ಕಾಯಕ ಮಾಡುವ ವ್ಯಕ್ತಿ ದೇವರಿಗಿಂತ ದೊಡ್ಡವನು

0
10

ಶಹಾಪುರ : 26 : ಬಸವಣ್ಣನವರು ಬರುವ ಪೂರ್ವದಲ್ಲಿಯೂ ಜನರು ತಮ್ಮ ಹೊಟ್ಟೆ ಬಟ್ಟೆಗಾಗಿ ದುಡಿಮೆ ಮಾಡುತ್ತಿದ್ದರು. ಆದರೆ ಆ ದುಡಿಮೆಗೆ ಬೆಲೆ ಇರಲಿಲ್ಲ. ದುಡಿಯುವ ವ್ಯಕ್ತಿಯನ್ನು ಕೀಳಾಗಿ ಕಾಣುತ್ತಲಿದ್ದರು. ತನು ಮನ ಬಳಲಿಸಿ, ನಿಸ್ವಾರ್ಥದಿಂದ ಸಮಾಜ ಮುಖಿಯಾಗಿ ಮಾಡುವ ಕೆಲಸಗಳೆಲ್ಲವೂ ಕಾಯಕವಾಗುತ್ತವೆ ಎಂದು ಯಾದಗಿರಿಯ ಉಪನ್ಯಾಸಕ ಡಾ. ಶಿವಲಿಂಗಪ್ಪ ಎಸ್. ನಾಯಕ ಅವರು ನುಡಿದರು.

ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಏರ್ಪಡಿಸಿದ್ದ , ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ತಿಂಗಳ ಬಸವ ಬೆಳಕು -114 ರ ಸಭೆಯಲ್ಲಿ ಶಿವಶರಣೆ ಅಕ್ಕಮಹಾದೇವಿ ತಾಯಿಯ ಸ್ಮರಣೋತ್ಸವ ನಿಮಿತ್ತದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತ ಶರಣರು ನುಡಿಯ ಸಿದ್ಧಾಂತಕ್ಕಿಂತ ನಡೆಯ ಜೀವನಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟರು. ಕಾಯಕದಲ್ಲಿ ತೊಡಗಿದ ವ್ಯಕ್ತಿಗೆ ಗುರು ಲಿಂಗ ಜಂಗಮದ ಹಂಗು ಇಲ್ಲವೆಂದು, ಸ್ವತಃ ದೇವರೂ ಸಹ ಕಾಯಕ ಮಾಡಬೇಕು. ಪರಿಶ್ರಮದ ಫಲ ಮಾತ್ರ ಶಿವನ ಒಲುಮೆಗೆ ಪಾತ್ರವಾಗಬಲ್ಲುದು ಎಂದು ಶರಣರು ಹೇಳಿದರು.

Contact Your\'s Advertisement; 9902492681

ಪ್ರಾಮಾಣಿಕ ದುಡಿಮೆಯ ಫಲವಾಗಿ ಬಂದ ಹಣವನ್ನು ಯಾವ ಪ್ರತಿಫಲ ಅಪೇಕ್ಷೆ ಇಲ್ಲದೆ ಸಮಾಜ ಮುಖಿ ಕೆಲಸಕ್ಕೆ ನೀಡುವುದೆ ದಾಸೋಹ. ದಾನದಲ್ಲಿ ನಾನು ಕೊಟ್ಟೆ ಎಂಬ ಅಹಂಭಾವ ಇದೆ. ಆದರೆ ದಾಸೋಹದಲ್ಲಿ ಶಿವನ ಸೊಮ್ಮು ಶಿವನಿಗೆ ಸಲ್ಲಿಸಿದ ಸಂತೃಪ್ತಿಯ ಭಾವವಿದೆ ಎಂದವರು ವಿವರಿಸಿದರು.

ಮೌಢ್ಯ ಕಂದಾಚಾರ ಹಾಗೂ ವೈದಿಕ ವ್ಯವಸ್ಥೆಯ ಮೂಲೋತ್ಪಾಟನೆಗಾಗಿ ಶರಣರು ವಚನಗಳನ್ನು ರಚಿಸಿದರು. ವಚನ ಅಂದರೆ ಅದು ಹೃದಯದ ಭಾಷೆ, ಭರವಸೆಯ ಮಾತು ಕೊಡುವುದು. ಪ್ರಾಮಾಣಿಕ ಅನಿಸಿಕೆಯನ್ನು ವ್ಯಕ್ತ ಪಡಿಸುವುದು ಎಂದವರು ಅನುಭಾವ ನೀಡಿದರು.

