ಕಲಬುರಗಿ: ಭಾರತ ದೇಶದ ಪ್ರಜಾತಂತ್ರದ ಚುನಾವಣಾ ವ್ಯವಸ್ಥೆಯಲ್ಲಿ ಭಾರತೀಯ ಎಲೆಕ್ಟ್ರಾನಿಕ್ಸ್ ಲಿಮೆಟೆಡ್ ತಯಾರಿಸಿರುವ ಇವಿಎಂ-ವಿವಿಪ್ಯಾಟ್ ಯಂತ್ರ ಬಳಕೆ ಮಾಡದಿದ್ದರೆ ಬಿಜೆಪಿ ಕೇವಲ 40 ಸ್ಥಾನ ಗೆಲ್ಲುವುದಕ್ಕೆ ಸಾಧ್ಯವಿಲ್ಲ, ಈ ಬಗ್ಗೆ ಬಾಂಬೆ ಹೈಕೋರ್ಟ್‌ನಲ್ಲಿ ಇವಿಎಂ ಬಳಕೆ ಜಿಜ್ಞಾಸೆ ಬಗ್ಗೆ ವಿಚಾರಣೆ ಬಾಕಿ ಹಂತದಲ್ಲಿದೆ ಎಂದು ಸುಪ್ರೀಂಕೋರ್ಟ್ ವಕೀಲ ಭಾನುಪ್ರತಾಪ ಸಿಂಗ್ ಮಾಹಿತಿ ನೀಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನಕ್ಕಿಂತ ಒಂದು ವಾರ ಮುಂಚಿತವಾಗಿ ಅಭ್ಯರ್ಥಿಗಳ ಸಮ್ಮುಖದಲ್ಲಿ ಇವಿಎಂ ಯಂತ್ರದಲ್ಲಿ ಕ್ಷೇತ್ರದ ಹೆಸರು, ಅಭ್ಯರ್ಥಿಗಳ ಹೆಸರು, ಪಕ್ಷದ ಹೆಸರು, ಚಿಹ್ನೆ ಹೀಗೆ ಕ್ರಮಬದ್ಧವಾಗಿ ಅಳವಡಿಸಲಾಗುತ್ತದೆ. ಆದರೆ ಅಭ್ಯರ್ಥಿಗಳು, ಚುನಾವಣಾ ಏಜೆಂಟ್‌ದಾರರು ತುಂಬಾ ಜಾಗರುಕತೆವಹಿಸಿ, ಹಾಲುಮಿಶ್ರಿತ ಬಣ್ಣದ ಬಟನ್‌ನಲ್ಲಿ ಲೋಪ-ದೋಷಗಳಾಗದಂತೆ ಮುಂಜಾಗ್ರತೆವಹಿಸಬೇಕು. ಏನೇ ಸಮಸ್ಯೆ ಕಂಡುಬಂದರೆ ತತಕ್ಷಣಕ್ಕೆ ಇವಿಎಂ ಯಂತ್ರ ಬದಲಾಯಿಸಲು ಒತ್ತಾಯಿಸಬೇಕು ಎಂದು ತಿಳಿಹೇಳಿದರು.
ಕಳೆದ ಮಾರ್ಚ್ 16 ರಿಂದ ದೇಶದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನಿತ್ಯ ಒಂದಿಲ್ಲೊಂದು ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಕ್ರಮ ಕೈಗೊಳ್ಳದಿರುವುದು ದುರಂತವೇ ಸರಿ. ಈ ನಡುವೆ ಇವಿಎಂ ಯಂತ್ರ ತಯಾರಿಸಿದ ಬಿಇಎಲ್‌ನ ನಾಲ್ವರು ಸ್ವತಂತ್ರ ನಿರ್ದೇಶಕರು ಸಹ ಬಿಜೆಪಿ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸಿದರು.
ಇಂಡಿಯಾ ಮಹಾ ಘಟ್‌ಬಂಧನ ಪರ ಅಲೆ ದೇಶದಲ್ಲಿ ಮೊದಲ ಹಂತದ 108 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಇಂಡಿಯಾ ಮಹಾಘಟ್‌ಬಂಧನ ಮೈತ್ರಿಕೂಟದ ಪರ ಅಲೆ ಎದ್ದಿದೆ. ಕರ್ನಾಟಕದಲ್ಲೂ ಏ. 26 ಮತ್ತು ಮೇ 7 ರಂದು ಎರಡು ಹಂತದ ಮತದಾನ ನಡೆಯಲಿದೆ. ಹೀಗಾಗಿ ಮತದಾರರು ಎಚ್ಚರಿಕೆಯಿಂದ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದರು.
ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಓ) ಸಮೀಕ್ಷೆ ಪ್ರಕಾರ ದೇಶದಲ್ಲಿ ಶೇ.83 ರಷ್ಟು ಯುವ ಸಮುದಾಯದ ಜನಸಂಖ್ಯೆವಿದೆ. 19 ರಿಂದ 40 ವರ್ಷದೊಳಗಿನ ವಯಸ್ಸಿನ ಯುವಕ-ಯುವತಿಯರಾಗಿದ್ದು, ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಕೋರಿದರು. ಮನರೇಗಾ ಯೋಜನೆ ಅಡಿ ಕೂಲಿಹಣ 700 ರೂ. ಹೆಚ್ಚಿಸಬೇಕು. ನರೇಗಾ ಮಾವನ ದಿನಗಳು 100 ರಿಂದ 200 ದಿನಗಳವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.