹಾಗೂ ಸಮಾಜದ ಅಭಿವೃದ್ಧಿಗೆ ಸಹಾಯವಾಗುವ ಉದ್ಯಮ ಶೀಲತೆಯ ಸವಾಲುಗಳನ್ನು ಇಂದಿನ ಯುವ ಇಂಜಿನೀಯರ್ ಗಳು ಕೈಗೆತ್ತುಕೊಳ್ಳಬೇಕು.ಈ ದಿಸೆಯಲ್ಲಿ ಸಾಗಲು ಸರ್ ಎಂ. ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವ, ಸಾಧನೆ ಇಂದಿಗೂ, ಮುಂದೆಯೂ, ಎಂದೆಂದಿಗೂ ಪ್ರಸ್ತುತ.

ಸರ್ ಎಂವಿ ಅವರ ಅನನ್ಯ ಬುದ್ಧಿಮತ್ತೆ,  ಅವಿರತ ದುಡಿಮೆ, ಅನಿರ್ವಚನೀಯ ವ್ಯಕ್ತಿತ್ವಕ್ಕೆ ನಮಸ್ಕರಿಸಿ, ಇಂಜಿನಿಯರ್ ದಿನಕ್ಕೆ  ಶುಭಕೋರುವೆ.

ಡಾ. ಗೀತಾ ಪಾಟೀಲ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here