ಪ್ರಾಮಾಣಿಕವಾಗಿ ಕೆಲಸ ಮಾಡಿದವರನ್ನು ಸೋಲಿಸಿದ್ದು ನೋವು ತಂದಿದೆ: ಪ್ರಿಯಾಂಕ್ ಖರ್ಗೆ

0
35

ಚಿತ್ತಾಪುರ: ಪ್ರಾಮಾಣಿಕವಾಗಿ ಕೆಲಸ ಮಾಡಿದವರನ್ನು ಸೋಲಿಸಿ ಸುಳ್ಳು ಹೇಳುವವರನ್ನು ಗೆಲ್ಲಿಸುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಇದರಿಂದ ಅಭಿವೃದ್ದಿ ಕುಂಠಿತಗೊಳ್ಳಲಿದೆ ಎಂದು ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ನೋವಿನಿಂದ ನುಡಿದರು.

ವಾಡಿ ಪಟ್ಟಣದ ಲಕ್ಷ್ಮೀಪುರ ವಾಡಿ ಪ್ರದೇಶದಲ್ಲಿ ಕೆಬಿಜೆಎನ್ ಎಲ್ ವತಿಯಿಂದ ರೂ ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು. ಮಲ್ಲಕಾರ್ಜುನ ಖರ್ಗೆ ಸಾಹೇಬರಾಗಲೀ ತಾವಾಗಲೀ ಜನರ ಪರ ಕೆಲಸ ಮಾಡಿಕೊಂಡೆ ಬಂದಿದ್ದೇವೆ. ನಾವು ಮಾಡುವ ಕೆಲಸಕ್ಕೆ ಏನಾದರೂ ನಿಮ್ಮಿಂದ ಪಡೆದಿದ್ದೇವಾ? ಆದರೆ, ನಮಗೆ ಆಶೀರ್ವಾದ ಮಾಡಿ ಮತ್ತಷ್ಟು ಸೇವೆ ಮಾಡಲು ಅವಕಾಶ ಮಾಡಿ ವಿನಂತಿಸಿದ್ದೇವೆ. ಆದರೆ,ಏನೂ ತಪ್ಪು ಮಾಡದ ನಮಗೆ ಶಿಕ್ಷೆ ನೀಡಿ, ಜಾತಿ ಧರ್ಮದ ಆಧಾರದ ಮೇಲೆ ಸುಳ್ಳು ಹೇಳಿ ಮತಯಾಚಿಸಿದರವನನ್ನು ಗೆಲ್ಲಿಸಲಾಗಿದೆ. ಇದು ನಮ್ಮ ನೋವಿಗೆ ಕಾರಣವಾಗಿದೆ ಎಂದರು.

Contact Your\'s Advertisement; 9902492681

” ರಸ್ತೆ, ಕುಡಿಯುವ ನೀರು, ಶಾಲೆ, ಹಾಸ್ಟೆಲ್, ಸಮುದಾಯ ಭವನ, ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳಿಗಾಗಿ ರೂ 2700 ಕೋಟಿ ಖರ್ಚು ಮಾಡಿದರೂ ನನಗೆ ಕೇವಲ 5000 ಮತಗಳ ಅಲ್ಪಮತದಿಂದ ಗೆಲ್ಲಿಸಿದಿರಿ. ಇತ್ತೀಚಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಸಾಹೇಬರಿಗೆ 5000 ಮತಗಳ ಮೈನಸ್ ಆಗಿದೆ. ಇದು ಯಾಕೆ ಎಂದು ನನಗೂ ತಿಳಿತಿಲ್ಲ” ಎಂದು ನೊಂದು ನುಡಿದರು.

