ಕಡಣಿ (ಕಲಬುರಗಿ) : ಜನ್ಮದಾತರು ಪ್ರಪಂಚದೊಳಕ್ಕೆ ಸಿಲುಕಿಸಲು ಯತ್ನಿಸಿದರೆ, ಸಾಕ್ಷಾತ ಪಾರ್ವತಿ ಸ್ವರೂಪಿಣಿಯೇ ಆಗಿರುವ ಲಿಂಗಮ್ಮ ಬಸವನ ಬೆಳಕು ಹುಡುಕುತ್ತ ಹೋಗಲು ಪಟ್ಟು ಹಿಡಿಯುತ್ತಾಳೆ. ಅಂತಹ ಗಳಿಗೆಯಲ್ಲಿ ಉಪದೇಶ ಮಾಡಲು ಮಧ್ಯ ಪ್ರವೇಶಿಸುತ್ತಾರೆ. ಅಂತಹ ಗುರುಗಳಿಗೆಯೇ `ಪ್ರಪಂಚ ದೊಡ್ಡದ್ದೋ, ಪಾರಮಾರ್ಥ ದೊಡ್ಡದ್ದೋ’ ಎಂದು ಲಿಂಗಮ್ಮ, ಗುರುಗಳಿಗೆ ಪ್ರಶ್ನಿಸಿ ಅವರ ಬಾಯಿಗೆ ಬೀಗ ಹಾಕುತ್ತಾಳೆ. ಅಲ್ಲದೇ ಪಾರಮಾರ್ಥದತ್ತ ಸಾಗಲು ಸಮ್ಮತಿ ಪಡೆದು, ಉಮ್ರಾಣಿಯ ಜನರ ಸಮ್ಮುಖದಲ್ಲಿ ಬಸವಕಲ್ಯಾಣದತ್ತ ಹೊರಡುತ್ತಾಳೆ.
ಚಿನ್ಮಯಗಿರಿಯ ಶ್ರೀಗುರು ಮಹಾಂತೇಶ್ವರ ಮಠದ ಪೀಠಾಧಿಪತಿ ಪೂಜ್ಯಶ್ರೀ ಷ.ಬ್ರ. ವೀರ ಮಹಾಂತೇಶ್ವರ ಶಿವಾಚಾರ್ಯರು ಬುಧವಾರ 5ನೇ ದಿನದಂದು ಸಂಜೆ `ಶ್ರೀ ಗುಡ್ಡಾಪೂರ ವರದಾನೇಶ್ವರಿ’ ಪುರಾಣ ಹೇಳುತ್ತಾ, ಉಮ್ರಾಣಿಯ ಲಿಂಗಮ್ಮ ಬಸವ ಬೆಳಕು ಹುಡುಕಿ ಹೊರಟ ಪರಿ ವರ್ಣಿಸುತ್ತಾ, ಸಾಕ್ಷಾತ ಪಾರ್ವತಿ ಸ್ವರೂಪಿಯಾಗಿರುವ ಲಿಂಗಮ್ಮ, ಪೂಜಾ ಸಾಮಾಗ್ರಿ ಚೀಲ ಹೊತ್ತು ಸೊನ್ನಲಗಿಯ ಸಿದ್ಧರಾಮರ ಕಾರ್ಯಕ್ಷೇತ್ರದತ್ತ ಹೋಗುತ್ತಿರಬೇಕಾದರೆ, ಚೀಲದ ಬಾರ ತಾಳಲಾರದೇ `ಮಲ್ಲಯ್ಯ, ನನ್ನ ಚೀಲ ಬಸವಕಲ್ಯಾಣದತ್ತ ತೆಗೆದುಕೊಂಡು ಹೋಗು…’ ಎಂದು ಮಲ್ಲಯ್ಯನ ಮೊರೆ ಹೋಗುತ್ತಾಳೆ. ಅವಳ ಅಪೇಕ್ಷೆಯಂತೆ, ಮಲ್ಲಯ್ಯ ಚೀಲ ಹೊತ್ತು ಬಸವಕಲ್ಯಾಣಕ್ಕೆ ಕೊಂಡೊಯ್ಯುತ್ತಾನೆ ಲಿಂಗಮ್ಮನ ಭಕ್ತಿ ಉನ್ಮಾದ ಎಷ್ಟಿತ್ತು ಎಂಬುದು ವಿವರಿಸುತ್ತಾರೆ.