ಬಸವಮಾರ್ಗವನ್ನು ನನಗೆ ಪರಿಚಯಿಸಿದರು ಲಿಂಗಣ್ಣ ಸತ್ಯಂಪೇಟೆಯರು. ಬಸವಣ್ಣನವರ ಪರಿಚಯವಾದಂದಿನಿಂದ ಇಂದಿನವರೆಗೆ ಸಾಕಷ್ಟು ಮೌಢ್ಯದ ಆಚರಣೆಗಳನ್ನು ಬಿಟ್ಟು ಬಿಟ್ಟಿದ್ದೇನೆ. ನಿತ್ಯ ಬಸವಮಾರ್ಗದಲ್ಲಿ ನಡೆಯುತ್ತ ಸಾಕಷ್ಟು ಖುಷಿಯ ಜೀವನ ನಡೆಸಿದ್ದೇನೆ ಎಂದು ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಗುಂಡಪ್ಪ ಕಲಬುರ್ಗಿ ಅಭಿಪ್ರಾಯ ಪಟ್ಟರು.

ಬಸವಮಾರ್ಗ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ರಜಕೀಯ, ಸಾಮಾಜಿಕ ಸಂದಿಗ್ಧ ಸಂದರ್ಭದಲ್ಲಿ ನಾವು ಬಸವಮಾರ್ಗಿಯರಾಗಬೇಕಾದ ಅವಶ್ಯಕತೆ ಇದೆ. ಇಲ್ಲದೆ ಹೋದರೆ ನಾವು ಕೋಮುವಾದಕ್ಕೆ ,ಮತೀಯವಾದಕ್ಕೆ ಅಥವಾ ಮನುವಾದಕ್ಕೆ ಬಲಿಯಾಗಿ ನಮ್ಮ ಜೀವನವನ್ನು ಸುಖಾ ಸುಮ್ಮನೆ ಕಳೆದುಕೊಳ್ಳುತ್ತೇವೆ. ಆದ್ದರಿಂದ ನಾವೆಲ್ಲ ವಚನಗಳನ್ನು ಅಭ್ಯಸಿಸಲು ತೊಡಗಿಕೊಳ್ಳಬೇಕು ಎಂದು ತಿಳಿಸಿದರು.

ಸುರೇಶ್ ಅರುಣಿ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಕೊನೆಯಲ್ಲಿ ಗುರಣ್ಣ ಮದರಿ ವಂದನೆಗಳನ್ನು ತಿಳಿಸಿದರು. ಫಜಲುದ್ದೀನ್ ರಹಮಾನ ಹಾಗೂ ಬಸವಮಾರ್ಗದ ಚಿಣ್ಣರರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀಶೈಲ ಪಡಶೆಟ್ಟಿ ಜ್ಯೋತಿ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು.

ಯಲ್ಲಾರಲಿಂಗ ಹಾಗೂ ಪವಿತ್ರ ವೇದಿಕೆಯ ಮೇಲೆ ಇದ್ದರು. ಸಭೆಯ ಅಧ್ಯಕ್ಷತೆಯನ್ನು ಗುರುಮಠಕಲ್ಲ ಖಾಸಾ ಮಠದ ಪೂಜ್ಯ ಶ್ರೀ.ಶಾಂತವೀರ ಮಹಾಸ್ವಾಮೀಜಿ ವಹಿಸಿದ್ದರು.
ಸಭೆಯಲ್ಲಿ ಬಸವರಾಜ ಅರುಣಿ, ಶಿವಲಿಂಗಪ್ಪ ಸಾಹು,ಮರೆಪ್ಪ ಅಣಬಿ, ಷಣ್ಮುಖ ಸಾಹು, ಶಿವಕುಮಾರ ಆವಂಟಿ, ಬಸವರಾಜ ಆನೇಗುಂದಿ, ಅಕ್ಕಮಹಾದೇವಿ ಬಳಗ ಶಹಾಪುರ,ಅಡಿವೆಪ್ಪ ಜಾಕಾ, ಗುರುಬಸವಯ್ಯ ಗದ್ದುಗೆ, ಹೊನ್ನಾರಡ್ಡಿ ವಕೀಲರು, ನರಸಿಂಹ ವೈದ್ಯ, ಮಲ್ಲಿಕಾರ್ಜುನ ಸತ್ಯಂಪೇಟೆ, ಲಕ್ಷ್ಮಣ ಲಾಳಸೇರಿ, ಚೆನ್ನಪ್ಪ ಆನೇಗುಂದಿ, ಶರಣಪ್ಪ ಹುಣಸಗಿ ಕುಂಬಾರ, ಸಿದ್ದಲಿಂಗಪ್ಪ ಆನೇಗುಂದಿ, ಗಣೇಶ ನಗರದ ಸಮಸ್ತ ಬಸವ ಬಳಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here