ತಾವು ಶಾಸಕರಾಗಿ ಹಾಗೂ ಸಮಾಜಕಲ್ಯಾಣ ಸಚಿವರಾಗಿದ್ದಾಗ ಕೈಗೊಂಡ ಅಭಿವೃದ್ದಿ ಕೆಲಸಗಳ ಕುರಿತು ಮಾತನಾಡಿದ ಶಾಸಕರು, 200 ಕೋಟಿ ವೆಚ್ಚದಲ್ಲಿ ನೂತನ ವಾಡಿ ಟೌನ್ ಶಿಪ್ ನಿರ್ಮಾಣ, 150 ಕೋಟಿ ವೆಚ್ಚದಲ್ಲಿ ನಾಗಾವಿ ಕ್ಷೇತ್ರ ಅಭಿವೃದ್ದಿ, ಉಪ ವಿಭಾಗೀಯ ವಿಜ್ಞಾನ ಕೇಂದ್ರ ಸ್ಥಾಪನೆ, ತಾಂಡಾಗಳ ಅಭಿವೃದ್ದಿಗಾಗಿ 200 ಕೋಟಿ ಅನುದಾನ ಬಿಡುಗಡೆ, ಸಂತ ಸೇವಾಲಾಲ್ ಅಧ್ಯಯನ ಕೇಂದ್ರ ನಿರ್ಮಾಣಕ್ಕಾಗಿ ಪ್ರತಿ ತಾಂಡಾಕ್ಕೆ 10 ಲಕ್ಷ ಅನುದಾನ ಬಿಡುಗಡೆ, ರೂ 1.50 ಕೋಟಿ ವೆಚ್ಚದಲ್ಲಿ ಸೇವಾಲಾಲ್ ಪ್ರಗತಿ ತಾಂಡಾ ಕಾಲನಿ ನಿರ್ಮಾಣ, ರೂ 2 ಕೋಟಿ ವೆಚ್ಚದಲ್ಲಿ ಸೋರಗೊಂಡನಕೊಪ್ಪದಲ್ಲಿ ಯಾತ್ರಿ ನಿವಾಸ, ರೂ 57 ಕೋಟಿ ವೆಚ್ಚದಲ್ಲಿ ಲಾಲ್ ಧರಿಯಲ್ಲಿ 200 ಬಂಜಾರ ಸಮುದಾಯದ ಮಹಿಳೆಯರಿಗೆ ತರಬೇತಿ ಹೀಗೆ ಹಲವಾರು ಅಭಿವೃದ್ದಿ ಕಾಮಗಾರಿ ಕೈಗೊಂಡರು ಜನರು ನಮಗೆ ಎಂಪಿ‌ ಚುನಾವಣೆಯಲ್ಲಿ ಆಶೀರ್ವಾದ ಮಾಡಲಿಲ್ಲ. ನನಗಿಂತ ಚೆನ್ನಾಗಿ ಕೆಲಸ ಮಾಡುವವರು ಯಾರಾದರೂ ಇದ್ದರೆ ಹೇಳಿ ನಾನೇ ಮುಂದೆ ನಿಂತು ಅವರನ್ನು ಗೆಲ್ಲಿಸಿ ಕಳಿಸುತ್ತೇನೆ ಎಂದರು.