ಲಿಂಗಮ್ಮ ಬಸವಕಲ್ಯಾಣಕ್ಕೆ ಬರುತ್ತಲೇ `ಬಸವಣ್ಣ’ನನ್ನು ಹುಡುಕಲಿಲ್ಲ. ಬದಲಾಗಿ ಅಲ್ಲಿ ವಾಸವಾಗಿದ್ದ ಬಡ, ದಲಿತ, ಶೋಷಿತರ ಬದುಕಿಗೆ ಆಸರೆಯಾಗುವ ಕಾರ್ಯದಲ್ಲಿ ತನು-ಮನ-ಧನದಿಂದ ಅರ್ಪಿಸಿಕೊಂಡು ಬಿಡುತ್ತಾಳೆ. ಹಸಿದವರ ಒಡಲಿಗೆ ಅನ್ನ, ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸೇವೆ ಮಾಡುತ್ತಾ, ಅವಳ ದಾಸೋಹ ಮಹಿಮೆಯನ್ನು ಪಸರಿಸುವಂತೆ ಮಾಡುತ್ತಾಳೆ. ಲಿಂಗಮ್ಮ ಶ್ರಮದ ಹೊಳಪು ಬಸವಣ್ಣನವರ ಕಣ್ಣು ಕುಕ್ಕಿಸುವಂತೆ ಮಾಡುತ್ತದೆ. ಯಾರು ಆ ಮಹಿಳೆ ? ಎಂದು ಹುಡುಕಿಕೊಂಡು ಬರುವಂತೆ ಮಾಡುತ್ತದೆ. ಲಿಂಗಮ್ಮ ಸಾಮಾನ್ಯ ಮಹಿಳೆಯಲ್ಲ, ಬಸವ ಬೆಳಕೇ ತನ್ನತ್ತ ಸೆಳೆದುಕೊಂಡ ಶಕ್ತಿ ಸ್ವರೂಪಿಣಿ ಎಂದು ಬಣ್ಣಿಸುತ್ತಾರೆ ಪೂಜ್ಯರು.
ವೇದಿಕೆ ಮೇಲೆ ಶರಣ ಸಿರಸಗಿಯ ಪೂಜ್ಯಶ್ರೀ ರುದ್ರಮುನಿ ದೇವರು ಉಪಸ್ಥಿತರಿದ್ದರು. ಅತಿಥಿಗಳಾಗಿ ಕಾರ್ಯಪಾಲಕ ಅಭಿಯಂತರರಾಗಿರುವ ನರಸಿಂಹರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ವಿಜಯಕುಮಾರ ಬಿಲಗುಂದಿ, ಕೃಷಿ ಪಂಡಿತ ಪುರಸ್ಕøತರಾದ ಶಾಮರಾವ ಪಾಟೀಲ ಗರೂರ, ಉದನೂರಿನ ಸಿದ್ಧಣಗೌಡ ಪಾಟೀಲ ಸೇರಿದಂತೆ ಸುತ್ತೂರಿನ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.
ಸಂಗೀತ ಸೇವೆ ಸಿಂಧಗಿಯ ಸಂತೋಷ ಹರಸೂರಮಠ ನೇತೃತ್ವದ ಕಲಾ ಬಳಗದವರಿಂದ ನಡೆಯಿತು. ಇದೆಲ್ಲಕ್ಕೂ ನಂದೀಶ್ವರನಾಗಿರುವ ಕುಪೇಂದ್ರ ಬಿರಾಜದಾರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಕೋಟಿ ಜನರು ಸಾಕ್ಷಿಯಾಗಿದ್ದರು.