ಕಾಂಗ್ರೆಸ್‍ಗೆ ಅನುಕಂಪದ ಅಲೆ: ಬಿಜೆಪಿಗೆ ಮೋದಿ ಗಾಳಿ | ರಂಗೇರುತ್ತಿರುವ ಸುರಪುರ ಮತಕ್ಷೇತ್ರದ ಉಪ ಚುನಾವಣಾ ಕಣ

0
102

ಕಲಬುರಗಿ: ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಉಪ ಚುನಾವಣೆ 2024ರ ಲೋಕಸಭೆ ಚುನಾವಣೆ ಜೊತೆಗೆ ನಡೆಯುತ್ತಿರುವುದರಿಂದ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಶಾಸಕ ದಿ. ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಪರ ಅನುಕಂಪದ ಅಲೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೇಲಾಗಿ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ತೆರಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಪರ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇರುವುದು ಕಂಡು ಬರುತ್ತಿದೆ. ಮೇಲಾಗಿ ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಮಾಡಿರುವ ಕೆಲಸಗಳನ್ನು ಹೇಳಿಕೊಂಡು ಅವರು ಮತದಾರರ ಬಾಗಿಲು ತಟ್ಟುತ್ತಿದ್ದಾರೆ.

Contact Your\'s Advertisement; 9902492681

ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಬ್ಬರೂ ಸುಡು ಬಿಸಿಲಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪರಸ್ಪರ “ಮಾಡು ಇಲ್ಲವೇ ಮಡಿ” ಎಂಬಂತೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಾದ್ಯಂತ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರ, ಬೆಂಬಲಿಗರ ಸಭೆ ಕರೆದು ಮತದಾರರ ಮನವೊಲಿಸುವಲ್ಲಿ ಅಹರ್ನಿಶಿ ಪ್ರಯತ್ನಿಸುತ್ತಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಪರಸ್ಪರ ತಮ್ಮನ್ನು ಬೆಂಬಲಿಸುವಂತೆ ಮತ್ತು ತಮಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿಯ ಉಪ ಚುನಾವಣೆಯಲ್ಲಿ ಪಕ್ಷಾಂತರ ಪರ್ವ ಸಹಜವಾಗಿಯೇ ಜೋರಾಗಿ ನಡೆದಿದೆ ಎಂದು ಹೇಳಬಹುದು.

ಈ ಹಿಂದೆ ಮೂರು ಬಾರಿ ಶಾಸಕ ದಿ. ರಾಜಾ ವೆಂಕಟಪ್ಪ ನಾಯಕ ವಿರುದ್ಧ ಗೆಲುವು ಸಾಧಿಸಿದ್ದ ನರಸಿಂಹ ನಾಯಕ (ರಾಜೂಗೌಡ) ಅವರು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳಿಂದ ಸೋಲು ಅನುಭವಿಸಿದ್ದರು. ಇದೀಗ ಅವರ ಪುತ್ರ ರಾಜಾ ವೇಣುಗೋಪಾಲ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಈ ಮತಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ಮತದಾರರು ಹೆಚ್ಚಿಗಿದ್ದರೂ, ಕುರುಬ ಮತ್ತು ಲಿಂಗಾಯತ ಸಮುದಾಯದ ಮತದಾರರೇ ನಿರ್ಣಾಯಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯದ ಮಟ್ಟಿಗೆ ಹೇಳುವುದಾದರೆ ಕುರುಬ ಸಮುದಾಯದ ಶೇ. 80ರಷ್ಟು ಮತದಾರರು ಕಾಂಗ್ರೆಸ್ ಪರವಾಗಿದ್ದರೆ, ಲಿಂಗಾಯತ ಸಮುದಾಯದ ಶೇ. 60ರಷ್ಟು ಮತದಾರರು ಬಿಜೆಪಿ ಪರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ರಾಜಕೀಯವೆಂಬ ಚದುರಂಗದಾಟದಲ್ಲಿ ಮತದಾರ ಪ್ರಭುಗಳ ಚಿತ್ತ ಯಾರ ಕಡೆ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ.

ಚುನಾವಣೆಯತ್ತ ಮತದಾರರ ಚಿತ್ತ; ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಸುರಪುರ ಮತಕ್ಷೇತ್ರ ಸದಾ ಜಿದ್ದಾಜಿದ್ದಿನ ಕಣವಾಗಿದ್ದು, ಬಿಜೆಪಿಯಿಂದ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಕಾಂಗ್ರೆಸ್‍ನಿಂದ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಸುರಪುರ ಕ್ಷೇತ್ರದಲ್ಲಿ 1,41, 618 ಪುರುಷರು, 1,39,729 ಮಹಿಳಾ, 28 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 2,81,375 ಮತದಾರರಿದ್ದು, ಚುನಾವಣೆಯತ್ತ ಮತದಾರರ ಚಿತ್ತ ಎನ್ನುವಂತಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here