ರಾಜ್ಯ ಹಾಗೂ ಕೇಂದ್ರ ಸರಕಾರ ಹೈಕ ಭಾಗವನ್ನು ಸಂಪೂರ್ಣ ಕಡೆಗಣಿಸಿವೆ ಎಂದು ದೂರಿದ ಪ್ರಿಯಾಂಕ್ ಖರ್ಗೆ, ಸಿಎಂ ಯಡಿಯೂರಪ್ಪನವರಿಗೆ ಮೋದಿ ಹಾಗೂ ಅಮಿತ್ ಶಾ ಬಳಿ ರಾಜ್ಯಕ್ಕೆ‌ ಬೇಕಾಗುವ ಅನುದಾನ ಬಿಡುಗಡೆ ಮಾಡುವಂತೆ ಬಾಯಿ ಬಿಡುವ ಧೈರ್ಯವಿಲ್ಲ. ಆದರೆ, ಅವರ ವಿರುದ್ದ ಮಾತನಾಡುತ್ತಿದ್ದ ಖರ್ಗೆ ಸಾಹೇಬರನ್ನು ಸೋಲಿಸಲಾಯಿತು ಎಂದರು. ಬಿಜೆಪಿಯವರಿಗೆ ಹೈಕ ಭಾಗ ಎಂದರೆ ಅಲರ್ಜಿ ಎಂದ ಶಾಸಕರು, ಈ ಭಾಗದಲ್ಲಿ 41 ಜನ ಶಾಸಕರಿದ್ದು ಅವರಲ್ಲಿ ಗೆದ್ದ ಹಲವರ ಪೈಕಿ ಕೇವಲ ಒಬ್ಬರನ್ನೇ ಸಚಿವರನ್ನಾಗಿ ಮಾಡಲಾಗಿದೆ.ಇದರಿಂದ ಅಭಿವೃದ್ದಿ ಸಾಧ್ಯನಾ ಎಂದು ಪ್ರಶ್ನಿಸಿದ ಶಾಸಕರು, ಹೈಕ ಪ್ರದೇಶ ಅಭಿವೃದ್ದಿ ನಿಗಮಕ್ಕೆ ಹಾಗೂ ಸಂವಿಧಾನದ 371 (J) ಅನುಷ್ಠಾನ ಉಪಸಮಿತಿಗೂ ಕೂಡಾ ಚೇರ್ಮೆನ್ ನೇಮಿಸಲಾಗಿಲ್ಲ. ಸರಕಾರದ ಈ ನಡೆ ಅಭಿವೃದ್ದಿಗೆ ಹಿನ್ನೆಡೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಇತರೆ ಭಾಗಕ್ಕೆ ಹೋಲಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಪೂರಕ ವಾತವಾರಣವಿಲ್ಲ. ಈಗ ಪಶುಸಂಗೋಪನೆ ಸಚಿವರಾಗಿರುವ ಪ್ರಭು ಚವ್ಹಾಣ್ ಅವರು ಈ ಕುರಿತು ಕ್ರಮ ಕೈಗೊಳ್ಳಲಿ ಎಂದ ಪ್ರಿಯಾಂಕ್ ಖರ್ಗೆ ಅವರು, ರೈತರ ಇತರೆ ಬೇಡಿಕೆಗಳ ಬಗ್ಗೆ ಅದರಲ್ಲೂ ಹೆಸರು ಖರೀದಿಗೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಒತ್ತಾಯಿಸಿದರು. ಕಳೆದ‌ ಚುನಾವಣೆಯಲ್ಲಿ ವಾಡಿ ಪಟ್ಟಣದ ಪ್ರಮುಖ 7 ಬೇಡಿಕೆಗಳ ಪೈಕಿ ಈಗಾಗಲೇ 4 ಬೇಡಿಕೆಗಳನ್ನು ಈಡೇರಿಸಲಾಗಿದ್ದು ಉಳಿದವುಗಳನ್ನು ಆದಷ್ಟು ಬೇಗ ಈಡೇರಿಸಲಾಗುವುದು ಎಂದ ಖರ್ಗೆ ಅವರು, ಗ್ರಂಥಾಲಯ ಹಾಗೂ ರುದ್ರಭೂಮಿಗೆ ಬೇಡಿಕೆ ಇದೆ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ಕೂಡಲೇ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ ಜಿಪಂ ವಿರೋಧಪಕ್ಷದ ನಾಯಕರಾದ ಶಿವಾನಂದ್ ಪಾಟೀಲ್ ಮಾತನಾಡಿ, ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಜನಪರ ನಿಲುವು ಹೊಂದಿದ್ದ ಕ್ಷೇತ್ರದ ಅಭಿವೃದ್ದಿಗೆ ಬೇಕಾಗುವ ಅನುದಾನ ತರಲಿದ್ದಾರೆ ಅದಕ್ಕೆ ನಿಮ್ಮ ಸಹಕಾರ ಹಾಗೂ ಆಶೀರ್ವಾದ ಬೇಕು ಎಂದು ಮನವಿ ಮಾಡಿದರು. ನಂತರ ಶಾಸಕರು, ಶಂಕರವಾಡಿಯ ಎಸ್ ಸಿ ಬಡಾವಣೆಗೆ ಗ್ರಾಮೀಣ ಕುಡಿಯುವ ನೀರು ಇಲಾಖೆಯ ವತಿಯಿಂದ ರೂ ಹತ್ತು ಲಕ್ಷ ವೆಚ್ಚದಲ್ಲಿ ಕೈಗೆತ್ತಿಗೊಳ್ಳಲಾಗುವ ಕುಡಿಯುವ ನೀರಿನ ಯೋಜನೆಗೆ ಅಡಿಗಲ್ಲು ನೆರವೇರಿಸಿದರು.

ವೇದಿಕೆಯ ಮೇಲೆ ಮುಖಂಡರಾದ ಭೀಮಣ್ಣ ಸಾಲಿ, ಶ್ರೀನಿವಾಸ ಸಗರ, ಅಜೀಜ್ ಸೇಠ್, ಶಿವರುದ್ರ‌ಬೇಣಿ, ಜಗದೇವ ರೆಡ್ಡಿ , ಮಹೇಮೂದ್ ಸಾಹೇಬ್ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here